*ಭ್ರಷ್ಟ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ; ಮೋದಿ, ಅಮಿತ್ ಶಾ ಆಟ ನಡೆಯಲಿಲ್ಲ ಎಂದ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಧನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದೊರೆತಿದ್ದು, ನಮ್ಮ ನಿರೀಕ್ಷೆಗೂ ಮೀರಿ ರಾಜ್ಯದ ಜನರು ಆಶಿರ್ವಾದ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಗೆ ಬಹುಮತ ನೀಡಿರುವುದಕ್ಕೆ ರಾಜ್ಯದ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದರು. ರಾಜ್ಯ ಹಾಗೂ ಕೇಂದ್ರದ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಧನ್ಯವಾದ ಎಂದರು.
ಬಿಜೆಪಿಯ ಭ್ರಷ್ಟ ಅಡಳಿತಕ್ಕೆ ಜನರು ನೊಂದಿದ್ದರು. ಹಗರಣಗಳ ಮೇಲೆ ಹಗರಣ, 40% ಕಮಿಷನ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಇದೆಲ್ಲದರಿಂದ ಬೇಸತ್ತ ಜನರು ಇಂದು ಕಾಂಗ್ರೆಸ್ ಗೆ ಆಶಿರ್ವಾದ ಮಾಡಿದ್ದಾರೆ. ರಾಜ್ಯದ ಜನತೆಗೆ ನಾವು ನೀಡಿದ ಭರವಸೆಯನ್ನು ಈಡೇರಿಸುತ್ತೇವೆ. ಸರ್ಕಾರ ರಚನೆಯ ಮೊದಲ ಸಂಪುಟದಲ್ಲಿಯೇ 5 ಗ್ಯಾರಂಟಿ ಭರವಸೆ ಜಾರಿ ಮಾಡುತ್ತೇವೆ ಎಂದು ಹೇಳಿದರು.
ನಾನು ಮಾನವತಾವಾದಿ. ಯಾವುದೇ ಜಾತಿಯ ವಿರೋಧಿಯಲ್ಲ, ಆದರೆ ಬಿಜೆಪಿಯವರು ನನ್ನನ್ನು ಲಿಂಗಾಯಿತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದರು. ಬಿಜೆಪಿ ಆಟ ನಡಿಯಲಿಲ್ಲ. ವರುಣಾದಲ್ಲಿ ಕಾರ್ಯಕರ್ತರ ಪರಿಶ್ರಮದಿಂದ ನಾನು ಗೆದ್ದಿದ್ದೇನೆ. ರಾಜ್ಯಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ನೂರು ಬಾರಿ ಬಂದು ರ್ಯಾಲಿ, ಸಮಾವೇಶ ಮಾಡಿದರೂ ಏನೂ ಆಗಲಿಲ್ಲ. ವರುಣಾದಲ್ಲಿ ನನ್ನನ್ನು ಸೋಲಿಸಲು, ಶಾ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಎಲ್ಲರೂ ಬಂದರು. ಬಿಜೆಪಿ ಸೋಲುವುದು ಖಚಿತ ಎಂದು ಗೊತ್ತಿದ್ದರೂ 150 ಸೀಟು ಗೆಲ್ಲುತ್ತೇವೆ ಎಂದು ಸುಳ್ಳು ಹೇಳಿದರು, ಎಲ್ಲಾ ರೀತಿಯ ಷಡ್ಯಂತ್ರ ಮಾಡಿದರೂ ಬಿಜೆಪಿ ಆಟ ರಾಜ್ಯದಲ್ಲಿ ನಡೆಯಲಿಲ್ಲ. ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ