Kannada NewsLatestSports

ಕನ್ನಡ ವಿರೋಧಿ ನಿಲುವಿಗೆ ಮೌನ ಪ್ರತಿಭಟನೆ

ಕನ್ನಡ ವಿರೋಧಿ ನಿಲುವಿಗೆ ಮೌನ ಪ್ರತಿಭಟನೆ
ಕನ್ನಡ ದೀಪ ಹಚ್ಚುವವರಾರು!

ಅಖಂಡ ಕರ್ನಾಟಕ ನಿರ್ಮಾಣದಲ್ಲಿ ಉತ್ತರ ಕರ್ನಟಕದವರ ಪಾಲು ಬಹು ದೊಡ್ಡದಾಗಿದೆ. ಈ ಭಾಗದ ಲೇಖಕರ, ಕವಿಗಳ, ಪತ್ರಕರ್ತರ ಕೊಡುಗೆ ಅನನ್ಯವಾಗಿದೆ. ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾಣಿಕೆ ಅನನ್ಯವಾದದ್ದು.

1940 ರ ದಶಕದಲ್ಲಿ ಬೆಳಗಾವಿಯಂಥ ಸಂವೇದನಾಶೀಲ ಪ್ರದೇಶ, ಕನ್ನಡ ವಿರೋಧಿ ವಾತಾವರಣದಲ್ಲಿ ನೆಲೆನಿಂತು ನಾವು ಕನ್ನಡಿಗರು ಕನ್ನಡ ದೀಪ ಹಚ್ಚುವ ಸಾಮರ್ಥ್ಯ ಪಡೆದಿದ್ದೇವೆ ಎಂದು ಹಾಡಿದ ಪ್ರಸಿದ್ಧ ಕವಿ ಡಾ. ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ” ಇಂದು ಅರ್ಥಕಳೆದುಕೊಳ್ಳುತ್ತಿದೆ. ನಾಡುನುಡಿಗಳಿಗಾಗಿ ಹೋರಾಟ ಮಾಡಿ ಆಮರಣ ಉಪವಾಸ ಮಾಡಿದ ಅದರಗುಂಚಿ ಶಂಕರಗೌಡರು ಏನಾದರು ಎಂಬುದು ಇಂದಿಗೂ ತಿಳಿದಿಲ್ಲ!

ಕರ್ನಾಟಕ ರಾಜ್ಯ ನಿರ್ಮಾಣವಾಗಿ 63 ವರ್ಷಗಳು ಕಳೆದವು. ಕನ್ನಡ ಉಳಿದರೆ ಕರ್ನಾಟಕದಲ್ಲಿ, ಕನ್ನಡ ಬೆಳೆದರೆ ಕರ್ನಟಕದಲ್ಲಿ ಮಾತ್ರ. ಆದರೆ ಇಂದು ಕನ್ನಡ ಕರ್ನಾಟಕದಲ್ಲಿ ತನ್ನ ನೆಲೆ ಕಳೆದುಕೊಳ್ಳುತ್ತಿದೆ. ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಬೇಡಿಕೆ ಕಡಿಮೆಯಾಗಿ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಅನಾಥವಾಗುತ್ತಿದೆ.

ನ್ಯಾಯಾಲಯ ಶಿಕ್ಷಣ ಪೋಷಕರ ಹಕ್ಕು ಎಂದು ಹೇಳಿದೆ. ಪೋಷಕರು ತಾವು ಬಯಸಿದ ಮಾಧ್ಯಮದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬಹುದು. ಪೋಷಕರಲ್ಲಿ ಇಂಗಿಷ್ ವ್ಯಾಮೋಹ ಹೆಚ್ಚಾಗಿದೆ. ಸಾಮಾನ್ಯರಲ್ಲಿ ಕನ್ನಡ ಬಳಕೆ ಕಡಿಮೆ ಆಗಿದೆ.

ನಮ್ಮ ಕನ್ನಡದ ಖಾಸಗಿ ಟಿ.ವ್ಹಿ. ಚಾನಲ್‌ಗಳ ನಿರೂಪಕರು ಹಾಗೂ ಚರ್ಚೆಗಳಲ್ಲಿ ಭಾಗವಹಿಸುವ ಪುಣ್ಯಾತ್ಮರಿಗೂ ಕನ್ನಡ ಬೇಡವಾಗಿದೆ. ಆಂಕರ್ಸ ಅರ್ಥಾತ್ ನಿರೂಪಕರು ಇಂಗ್ಲೀಷ್ ಬಳಸುವುದೇ ಹೆಗ್ಗಳಿಕೆ ಎಂದು ಭಾವಿಸಿದಂತೆ ಇದೆ.

ಇದಕ್ಕೆ ಬರೆ ಎಳೆದಂತೆ  ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡುವ ಸಾವಿರ ಶಾಲೆಗಳನ್ನು ಪ್ರಾರಂಭಿಸಿ ಕನ್ನಡ ನಿರ್ನಾಮಗೊಳಿಸಲು ಪಣತೊಟ್ಟಿದೆ.  ಸಿದ್ಧರಾಮಯ್ಯನವರ ವಿರೋಧವಿದ್ದಾಗಲೂ ಎಚ್.ಡಿ.ರೇವಣ್ಣ ಇವರ ಆಗ್ರಹದ ಮೇರೆಗೆ ಈ ಶಾಲೆಗಳನ್ನು ಪ್ರಾರಂಭಿಸಿದ್ದಾರೆ.

ಇದನ್ನು ನಮ್ಮ ಖ್ಯಾತನಾಮ ಬಂಡಾಯ ಸಾಹಿತಿಗಳು, ಪ್ರಗತಿಶೀಲರು, ಸರಕಾರಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತ ಸ್ವಾರ್ಥಸಾಧಿಸುತ್ತ ಬಂದವರಲ್ಲಿ ಕೆಲವರಾದರೂ ಇದನ್ನು ಪ್ರತಿಭಟಿಸುತ್ತಾರೆಂದು ನಂಬಿದ್ದೆವು. ಕನ್ನಡಕ್ಕಾಗಿ ಜೀವತೆತ್ತವರ ನೆಲದಲ್ಲಿ, ಗೋಕಾಕ ಚಳುವಳಿ ಮಾಡಿ ಸರಕಾರಕ್ಕೆ ಎಚ್ಚರ ಮೂಡಿಸಿದ ನಾಡಿನಲ್ಲಿ ಕನ್ನಡಕ್ಕೆ ಇಂದಿನ ಸರಕಾರ ಕೊನೆಯ ಮೊಳೆ ಹೊಡೆದಿದೆ.

ಜನ್ಮಕೊಟ್ಟ ತಾಯಿಯೇ ತನ್ನ ಕೂಸಿಗೆ ವಿಷವುಣಿಸಲು ನಿಂತರೆ ಕಾಯುವವರಾರು? ಇನೈದು ವರ್ಷಗಳಲ್ಲಿ ಕರ್ನಾಟಕದಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳೇ ಇರುವುದಿಲ್ಲ. ಕನ್ನಡ ತನ್ನಷ್ಟಕ್ಕೆ ತಾನೇ ಅಳಿದು ಹೋಗುತ್ತದೆ. ಕನ್ನಡ ಬಳಸುವವರೂ ಕಡಿಮೆಯಾಗುತ್ತಾರೆ.

ಈಗಾಗಲೇ ಕನ್ನಡಿಗರ ಅಡುಗೆ ಮನೆಗಳಲ್ಲಿ ಮಾಮ್, ಬೇಬಿ ಶಬ್ದಗಳ ಚಲಾವಣೆ ಜೋರಾಗಿದೆ. ಮನೆಯ ಹೆಂಗಸರು ಕನ್ನಡ ಭಾಷೆಯನ್ನು ಎಲ್ಲಿಯವರೆಗೆ ಬಯಸುವರೋ, ಬಳಸುವರೋ ಅಲ್ಲಿಯವರೆಗೆ ಕನ್ನಡ ಉಳಿಯುತ್ತದೆ.

ಇಲ್ಲವಾದಲ್ಲಿ ಕನ್ನಡ ಹೋಗಿ ಇಂಗ್ಲಿಷ್ ಎಲ್ಲ ಹಂತಗಳಲ್ಲಿ ಶಿಕ್ಷಣ ಮಾಧ್ಯಮವಾಗುತ್ತದೆ. ಆಡಳಿತ ಭಾಷೆಯಾಗುತ್ತದೆ. ಕರ್ನಾಟಕ ಹರಿದು ಹಂಚಿ ಹೋಗುತ್ತದೆ. ಕನ್ನಡ ವಿರೋಧಿ ನಿಲುವಿಗೆ ನನ್ನ ಧಿಃಕಾರವಿದೆ. ಮೌನ ಪ್ರತಿಭಟನೆ ಇದೆ.////

ಜಿಲ್ಲಾಧಿಕಾರಿಗೆ ಅಭಿನಂದನೆ

  ಇತ್ತೀಚೆಗೆ ಬೆಳಗಾವಿಯ ಮರಾಠಾ ನಾಯಕರು ಮತ್ತು ಕಾರ್ಯಕರ್ತರು ಸೇರಿ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಬಳಿ ನಿಯೋಗ ಒಯ್ದು ಅಲ್ಪಸಂಖ್ಯಾತರಿಗೆ ಲಭ್ಯವಾಗಬೇಕಾದಾಗ ಎಲ್ಲ ಸವಲತ್ತುಗಳನ್ನು ಕೊಡಿ, ಮರಾಠಿಯಲ್ಲಿಯೇ ಎಲ್ಲ ಪರಿಪತ್ರಗಳು, ಅರ್ಜಿನಮೂನೆಗಳನ್ನು ಪ್ರಕಟಿಸಬೇಕು ಫಲಕಗಳಲ್ಲಿ ಕನ್ನಡ ಬರೆಯಿಸಲು ಒತ್ತಾಯಿಸಬೇಡಿ ಎಂದು ಅಲವತ್ತುಕೊಂಡಿದ್ದಾರೆ.

ಆದರೆ ಜಿಲ್ಲಾಧಿಕಾರಿಗಳು ಅವರ ಒತ್ತಾಯಕ್ಕೆ ಮಣಿಯದೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡ ಆಡಳಿತ ಭಾಷೆಯಾದ್ದರಿಂದ ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಬರೆದಿರಬೇಕು ಎಂದು ಹೇಳಿರುವುದು ಗಡಿಭಾಗದ ಜನತೆಗೆ ಸಂತಸ ತಂದಿದೆ. ಜಿಲ್ಲಾಧಿಕಾರಿಗಳು ಅಭಿನಂದನಾರ್ಹರು.

ಈ ಮರಾಠಾ ನಾಯಕರು ಗಡಿಭಾಗದಲ್ಲಿ ಅಲ್ಪಸಂಖ್ಯಾತರಿಗೆ ಕೊಡಬೇಕಾಗಿರುವ ಸವಲತ್ತು ಸೌಲಭ್ಯಗಳಿಗಾಗಿ ಹಕ್ಕೊತ್ತಾಯ ಮಾಡುತ್ತಲೇ ಬಂದಿದ್ದಾರೆ. ಮಹಾನಗರಸಭೆ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಮರಾಠಿಯಲ್ಲಿಯೇ ಕಾರ್ಯಕಲಾಪ ನಡೆಸಲು ಘೋಷಣೆ ಕೂಗುತ್ತಾರೆ. ಮರಾಠಿಯಲ್ಲಿಯೇ ದಾಖಲೆಗಳಿಗಾಗಿ ಬೇಡಿಕೆ ಇಡುತ್ತಾರೆ.

ಆದರೆ ಅದೇ ವೇಳೆಗೆ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಇಚಲಕರಂಜಿ, ಗಡಿಹಿಂಗ್ಲಜ, ಮಿರಜ, ಸಾಂಗ್ಲಿ, ಕೊಲ್ಲಾಪುರ, ಅಕ್ಕಲಕೋಟ, ಜತ್ತ, ಸೊಲ್ಲಾಪುರಗಳಲ್ಲಿನ ಅಧಿಕ ಸಂಖ್ಯೆಯಲ್ಲಿರುವ ಕನ್ನಡಿಗರಿಗೆ ಯಾವ ಸೌಲಭ್ಯ ಕೊಟ್ಟಿದ್ದಾರೆ? ಅಲ್ಲಿ ಕನ್ನಡವನ್ನು ಸಂಪೂರ್ಣ ಸಮಾಧಿಗೊಳಿಸಿದ್ದಾರೆ. ಎಲ್ಲವೂ ಮರಾಠಿಮಯಗೊಳಿಸಿದ್ದಾರೆ.

ಬೆಳಗಾವಿ ಭಾಗದ ಮರಾಠಿ ಜನತೆಗೆ ಬೇಕಾಗಿರುವ ಸೌಲಭ್ಯ ಸವಲತ್ತುಗಳು ಮಹಾರಾಷ್ಟ್ರದ ಗಡಿಭಾಗದ ಕನ್ನಡಿಗರಿಗೆ ಮೊದಲು ಮಹಾರಾಷ್ಟ್ರ ಸರಕಾರ ನೀಡಲಿ. ಆ ಮೇಲೆ ಇಲ್ಲಿ ತಮ್ಮ ಬೇಡಿಕೆ ಇಡಲಿ. ಕರ್ನಾಟಕದಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಸಹಿತ ಗಡಿಪ್ರದೇಶಗಳಲ್ಲಿ ಕನ್ನಡವೇ ರಾರಾಜಿಸಬೇಕು. ಮರಾಠಿ ಪ್ರಾಥಮಿಕ ಶಾಲೆಗಳಲ್ಲಿ ಪ್ರದರ್ಶಿಸಿರುವ ನಾಮಫಲಕಗಳಲ್ಲಿ ಮರಾಠಿಗೆ ಅಗ್ರಸ್ಥಾನ ನೀಡುವವರಿಗೆ ಶಿಕ್ಷಣಾಧಿಕಾರಿಗಳು ಕಠೋರ ಕ್ರಮಕೈಗೊಳ್ಳಬೇಕು.

ಜಿಲ್ಲಾಮಟ್ಟದ ಅಧಿಕಾರಿಗಳು ಕನ್ನಡದ ಗೌರವ, ಘನತೆ, ಅಭಿಮಾನಿಗಳಿಗೆ ಚ್ಯುತಿಬಾರದಂತೆ ಕನ್ನಡದಲ್ಲಿ ಆಡಳಿತ ನಡೆಸಿ ಕನ್ನಡದಲ್ಲಿಯೇ ಕಾರ್ಯಕಲಾಪಗಳನ್ನು ನಡೆಸಿ, ಕನ್ನಡದಲ್ಲಿಯೇ ನಡವಳಿಕೆಗಳನ್ನು ದಾಖಲಿಸಲು ಆಗಾಗ ಕೆಳಹಂತದ ಸಿಬ್ಬಂದಿಯವರನ್ನು ಎಚ್ಚರಿಸುತ್ತಲೇ ಇರಬೇಕು.

-ಬಿ.ಎಸ್.ಗವಿಮಠ
ಹಿರಿಯ ಸಾಹಿತಿ, ಬೆಳಗಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button