Kannada NewsKarnataka NewsLatest

*ಪಂಚಭೂತಗಳಲ್ಲಿ ಲೀನರಾದ ಗಾಯಕಿ ಎಸ್.ಜಾನಕಿ: ಕೊನೆಯಾಸೆಯಂತೆ ಮೈಸೂರಿನಲ್ಲಿ ನೆರವೇರಿದ ಅಂತ್ಯಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ಹೃದಯಾಘಾತದಿಂದ ವಿಧಿವಶರಾಗಿದ್ದ ಗಾನಕೋಗಿಲೆ ಎಸ್.ಜಾನಕಿ (88) ಅವರ ಅಂತ್ಯಕ್ರಿಯೆ ಮೈಸೂರಿನ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಎಸ್.ಜಾನಕಿ ಅವರ ಕೊನೆಯಾಸೆಯಂತೆ ಮೈಸೂರಿನ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರಿ ಗೌರರವಗಳೊಂದಿಗೆ, ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಎಸ್.ಜಾನಕಿ ಕೊನೆಯುಸಿರೆಳೆದಿದ್ದರು. ಇಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಅಭಿಮಾನಿಗಳು, ಸಂಗೀತ ದಿಗ್ಗಜರು, ಸಿನಿ ತಾರೆಯರು, ರಾಜಕೀಯ ನಾಯಕರು ಗಾನಕೋಗಿಲೆಯ ಅಂತಿಮದರ್ಶನ ಪಡೆದರು. ಬಳಿಕ ಮಹಾರಾಜ ಕಾಲೇಜು ಮೈದಾನದಿಂದ ಎಸ್.ಜಾನಕಿ ಅವರ ಪಾರ್ಥಿವಶರೀರವನ್ನು ಕಣಿಯನಹುಂಡಿಗೆ ತರಲಾಯಿತು.

ಕಣಿಯನಹುಂಡಿಯ ಫಾರ್ಮ್ ಹೌಸ್ ನಲ್ಲಿ ರಮೇಶ್ ಶರ್ಮಾ ಮಾರ್ಗದರ್ಶನದಲ್ಲಿ ಮೊಮ್ಮಗಳು ಅಪ್ಸರಾ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಳಿಕ ಮೈಸೂರು ಜಿಲ್ಲಾಡಳಿತದಿಂದ ಪೊಲೀಸ್ ಗೌರವ ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸರು ಗೌರವ ನಮನ ಸಲ್ಲಿಸಿದರು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಂತ್ರ ಘೋಷಗಳ ನಡುವೆ ಎಸ್.ಜಾನಕಿ ಅವರ ಮೊಮ್ಮಗಳು ಅಪ್ಸರಾ, ಅಂತ್ಯಸಂಸ್ಕಾರದ ಕ್ರಿಯೆ ನೆರವೇರಿಸಿ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಲೆಜೆಂಡರಿ ಗಾಯಕಿ ಎಸ್.ಜಾನಕಿ ಪಂಚಭೂತಗಳಲ್ಲಿ ಲೀನರಾದರು. ಕೃಷ್ಣನ ಭಕ್ತೆಯಾಗಿರುವ ಎಸ್.ಜಾನಕಿ ಅವರು ಕೃಷ್ಣನ ವಿಗ್ರಹವನ್ನು ಕೈಯಲ್ಲಿ ಹಿಡಿದೇ ಚಿರನಿದ್ರೆಗೆ ಜಾರಿದ್ದಾರೆ.

Home add -Advt

Related Articles

Back to top button