Kannada NewsKarnataka NewsLatest

ದೇವೇಗೌಡರದ್ದು ನೀಚರಾಜಕಾರಣ ಎಂದ ಸಿದ್ದರಾಮಯ್ಯ: ವೀಡಿಯೋ ವೈರಲ್

ದೇವೇಗೌಡರದ್ದು ನೀಚರಾಜಕಾರಣ ಎಂದ ಸಿದ್ದರಾಮಯ್ಯ: ವೀಡಿಯೋ ವೈರಲ್

https://youtu.be/8qUCAB47nEs

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರೂ ಅಲ್ಲ ಎನ್ನುವ ಮಾತಿದೆ.  ಇದು ಹಲವು ಬಾರಿ ಸಾಭೀತಾಗಿದೆ. ರಾಜ್ಯದಲ್ಲಿ ಪ್ರಸ್ತುತವಿರುವ ಸಮ್ಮಿಶ್ರ ಸರಕಾರ ಈ ಮಾತಿಗೆ ಅತ್ಯಂತ ತಾಜಾ ಮತ್ತು ಒಳ್ಳೆಯ ಉದಾಹರಣೆ.

ಇದಕ್ಕೆ ಪೂರಕವೆನ್ನುವಂತೆ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿದ್ದರಾಮಯ್ಯ ಈ ಹಿಂದೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಹಿಗ್ಗಾಮುಗ್ಗ ಜಾಲಾಡಿದ ವೀಡಿಯೋ ಇದು.

ಈ ವಿಡಿಯೋದಲ್ಲಿ ಕಳೆದ ಅಸೆಂಬ್ಲಿ ಚುನಾವಣೆಗೂ ಮುನ್ನ ಅಪ್ಪಮಕ್ಕಳನ್ನು ಮನಸಾರೆ ಟೀಕಿಸಿದ್ದ ಸಿದ್ದರಾಮಯ್ಯ, ದೇವೇಗೌಡ ತಮ್ಮ ರಾಜಕೀಯದುದ್ದಕ್ಕೂ ಹೇಗೆ ನೀಚ ರಾಜಕಾರಣ ಮಾಡಿದ್ದಾರೆ ಎಂಬುದನ್ನು ವಿವರಿಸಿ, ಇದಕ್ಕಿಂತ ನೀಚ ರಾಜಕಾರಣ ಬೇಕೇ ಎಂದು ಪ್ರಶ್ನಿಸಿದ್ದಾರೆ.

ಅವರ ಅಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಈಗ ಅವರನ್ನೇ ಮುಖ್ಯಮಂತ್ರಿಯನ್ನಾಗಿ  ಮಾಡಿದ್ದಾರೆ.

ಸಿದ್ದರಾಮಯ್ಯ ಆಡಿದ ಮಾತುಗಳು ಹೀಗಿವೆ –

ರಾಜ್ಯದ ಜನರು ದೇವೇಗೌಡರು ಹಿಂದೆ ಆಡಿದ ಆಟವನ್ನು ಮರೆತಿದ್ದಾರೆ ಅಂದುಕೊಂಡಿದ್ದಾರೆ. ಬೊಮ್ಮಾಯಿ ಸರಕಾರವನ್ನು ಉರುಳಿಸಿದವರು ಯಾರು ಸನ್ಮಾನ್ಯ ದೇವೇಗೌಡರೇ.. ಹದಿನೇಳು ಜನ ಶಾಸಕರನ್ನು ಎತ್ತಿಕಟ್ಟಿ, ರಾಜ್ಯಪಾಲರ ಬಳಿ ಕಳುಹಿಸಿ, ಬೊಮ್ಮಾಯಿ ಸರಕಾರವನ್ನು ನೀವು ಬೀಳಿಸಲಿಲ್ಲವೇ?
ಆಗ ನೀವು ಯಾವ ಪಕ್ಷದಲ್ಲಿ ಇದ್ರಿ, ನಿಮಗೂ ಬೊಮ್ಮಾಯಿಗೂ ಸಿಎಂ ಹುದ್ದೆಗೆ ಸ್ಪರ್ಧೆ ನಡೆಯಿತು. ಆಗ ನಡೆದ ಚುನಾವಣೆಯಲ್ಲಿ ನೀವು ಸೋತ್ರಿ. ಬೊಮ್ಮಾಯಿ ಗೆದ್ದರು. ಅವತ್ತಿನಿಂದ ನೀವು, ಹೇಗಾದರೂ ಮಾಡಿ ಅವರನ್ನು ಸೋಲಿಸಲು ಸಂಚು ಹಾಕುತ್ತಿದ್ದೀರಿ, ಹೊಂಚು ಹಾಕಿ ಬೊಮ್ಮಾಯಿ ಸರಕಾರವನ್ನು ಬೀಳಿಸಿದ ಅಪಖ್ಯಾತಿ ನಿಮಗಿದೆ. ಆದರೆ, ಅಂತಹ ನೀಚ ರಾಜಕಾರಣವನ್ನು ನಾನು ಎಂದಿಗೂ ಮಾಡಿಲ್ಲ ಎನ್ನುವುದನ್ನು ಗೌಡ್ರಿಗೆ ತಿಳಿಸಲು ಬಯಸುತ್ತೇನೆ.
ಬೇರೆಯವರ ಬಗ್ಗೆ ಮಾತನಾಡುವಾಗ ಇತಿಹಾಸವನ್ನೊಮ್ಮೆ ಅರಿತು ಮಾತಾಡಲಿ. ಗೌಡ್ರು ಸಜಾಪ (ಸಮಾಜವಾದಿ ಜನತಾ ಪಕ್ಷ) ಮಾಡಿಕೊಂಡು ಹೋದರು. ಭೈರೇಗೌಡ ಮತ್ತು ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರು ಚುನಾವಣೆ ಗೆದ್ದಿದ್ದರು, ಖುದ್ದು ಗೌಡ್ರೂ ಸೋತಿದ್ದರು. ಆಮೇಲೆ ನೀವು ಜನತಾದಳಕ್ಕೆ ಬಂದ್ರಿ, ಅದಕ್ಕೆ ರಾಮಕೃಷ್ಣ ಹೆಗಡೆ ಕಾರಣ.
ಕಾಂಗ್ರೆಸ್ಸಿನಿಂದ ಬೆಂಬಲದಿಂದ ನೀವು ಪ್ರಧಾನಿಯಾದ್ರಿ. ಪ್ರಧಾನಿಯಾದ ಮೇಲೆ ಹೆಗಡೆಯವನ್ನು ಪಕ್ಷದಿಂದ ಉಚ್ಚಾಟಿಸಿದ್ರಿ. ಇದಕ್ಕಿಂತ ನೀಚ ರಾಜಕಾರಣಕ್ಕೆ ಇನ್ನೊಂದು ಸಾಕ್ಷಿಬೇಕಾ? ಅಂದು ನೀವು ಸಿಎಂ ಆಗಲು ಹೆಗಡೆ, ನಾನು, ಬೊಮ್ಮಾಯಿ, ಜೆ ಎಚ್ ಪಟೇಲ್ ಕಾರಣ, ಸಿಎಂ ಆಗದೇ ಇದ್ದಲ್ಲಿ, ನೀವು ಪ್ರಧಾನಿಯಾಗುತ್ತಿದ್ದೀರಾ?

ಇತಿಹಾಸವನ್ನು ತಿರುಚುವ ಕೆಲಸಕ್ಕೆ ಗೌಡ್ರು ಕೈಹಾಕಬಾರದು ಎಂದು ಹೇಳಲು ಬಯಸುತ್ತೇನೆ. ನಾನು ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಎಂದೂ ಇಂತಹ ಕೆಳಮಟ್ಟದ ರಾಜಕಾರಣ ಮಾಡಿದವನಲ್ಲ”.  ಅಂದು ಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಇಂದು ಅವರೊಂದಿಗೆ ಕೈಜೋಡಿಸಿರುವ  ಸಂದರ್ಭದಲ್ಲಿ  ಈ ವಿಡಿಯೋ ವೈರಲ್ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button