Belagavi NewsBelgaum News

*ಚಿಕ್ಕೋಡಿ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಭೇಟಿ: ತುರ್ತು ಪರಿಹಾರ ಕಾರ್ಯಗಳಿಗೆ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗವೈ ಜಿಲ್ಲೆಯ ಪ್ರವಾಹ ಪೀಡಿತ ಪ್ರದೆಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಕಾಕ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದರು. ಬಳಿಕ ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪ್ರದೇಶಗಳು ಹಾಗೂ ಊರೊಳಗೆ ನೀರು ನುಗ್ಗಿರುವ ಪ್ರದೇಶಗಳನ್ನು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳಿಗೆ ತುರ್ತು ಪರಿಹಾರ ಕಾರ್ಯಗಳಿಗೆ ಸೂಚನೆ ನೀಡಿದರು.

ಈ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಗ್ರಾಮಗಳ ಖಾಯಂ ಸ್ಥಳಾಂತರಕ್ಕೆ ಚರ್ಚಿಸಿ ತೀರ್ಮಾನ

ಪ್ರತಿ ವರ್ಷ ಮಳೆಯಿಂದಾಗಿ ಜುಗುಳ ಹಾಗೂ ಮಂಗಾವತಿ ಗ್ರಾಮಗಳು ಪ್ರವಾಹಕ್ಕೆ ತುತ್ತಿಗುತ್ತಿರುವ ಹಿನ್ನಲೆಯಲ್ಲಿ ಈ ಗ್ರಾಮಗಳ‌ ಖಾಯಂ ಸ್ಥಳಾಂತರಕ್ಕೆ ಈ ಭಾಗದ ಜನಪ್ರತಿಧಿಗಳೊಂದಿಗೆ ಚರ್ಚಿಸಿ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದರು.

ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಸೋಮವಾರ (ಆ.5)ಕೃಷ್ಣಾ ನದಿ ಪ್ರವಾಹದಿಂದ ಬಾಧಿತವಾದಂತಹ
ಜುಗುಳ ಗ್ರಾಮ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮವಾದ ಕಿರಗಾಪುರ ನಡುವೆ ನಿರ್ಮಿಸಲಾದ ಸೇತುವೆ ಹಾಗೂ ಕೃಷ್ಣಾ ನದಿಯನ್ನು ಮುಖ್ಯಂಮತ್ರಿಗಳಾದ ಸಿದ್ಧರಾಮಯ್ಯನವರು ಪರಿಶೀಲಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಎಲ್ಲ‌ ಜಲಾಶಯಗಳು ತುಂಬಿರುತ್ತವೆ. ಮಹಾರಾಷ್ಟ್ರದಿಂದಲೂ ನೀರು ಬರುತ್ತಿರುವುದರಿಂದ ಈ ಮೂರು ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದಾಗಿ ಮುಳುಗಡೆ ಆಗುವುದರಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಾರೆ.

ಜುಗೂಳ, ಶಹಾಪುರ ಹಾಗೂ‌ ಮಂಗಾವತಿ ಗ್ರಾಮಗಳು ವಿಶೇಷವಾಗಿ ಪ್ರವಾಹ ಪೀಡಿತವಾಗುವ ಗ್ರಾಮಗಳಾಗಿದ್ದು ಈ ಮೂರು ಗ್ರಾಮಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮನೆಗಳಿದ್ದು ಲ, ಪ್ರವಾಹ ಸಂದರ್ಭದಲ್ಲಿ ತಾತ್ಕಾಲಿಕ ಪರಿಹಾರದ ಬದಲು ಖಾಯಂ ಅಗಿ ಈ ಗ್ರಾಮಗಳನ್ನು ಸ್ಥಳಾಂತರ ಮಾಡುವದು ಈ ಗ್ರಾಮಸ್ಥರ ಬೇಡಿಕೆಯಾಗಿದೆ.
ಕೃಷ್ಣಾ ನದಿ ಪ್ರವಾಹ ಬಂದಾಗ ಅನೇಕ ಅನಾಹುತಗಳಾಗುತ್ತವೆ. ಈ ಗ್ರಾಮಗಳನ್ನು ಖಾಯಂ ಆಗಿ ಸ್ಥಳಾಂತರ ಮಾಡಲು ಈ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಯೋಗ್ಯವಾದ ತೀರ್ಮಾನವನ್ನು ಕೈಗೊಳ್ಳಲಾಗುವದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಮಳೆ‌ ಜಾಸ್ತಿಯಾದಾಗ ಪ್ರವಾಹ ಬಂದಾಗ ಇಂತಹ ಪರಿಸ್ಥಿತಿಗಳು ಉದ್ಭವವಾಗುತ್ತವೆ ಈ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವದು.
ಕಷ್ಟದಲ್ಲಿರುವವರಿಗೆ ನಮ್ಮ ಸರ್ಕಾರದಿಂದ ಕೂಡಲೇ ಪರಿಹಾರ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಯಾರೂ ಕೂಡ ಆತಂಕ ಪಡಬಾರದು ಎಂದು ಹೇಳುವ ಮೂಲಕ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಬೆಳೆಹಾನಿ ಕುರಿತಂತೆ ಸಮೀಕ್ಷೆ‌ ಜರುಗಿಸಿ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ವಯ ಪರಿಹಾರ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು‌ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ತಿಳಿಸಿದರು.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರಾದ ರಾಜು ಕಾಗೆ ಅವರು ಮಾತನಾಡಿ, ಮಂಗಾವತಿ, ಶಹಾಪುರ ಹಾಗೂ ಜುಗುಳ ಗ್ರಾಮಸ್ಥರು ಪ್ರವಾಹದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಸ್ತ್ರತ ವಾಗಿ ತಿಳಿಸಲಾಗಿದ್ದು, ಗ್ರಾಮದ ಬಹು ಮುಖ್ಯ ಬೇಡಿಕೆಯಾದ ಗ್ರಾಮಗಳ ಸ್ಥಳಾಂತರ ಮಾಡಲು ವಿನಂತಿ ಮಾಡಲಾಗಿದ್ದು ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಹೇಳಿದರು.

ಸರಕಾರದ ದೆಹಲಿ ವಿಶೇಷ‌ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಅವರು ಮಾತನಾಡಿ, 2017ರಲ್ಲಿ ಐದು ಸೇತುವೆ ಮಂಜೂರಾಗಿದ್ದು ಆ ಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಲ್ಲಿ ಪ್ರವಾಹ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಶಾಸಕರುಗಳಾದ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷರಾದ ಲಕ್ಷ್ಮಣ ಚಿಂಗಲೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button