*ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಖಳನಾಯಕ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜಕೀಯದಲ್ಲಿ ಯಾರಾದರೂ ಖಳನಾಯಕ ಇದ್ದರೆ ಅದು ಹೆಚ್.ಡಿ.ಕುಮಾರಸ್ವಾಮಿ ಅವರೇ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವವರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ ಮುಖ್ಯ ಮಂತ್ರಿಗಳನ್ನು ಮಹಾಭಾರತದ ಎಲ್ಲಾ ಖಳನಾಯಕರಿಗೆ ಹೋಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕ್ರಿಕೆಟ್ ನೋಡಲು ಹೋಗಿದ್ದರು ಎನ್ನುವ ಅವರು ಸರ್ಕಾರ ಬಿದ್ದುಹೋಗುವಾಗ ಅಮೆರಿಕದಲ್ಲಿ ಒಂದು ವಾರ ಕೂತಿದ್ದರು. ಒಂದು ವರ್ಷ 2 ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲಕಳೆಯುತ್ತಿದ್ದರು. ಇವರು ನಮಗೆ ಹೇಳಿಕೊಡಬೇಕೆ ಎಂದರು.
ತಪ್ಪುದಾರಿಗೆ ಎಳೆಯುತ್ತಿದ್ದಾರೆ
ಕುಮಾರಸ್ವಾಮಿ ಅವರ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸಿದ್ದು, ಅದನ್ನು ಅವರು ಒಪ್ಪಿಕೊಳ್ಳಲಿ ಎಂದಿರುವ ಬಗ್ಗೆ ಮಾತನಾಡಿ ಅದನ್ನು ಅವರು ವಿಧಾನಮಂಡಲದ ವಿಶ್ವಾಸ ಮತಯಾಚನೆಯಾದ ಸಂದರ್ಭದಲ್ಲಿ ಉತ್ತರ ನೀಡಿದಾಗ ಈ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದಿರುವುದು ವಿಧಾನಮಂಡಲದ ರೆಕಾರ್ಡ್ ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ.ಈಗ ಬೇರೆ ತರ ಹೇಳುತ್ತಿದ್ದಾರೆ. ಹಾಗಾದರೆ ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಶಾಸಕರು, ಸಚಿವರನ್ನು ಭೇಟಿ ಮಾಡದೆ ಹೋಟೆಲಿನಲ್ಲಿ ಕುಳಿತಿದ್ದರು ಎಂದರು.
ಬಿಜೆಪಿ ಅವರಿಗಿಂತ ಹೆಚ್.ಡಿ.ಕುಮಾರಸ್ವಾಮಿ ಹೆಚ್ಚು ಹತಾಶರಾಗಿದ್ದಾರೆ
ಬಿಜೆಪಿ ಗಿಂತಲೂ ಕುಮಾರಸ್ವಾಮಿ ಅವರು ಹೆಚ್ಚು ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜಕೀಯವಾಗಿ ಹತಾಶರಾದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೆಚ್.ಡಿ ಕುಮಾರಸ್ವಾಮಿ ಅವರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿಗಿಂತ ಜಾಸ್ತಿ ಹತಾಶರಾಗಿರುವುದು ಕುಮಾರಸ್ವಾಮಿ. ಬಿಜೆಪಿ ಜೊತೆ ಸೇರದೇ ಹೋಗಿದ್ದಾರೆ ಒಂದು ಸ್ಥಾನವನ್ನೂ ಗೆಲ್ಲಲು ಆಗುತ್ತಿರಲಿಲ್ಲ. ಕುರುಡರು, ಹೆಳವರ ರೀತಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದಾರೆ ಎಂದರು.
ಚುನಾವಣೆ ಪ್ರಯುಕ್ತ ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ
ಹೈ ಕಮಾಂಡಿಗೆ ದೂರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಪಂಚ ರಾಜ್ಯಗಳ ಚುನಾವಣೆ ಬಂದಿರುವುದರಿಂದ ನೆಪಮಾಡಿಕೊಂಡು ಸುಳ್ಳು ಹೇಳುತ್ತಾರೆ. ಇಂದಿನವರೆಗೆ ನಾವು ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ. ಅದಕ್ಕಾಗಿ ಯಾರ ಬಳಿಯೂ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯುತ್ ಕ್ಷಾಮ: ಕೃತಕ ಅಭಾವವಲ್ಲ
ವಿದ್ಯುತ್ ಕ್ಷಾಮ ನೀಗಿಸಲು ಹೊರಗಿನಿಂದ ವಿದ್ಯುತ್ ಕೊಳ್ಳುವುದು, ಎಲ್ಲಾ ಸಕ್ಕರೆ ಕಾರ್ಖಾನೆ ಗಳು ಪ್ರಾರಂಭವಾಗುತ್ತಿದ್ದು, ಅಲ್ಲಿ ಕೋಜನರೇಷನ್ ಆಗುತ್ತದೆ. ಅದರಿಂದ ಕೊಂಡುಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಸಂಸ್ಥೆಗಳು ರಾಜ್ಯಕ್ಕೆ ನೀಡಬೇಕೆಂದು ಆದೇಶ ಹೊರಡಿಸಿದ್ದೇವೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳುವಂತೆ ಇದು ಕೃತಕವಾಗಿ ಆಗಿರುವ ಅಭಾವವಲ್ಲ. 2 ಬಾರಿ ಮುಖ್ಯಮಂತ್ರಿಯಾದವರು ಸತ್ಯ ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ.
ಬೆಂಗಳೂರಿಗೆ ರಾಮನಗರ ಸೇರ್ಪಡೆ ಹೇಳಿಕೆ: ಡಿಸಿಎಂ ಜೊತೆ ಚರ್ಚೆ
ರಾಮನಗರವನ್ನು ಬೆಂಗಳೂರಿಗೆ ಸೇ ರ್ಪಡೆ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಗಳು ಈ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದರು.ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದರು.
ಬಿಜೆಪಿಗೆ ಮಾನ , ಮರ್ಯಾದೆ ಇದೆಯೇ
ಬಿಜೆಪಿ ಎಟಿಎಂ ಸರ್ಕಾರ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಸುಳ್ಳು ಆರೋಪ. ಆಪರೇಷನ್ ಕಮಲ ಕೈಗೊಂಡು 25 ಕೋಟಿ ಹಣ ನೀಡಿ, 25.ಕೋಟಿ ಚುನಾವಣೆ ಗೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು. ಇವರಿಗೆ ಏನಾದರೂ ಮಾನ , ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು. ಕರ್ನಾಟಕ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿರುವುದಕ್ಕೆ ಯಾರು ಜವಾಬ್ದಾರರು. 5 ವರ್ಷಗಳಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. . ಬರದ ಸಂದರ್ಭದಲ್ಲಿ ವಿದ್ಯುತ್ ತೊಂದರೆಯಾಗಿರುವುದಕ್ಕೆ ಬಿಜೆಪಿ ಕಾರಣ. 16000 ಮೆಗಾ ವ್ಯಾಟ್ ಸೌರ ವಿದ್ಯುತ್ ನಾವು ಉತ್ಪಾದನೆ ಮಾಡಿದ್ದೆವು. ಬಿಜೆಪಿ ಯವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ. ಏನೂ ಮಾಡಿದ್ದಾರೆ 3 ವರ್ಷ 10 ತಿಂಗಳಲ್ಲಿ ಎಂದು ಪ್ರಶ್ನಿಸಿದರು.
30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳು
ಹಣವಿಲ್ಲದಿದ್ದರೂ ಕೆಲಸ ಮಂಜೂರು ಮಾಡಿ, ಟೆಂಡರ್ ಕರೆದು ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದ್ದಾರೆ. 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ. ನಮ್ಮ ಕಾಲದ ಹಾಗೂ ಬಿಜೆಪಿ ಕಾಲದ ಆರ್ಥಿಕಸ್ಥಿತಿ ಕುರಿತು ಶ್ವೇತಪತ್ರವನ್ನು ವಿಧಾನಮಂಡಲದಲ್ಲಿ ಮಂಡಿಸುತ್ತೇನೆ. ರಾಜ್ಯ ಹಾಳು ಮಾಡಿದ್ದಕ್ಕೆ ಜನ ತಿರಸ್ಕಾರ ಮಾಡಿದ್ದಾರೆ. ಈಗ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಾರೆ ಹೊರತು ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ
ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಚಿವರಾಗಬೇಕೆಂದು ಬಯಸುವುದರಲ್ಲಿ ತಪ್ಪಿಲ್ಲ.ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ
ಜಾತಿಜನಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯ ನಂತರ ಅವರ ಮೇಲಿನ ವಿಪಕ್ಷಗಳ ಆರೋಪಗಳು ಹೆಚ್ಚಾಗಿದೆ ಎಂಬ ಬಗ್ಗೆ ಉತ್ತರಿಸಿ ರಾಜಕೀಯ ವಾಗಿ ಹತಾಶರಾಗಿಮಾತನಾಡುತ್ತಾರೆ. ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ