ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವ ವಿಧಾನವನ್ನು ಸರಳೀಕರಣಗೊಳಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಕಂದಾಯ ಸಚಿವರಾದ ಆರ್. ಅಶೋಕ ತಿಳಿಸಿದ್ದಾರೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95(2)ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಛಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಯು ನಿಯಮಗಳಿಗೆ ಒಳಪಟ್ಟು ಅನುಮತಿಯನ್ನು ನಿರಾಕರಿಸಬಹುದು ಅಥವಾ ತಾನು ಯುಕ್ತವೆಂದು ಆಲೋಚಿಸುವಂತ ಷರತ್ತುಗಳಿಗೆ ಒಳಪಟ್ಟು ಕೊಡಬಹುದಾಗಿದೆ.
ಅರ್ಜಿದಾರರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದಾಗ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 96(4)ರನ್ವಯ ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ ಕಂದಾಯ ವಿಧಿಸಲಾಗಿರುವ ಅಥವಾ ಬೇಸಾಯದ ಉದ್ದೇಶಕ್ಕೆ ಹೊಂದಿರುವ ಯಾವುದೇ ಭೂಮಿಯನ್ನು ಯಾವುದೇ ಇತರೆ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಯ ಅನುಮತಿಯಿಲ್ಲದೇ ಕಟ್ಟಡಗಳನ್ನು ಕಟ್ಟುವುದು ಅಥವಾ ಉಪಯೋಗ ಮಾಡಿದ್ದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 96(4)ರನ್ವಯ ದಂಡ ವಿಧಿಸಿ, ಭೂ ಪರಿವರ್ತನೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ಕ್ಕೆ ಇತ್ತೀಚೆಗೆ ಯಾವುದೇ ತಿದ್ದುಪಡಿ ತಂದಿರುವುದಿಲ್ಲ ಎಂದು
ಕಂದಾಯ ಸಚಿವರು ಮಂಜುನಾಥ ಭಂಡಾರಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದಾರೆ.
ಪ್ರಕರಣವು ವಿಚಾರಣಾ ಹಂತದಲ್ಲಿ:
ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಮಾಲಿಕತ್ವವನ್ನು ಪ್ರದಾನ ಮಾಡುವ ಅಧಿನಿಯಮ-2011 ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಸಲುವಾಗಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರೀಟ್ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನು ನೀಡಿ ಸ್ಟೇಟಸ್ ಕ್ಯೂ (status-quo) ಎಂದು ಆದೇಶ ಮಾಡಿರುತ್ತದೆ. ಈ ಮಧ್ಯಂತರ ಆದೇಶವು ಮುಂದುವರೆದಿದ್ದು, ಪ್ರಸ್ತುತ
ಪ್ರಕರಣವು ವಿಚಾರಣಾ ಹಂತದಲ್ಲಿದೆ ಎಂದು ಸಚಿವರಾದ ಆರ್.ಅಶೋಕ ಅವರು ಸದಸ್ಯರಾದ ಪ್ರತಾಪಸಿಂಹ್ ನಾಯಕ.ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಒಕ್ಕಲುಗಳಿಗೆ ಮಾಲೀಕತ್ವ ನೀಡುವ ಕಾಯ್ದೆ ಬಗ್ಗೆ ಸಂಪೂರ್ಣವಾಗಿ ಜಾರಿಯಾಗಿ ಮೂಲಗೇಣಿ ಒಕ್ಕಲುಗಳಿಗೆ ನ್ಯಾಯ ಒದಗಿಸಲಾಗಿದೆಯೇ ಎಂದು ಪ್ರತಾಪಸಿಂಹ್ ಅವರು ಪ್ರಶ್ನೆ ಕೇಳಿದ್ದರು.
ತಡೆಯಾಜ್ಞೆ ತೆರವು:
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಣೆ, ಬಾಣೆ ಮತ್ತು ಕುಮ್ಕಿ ಜಮೀನುಗಳಲ್ಲಿ ಅಕ್ರಮ ಸಕ್ರಮ ಅರ್ಜಿಗಳನ್ನು ಅರಣ್ಯ ಸಂರಕ್ಷಣಾ ಕಾಯ್ದೆ ಕಲಂ 2ರಡಿ ಪೂರ್ವಾನುಮತಿ ಇಲದೇ ಪರಿಗಣಿಸಬಾರದೆಂದು ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ಕೋರಿದ ಮೇರೆಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು 2008ರಲ್ಲಿ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ ಎಂದು ಕಂದಾಯ ಸಚಿವರು ಸದಸ್ಯ ಕೆ.ಹರೀಶಕುಮಾರ ಪ್ರಶ್ನೆಗೆ ಉತ್ತರಿಸಿದರು.
ಕಾಣೆ, ಬಾಣೆ ಮತ್ತು ಕುಮ್ಕಿ ಮತ್ತು ಸೊಪ್ಪಿನಬೆಟ್ಟು ಜಮೀನುಗಳನ್ನು ಅಕ್ರಮ ಸಕ್ರಮ ಕಾಯ್ದೆಯಡಿ ಗೇಣಿದಾರರಿಗೆ ನೀಡಲು, ಅರಣ್ಯ ಇಲಾಖೆಯು ಕೇಂದ್ರ ಸರ್ಕಾರದ ಅನುಮತಿ ಪಡೆಯುವಂತೆ ತಿಳಿಸಿದೆ. ಇದರನುಸಾರ ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ರಸ್ತೆ ಅಪಘಾತ ತಡೆಯಲು ರಸ್ತೆ ಸುರಕ್ಷತಾ ನಿಯಂತ್ರಣ ಪ್ರಾಧಿಕಾರ ರಚನೆ
https://pragati.taskdun.com/establishment-of-road-safety-regulatory-authority-to-prevent-road-accidents/
ಆಟೋ, ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಭಾರತ್ ಅಡಿ ಉಚಿತ ಚಿಕಿತ್ಸೆ
https://pragati.taskdun.com/free-treatment-under-ayushman-bharat-for-auto-and-cab-drivers/
ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ
https://pragati.taskdun.com/vande-bharat-shatabdi-superfast-trains-check-for-schedule-change/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ