*ಕೇಂದ್ರ ಘೋಷಿಸಿರುವ ಬರ ಪರಿಹಾರ ಬಹಳ ಕಡಿಮೆಯಿದೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: ಇಂದು ಕೇಂದ್ರ ಸರ್ಕಾರ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬರಪರಿಹಾರ ಘೋಷಣೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ಘೋಷಿಸಿರುವು ಪರಿಹಾರ ತುಂಬಾ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಾವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಕೇಳಿದ್ದು 18,172 ಕೋಟಿ ರೂಪಾಯಿ. 35 ಸಾವಿರ ಕೋಟಿ ಬೆಳೆ ನಷ್ಟವಾಗಿತ್ತು. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಎನ್‌ಡಿಆರ್‌ಎಫ್ ನಿಧಿಯಲ್ಲಿ 18ಸಾವಿರ ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇವು ಎಂದು ಹೇಳಿದರು.
2023ರ ಡಿ.19ರಂದು ಮೋದಿ ಅವರನ್ನು ಭೇಟಿ ಮಾಡಿ, ಪರಿಹಾರ ನೀಡುವಂತೆ ಮನವಿ ಮಾಡಿದ್ದೆ. ಡಿ.23ರಂದು ಸಚಿವ ಕೃಷ್ಣ ಬೈರೇಗೌಡ ಹಾಗೂ ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ಆದರೂ ಹಣ ಬಿಡುಗಡೆ ಮಾಡಿರಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಆದೇಶದ ನಂತರ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದರು.
ಕೇಂದ್ರ ಸರ್ಕಾರ ಬಹಳ ಕಡಿಮೆ ಹಣವನ್ನು ಬಿಡುಗಡೆ ಮಾಡಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಧಾನಿ ಮೋದಿ ಅವರು ಪ್ರಚಾರಕ್ಕಾಗಿ ನಾಳೆ ರಾಜ್ಯಕ್ಕೆ ಬರುತ್ತಾರೆ. ಹೀಗಾಗಿ, ಇಂದು ಬರ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಅವರು ಸುಳ್ಳನ್ನೇ ಮಾರುಕಟ್ಟೆ ಮಾಡಿದ್ದಾರೆ. ಅವರು ಇದುವರೆಗೆ ಸುಳ್ಳು ಹೇಳುವುದು ಬಿಟ್ಟರೇ ಬೇರೇನು ಮಾಡಿಲ್ಲ. ಜನರ ಭಾವನೆಗಳನ್ನು ಕೆರಳಿಸುವ ವಿಚಾರಗಳನ್ನು ಮಾತನಾಡುತ್ತಾರೆ. ಪ್ರಧಾನಿಯಾಗಿ ಇಂತಹ ಹೇಳಿಕೆ ನೀಡಿದರೆ, ಅವರ ಘನತೆಗೆ ಧಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ