
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಮ್ಮ ಪ್ರಮುಖ ಗುರಿಯಾಗಿದ್ದು, ಅದರ ಭಾಗವಾಗಿ ಗುಂಪು ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಹೇಳಿದರು.
ನಗರದ ವಾರ್ತಾ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-26ನೇ ಸಾಲಿನ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸಿ ಅವರು ಮಾತನಾಡಿದರು. ಪತ್ರಕರ್ತರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದರು.
ನಾವೆಲ್ಲರೂ ವೈಮಸ್ಸನ್ನು ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಪತ್ರಕರ್ತರ ಹಿತಾಸಕ್ತಿಗಾಗಿ ಸಂಘವನ್ನು ನೂತನ ಶಕ್ತಿಯೊಂದಿಗೆ ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ನಮ್ಮ ಸಂಘವನ್ನು ಮತ್ತಷ್ಟು ಸಂಘಟನೆ ಮಾಡಬೇಕಿದೆ. ಎಲ್ಲ ಸದಸ್ಯರು ಒಂದಾಗಿ ಕೆಲಸ ಮಾಡುವ ಮೂಲಕ ಸಂಘದ ಬಲವನ್ನು ವೃದ್ಧಿಸೋಣ. ಸಂಘಕ್ಕೆ ಬೆಳಗಾವಿಯಲ್ಲಿ ಪತ್ರಿಕಾ ಭವನದ ಕಟ್ಟಡ ಅತ್ಯವಶ್ಯಕವಾಗಿದ್ದು, ಅದರ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸುತ್ತೇವೆ.
ಈಗಾಗಲೇ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕು ಮಟ್ಟದ ಸಮಿತಿಯನ್ನೂ ರಚಿಸಲಾಗುವುದು. ಈ ಮೂಲಕ ಸಂಘಟನೆಗೆ ಮೂಲಬಲ ಒದಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಮಾತನಾಡಿ, ಸಂಘದ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಕೆಯುಡಬ್ಲ್ಯುಜೆ ಬೆಳಗಾವಿ ಜಿಲ್ಲಾ ಘಟಕವನ್ನು ರಾಜ್ಯದಲ್ಲೇ ಮಾದರಿ ಸಂಘ ಮಾಡುವ ನಿಟ್ಟಿನಲ್ಲಿ ಶ್ರಮಿಸೋಣ. ಇದಕ್ಕೆ ರಾಜ್ಯ ಸಮಿತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜೇರಿ ಅವರು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು. ಇದೇ ವೇಳೆ ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜೇರಿ, ಸಂಘದ ಜಿಲ್ಲಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಹಾಗೂ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಕುಂತಿನಾಥ ಕಲಮನಿ, ತಮಗೆ ನೀಡಿರುವ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುವ ಮೂಲಕ ಸಂಘದ ಬಲವರ್ಧನೆಗೆ ಶ್ರಮಿಸಲಾಗುವುದು. ಪತ್ರಕರ್ತರ ಹಿತರಕ್ಷಣೆಗೆ ನಾವು ಬದ್ಧರಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಉಪಾಧ್ಯಕ್ಷರಾದ ತಾನಾಜಿ ಮುರಂಕರ, ಭೀಮಪ್ಪ ಖಿಚಡಿ, ಕಾರ್ಯದರ್ಶಿಗಳಾದ ಸದಾಶಿವ ಸಂಕಪ್ಪಗೋಳ, ರವಿ ಹುಲಕುಂದ ಮತ್ತು ರಾಜಕುಮಾರ ಬಾಗಲಕೋಟಿ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನರಡ್ಡಿ ಗೊಂದಿ ಮೊದಲಾದವರು ಉಪಸ್ಥಿತರಿದ್ದರು. ಶಿವಾನಂದ ತಾರಿಹಾಳ ಕಾರ್ಯಕ್ರಮ ನಿರೂಪಿಸಿದರು.




