ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರು
ಪ್ರಗತಿವಾಹಿನಿ ಸುದ್ದಿ: 5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕಲಬುರಗಿ ನಗರದ ಗ್ರ್ಯಾಂಡ್ ಹೋಟೆಲ್ ನಲ್ಲಿ 2024ರ ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದರು.
ಮೊದಲ ಹಂತದ ಚುನಾವಣೆ ಮುಗಿದಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವರದಿ ಬಂದಿದೆ. ಎಲ್ಲಾ ಅಭ್ಯರ್ಥಿಗಳು ಹಾಗೂ ಜಿಲ್ಲಾ ಸಚಿವರೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆಂದು ಹೇಳಿದ್ದಾರೆ ಎಂದರು.
ಪ್ರಧಾನ ಮಂತ್ರಿ ಸುಳ್ಳಗಳ ಮಾರುಕಟ್ಟೆ ತೆರೆದಿದ್ದಾರೆ.
ಚುನಾವಣೆಯಲ್ಲಿ ಕೇಂದ್ರ ಸರ್ಕಾರದ 10 ವರ್ಷಗಳ ವೈಫಲ್ಯ ನಮ್ಮ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪ ಮಾಡುತ್ತಿದ್ದೇವೆ. ಜನರು ಆಸಕ್ತಿಯಿಂದ ನಮ್ಮ ಮಾತುಗಳನ್ನು ಆಲಿಸಿ, ಉತ್ಸಾಹವನ್ನು ತೋರುತ್ತಿದ್ದಾರೆ ಎನ್ನುವುದು ಪ್ರಚಾರದಲ್ಲಿ ಎದ್ದು ಕಾಣುತ್ತಿದೆ. ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿ ಸುಳ್ಳಗಳ ಮಾರುಕಟ್ಟೆ ತೆರೆದಿದ್ದಾರೆ. ಹಿಂದುಳಿದವರಿಗೆ ಮೀಸಲಾತಿ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.
ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರು
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ. ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ. 1992 ನೇ ಇಸವಿಯಲ್ಲಿ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠವು ಮಂಡಲ್ ಆಯೋಗದ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡಿದ್ದು, ಮೀಸಲಾತಿಯ ಸೀಲಿಂಗ್ ಎಷ್ಟಿರಬೇಕೆಂದು ಕೂಡ ಹೇಳಿದೆ. ಮೀಸಲಾತಿ 50% ಗಿಂತ ಹೆಚ್ಚಿರಬಾರದು ಎಂದು ಹೇಳಿದ್ದಾರೆ. ಸಂವಿಧಾನದಲ್ಲಿಲ್ಲದಿದ್ದರೂ ಸೀಲಿಂಗ್ ನಿಗದಿ ಮಾಡಿದ್ದಾರೆ. ಮಂಡಲ್ ಆಯೋಗದ ವರದಿ ಜಾರಿಯಾಗಿದ್ದು, ಕೇಂದ್ರ ಮತ್ತು ರಾಜ್ಯಗಳಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಬೇಕೆಂದೂ ಹೇಳಿದೆ. ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರು. ಶಾಲಾ ಕಾಲೇಜುಗಳ ಮಕ್ಕಳನ್ನು ಎತ್ತಿ ಕಟ್ಟಿ ಇದನ್ನು ವಿರೋಧಿಸಲು ಹೇಳಿ ಆತ್ಮಹತ್ಯೆಗೆ ಪ್ರೇರೇಪಿಸಿದರು.
ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ
ಆದ್ವಾನಿಯವರು ಅದಕ್ಕೋಸ್ಕರ ರಥಯಾತ್ರೆಯನ್ನು ಹಮ್ಮಿಕೊಂಡಿದ್ದರು. ಮೊದಲಿನಿಂದಲೂ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅರ್ಜುನ್ ಸಿಂಗ್ ಅವರು ಆಗ ಮಾನವ ಸಂಪನ್ಮೂಲ ಸಚಿವರಾಗಿದ್ದರು. ದೇಶಾದ್ಯಂತ. ಐ ಐ ಟಿ, ಐ ಐ ಎಂ ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿ ಮಾಡಿದರು. ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ 73, 74 ನೇ ತಿದ್ದುಪಡಿ ಮಾಡಿದರು. 73 ನೇ ತಿದ್ದುಪಡಿ ಮೂಲಕ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಹಿಂದುಳಿದವರಿಗೆ ಮೀಸಲಾತಿ ತಂದರು. ನರಸಿಂಹರಾಯರು ಪ್ರಧಾನಿ ಮಂತ್ರಿಗಳಾಗಿದ್ದಾಗ ಜಾರಿಗೆ ಬಂತು. ಓಬಿಸಿ 2 (ಎ) ಮತ್ತು (ಬಿ )ಎಂದು ಮೀಸಲಾತಿ ತಂದು ಮಹಿಳೆಯರಿಗೆ 33% ಮೀಸಲಾತಿ ತಂದೆವು. ಹಿಂದುಳಿದವರಿಗೆ 27.4% ಓಬಿಸಿ (ಎ) ಹಾಗೂ 6.6% ಓಬಿಸಿ (ಬಿ) ಯವರಿಗೆ ಮಾಡಲಾಯಿತು. ಓಬಿಸಿ (ಎ) ನಲ್ಲಿ ಮುಸಲ್ಮಾನರನ್ನು ಸೇರಿಸಲಾಯಿತು ಎಂದರು.
ಸುಪ್ರೀಂ ಕೋರ್ಟ್ ಮೀಸಲಾತಿ ನೀಡಿಕೆಯನ್ನು ಎತ್ತಿಹಿಡಿದಿದೆ
ರಾಮ ಜೋಯಿಸರು ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದರು. ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ನೀಡಿರುವ ಮೀಸಲಾತಿಯನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ರ‍್ಜಿ ತಿರಸ್ಕೃತಗೊಂಡಿತು. ಸುಪ್ರೀಂ ಕೋರ್ಟ್ ಕೂಡ ಈ ಮೀಸಲಾತಿಯನ್ನು ಎತ್ತಿಹಿಡಿಯಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಚಿನ್ನಪ್ಪ ರೆಡ್ಡಿ ವರದಿಯಂತೆ ಮೀಸಲಾತಿ ಶಿಫಾರಸ್ಸು ಮಾಡಲಾಗಿ, ದೇವೇಗೌಡರ ಮುಖ್ಯಮಂತ್ರಿಗಳ ಅವಧಿಯಲ್ಲಿ ಜಾರಿಗೊಳಿಸಲಾಯಿತು ಎಂದರು.
ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ
ಮುಸಲ್ಮಾನರಿಗೆ ಮೀಸಲಾತಿ ಕಳೆದ 30 ವರ್ಷದಿಂದ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲು ಮುಸಲ್ಮಾನರಿಗಿದ್ದ ಮೀಸಲಾತಿಯನ್ನು ತೆಗೆದು ಹಾಕಿದರು. ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16 ನಂತೆ ನೀಡಲಾಗಿದೆ. ಬಸವರಾಜ ಬೊಮ್ಮಾಯಿಯವರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಮುಸಲ್ಮಾನರಿಗೆ ನೀಡುವ ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆಯನ್ನು ಬರೆದುಕೊಟ್ಟರು. ನರೇಂದ್ರ ಮೋದಿಯವರ ಹೇಳಿಕೆ ಹಾಗೂ ಬಿಜೆಪಿ ಪರ ಇರುವ ಜಾಹಿರಾತು ಸುಳ್ಳಿನಿಂದ ಕೂಡಿದೆ ಎಂದರು.
ಮುಸಲ್ಮಾನರನ್ನು ಪ್ರತ್ಯೇಕಿಸಿ ಮತ ಧ್ರುವೀಕರಣ ಮಾಡುತ್ತಿರುವ ಮೋದಿಯವರ ಕಾರ‍್ಯ ಸಂವಿಧಾನ ಬಾಹಿರ ಹಿಂದುಳಿದವರಿಗೆ ನೀಡಲಾದ ಮೀಸಲಾತಿಯ್ನು ರದ್ದುಪಡಿಸಿ ಮುಸಲ್ಮಾನರಿಗೆ ನೀಡಲಾಗುತ್ತದೆ ಎಂಬುದು ಅಪ್ಪಟ ಸುಳ್ಳು. ರಾಜಕೀಯವಾಗಿ ಬಿಜೆಪಿಯವರು ಈ ರೀತಿ ಮಾಡಲಾಗುತ್ತಿದೆ. ಮತಗಳನ್ನು ಧ್ರುವೀಕರಣ ಮಾಡುವ ಉದ್ದೇಶದಿಂದ ಮೋದಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ. ಎಲ್ಲ ಭಾರತೀಯರ ರಕ್ಷಣೆ ಮಾಡುವುದು ಪ್ರಧಾನಮಂತ್ರಿಗಳ ರ‍್ತವ್ಯ. ಮುಸಲ್ಮಾನರನ್ನು ಪ್ರತ್ಯೇಕಿಸಿ ಮತಗಳ ಧ್ರುವೀಕರಣ ಮಾಡುತ್ತಿರುವ ಮೋದಿಯವರ ಕರ‍್ಯ ಸಂವಿಧಾನ ಬಾಹಿರವಾದುದು. ಮೀಸಲಾತಿ ನೀಡಿಕೆ ಸಂವಿಧಾನಿಕವಾಗಿ ಸರಿಯೆಂದು ಸುಪ್ರೀಂ ಕೋರ್ಟ ತಿಳಿಸಿದ್ದರೂ, ಮೋದಿಯವರು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೀಸಲಾತಿಯನ್ನು ವಿರೋಧಿಸುವ ಬಿಜೆಪಿಯವರ ಧೋರಣೆಯನ್ನು ನಾನು ಖಂಡಿಸುತ್ತೇನೆ. ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ