
ಪ್ರತಿಯೊಬ್ಬರೂ ವೃತ್ತಿ ಗೌರವ ಎತ್ತಿ ಹಿಡಿಯಬೇಕು
ಪ್ರಗತಿವಾಹಿನಿ ಸುದ್ದಿ; ಮೈಸೂರು: ಯಾವುದೇ ವೃತ್ತಿಯಾದರೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಶತಮಾನೋತ್ಸವ ಆಚರಿಸುತ್ತಿರುವ ಕೆ.ಆರ್.ಆಸ್ಪತ್ರೆ ನವೀಕೃತ ಸುಟ್ಟ ಗಾಯಗಳ ಚಿಕಿತ್ಸಾ ಕಟ್ಟಡ ಮತ್ತು ರೇಡಿಯಾಲಜಿ ವಿಭಾಗ ಹಾಗೂ ಎಂ.ಆರ್.ಐ ಯಂತ್ರೋಪಕರಣ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಅವರವರ ವೃತ್ತಿ ಘನತೆಯನ್ನು ಕಾಪಾಡಿಕೊಳ್ಳಬೇಕು. ವೈದ್ಯ ವೃತ್ತಿ ಬಹಳ ಶ್ರೇಷ್ಠವಾದದ್ದು. ನಮ್ಮ ತಪ್ಪಿನಿಂದ ಯಾವ ರೋಗಿಯೂ ಸಾಯಬಾರದು, ನರಳಬಾರದು ಎನ್ನುವ ವೃತ್ತಿ ಘನತೆ ಪ್ರತಿಯೊಬ್ಬ ವೈದ್ಯರಲ್ಲೂ ಇರಬೇಕು ಎಂದು ಕರೆ ನೀಡಿದರು.
ತಮ್ಮ ವಿದ್ಯಾರ್ಥಿ ಜೀವನದ ಆಸೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು, “ನನಗೂ ಏಪ್ರಾನ್ ಹಾಕೊಂಡು, ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡ್ಬೇಕು ಅನ್ನೋ ಆಸೆ ಇತ್ತು. ಕೆ.ಆರ್.ಮೆಡಿಕಲ್ ಕಾಲೇಜಿನ ಕ್ಯಾಂಟೀನ್ ಗೆ ನಾನು ಹೈಸ್ಕೂಲ್ ಓದುವಾಗ ಬರುತ್ತಿದ್ದೆ. ಆಗೆಲ್ಲಾ ನನಗೆ ಈ ಆಸೆ ಬರುತ್ತಿತ್ತು. ಆದರೆ ನನಗೆ ಮೆಡಿಕಲ್ ಸೀಟೇ ಸಿಗಲಿಲ್ಲ. ಸೀಟು ಸಿಕ್ಕಿದ್ದರೆ ವೈದ್ಯನಾಗುತ್ತಿದ್ದೆ, ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ನೆನಪಿಸಿಕೊಂಡರು.
ಕೆ.ಆರ್.ಮೆಡಿಕಲ್ ಕಾಲೇಜು ಸಾವಿರಾರು ವೈದ್ಯರನ್ನು ಈ ದೇಶಕ್ಕೆ ಕೊಟ್ಟಿದೆ. ದೇಶದ ನಾನಾ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲೂ ಈ ಕಾಲೇಜಿನಲ್ಲಿ ಸಿದ್ದಗೊಂಡ ವೈದ್ಯರು ವೃತ್ತಿ ಘನತೆ ಹೆಚ್ಚಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಆರ್.ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸೋಣ. ಇದಕ್ಕೆ ಅಗತ್ಯವಾದ ಎಲ್ಲಾ ಸಹಕಾರವನ್ನು ಸರ್ಕಾರ ನೀಡಲಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್ .ಸಿ ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ತಿಮ್ಮಯ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ಸುಜಾತಾ ರಾಥೋಡ್ ಸೇರಿ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ