Kannada NewsKarnataka NewsLatest

*ಡಿ.20ಕ್ಕೆ ಬೆಂಗಳೂರಿನಲ್ಲಿ ಹವ್ಯಕ ಮಹಿಳಾ ಸಮಾವೇಶ. 83 ಮಹಿಳಾ ವೇದಿಕೆಗಳ ಸ್ಥಾಪನೆಗೆ ಮಹಾಸಭೆ ನಿರ್ಧಾರ: ಡಾ. ಗಿರಿಧರ ಕಜೆ*

ಪ್ರಗತಿವಾಹಿನಿ ಸುದ್ದಿ: ಶಿರಸಿ: ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಡಿಸೆಂಬರ್ 20ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹವ್ಯಕ ಮಹಿಳಾ ಸಮಾವೇಶ ಆಯೋಜಿಸಲಾಗಿದ್ದು, ಮಹಾಸಭೆಯ 83ನೇ ವರ್ಷದ ಸಂಭ್ರಮದ ಅಂಗವಾಗಿ ದೇಶ-ವಿದೇಶಗಳಲ್ಲಿ ಒಟ್ಟು 83 ಹವ್ಯಕ ಮಹಿಳಾ ವೇದಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಮಹಾಸಭೆಯ ಅಧ್ಯಕ್ಷ ಹಾಗೂ ಖ್ಯಾತ ವೈದ್ಯ ಡಾ. ಗಿರಿಧರ ಕಜೆ ತಿಳಿಸಿದರು.

ನಗರದ ಪೂಗಭವನದಲ್ಲಿ ಭಾನುವಾರ ಹವ್ಯಕ ಮಹಾಸಭೆಯ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾಸಭೆಯ 83ನೇ ವರ್ಷದ ಅಂಗವಾಗಿ 83 ಮಹಿಳಾ ವೇದಿಕೆಗಳನ್ನು ಆರಂಭಿಸಲಾಗುತ್ತಿದೆ. ಅವುಗಳಲ್ಲಿ ಎಂಟು ವಿದೇಶಗಳಲ್ಲಿ, ಎಂಟು ಹೊರರಾಜ್ಯಗಳಲ್ಲಿ ಹಾಗೂ ಉಳಿದವು ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈಗಾಗಲೇ 18 ಪ್ರಾಂತ್ಯಗಳ ಮಹಿಳಾ ವೇದಿಕೆಗಳು ಉದ್ಘಾಟನೆಗೊಂಡಿರುತ್ತವೆ. ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶಗಳಿಗೆ ಆದ್ಯತೆ ನೀಡಿ ಮುಂದಿನ ಎರಡು ತಿಂಗಳೊಳಗೆ ಉಳಿದ ಎಲ್ಲ ವೇದಿಕೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

Home add -Advt

ಹವ್ಯಕ ಸಮಾಜ ಸಂಸ್ಕೃತಿ, ಸಂಸ್ಕಾರ ಮತ್ತು ಶ್ರೇಷ್ಠ ಜೀವನ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಡಿಸೆಂಬರ್‌ನಲ್ಲಿ ನಡೆಯಲಿರುವ ಮಹಿಳಾ ಸಮಾವೇಶದೊಂದಿಗೆ ‘ಧೀಶಕ್ತಿ’ ಎಂಬ ವಿಶೇಷ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು. ಮನೆಯಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಮಹಿಳೆಯರಿಗೆ ಬ್ಯಾಂಕಿಂಗ್ ವ್ಯವಸ್ಥೆ, ಸರ್ಕಾರಿ ಯೋಜನೆಗಳು, ಯಂತ್ರೋಪಕರಣಗಳ ಬಳಕೆ ಹಾಗೂ ಮಾರುಕಟ್ಟೆ ಸಂಪರ್ಕದ ಕುರಿತು ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು.

“ಹವ್ಯಕ ಮಹಿಳೆಯರು ದೀಪದ ಕೆಳಗಿನ ಬೆಳಕಾಗದೆ, ಸಮಾಜವನ್ನು ಬೆಳಗಿಸುವ ಶಕ್ತಿಯಾಗಬೇಕು. ಅವರ ಪ್ರತಿಭೆ ಹಾಗೂ ಹವ್ಯಕತನಕ್ಕೆ ಸಮಾಜದಲ್ಲಿ ಸೂಕ್ತ ಗೌರವ ದೊರೆತಾಗ ಸಮಾಜ ಮತ್ತಷ್ಟು ಪ್ರಜ್ವಲಿಸುತ್ತದೆ” ಎಂದು ಅಭಿಪ್ರಾಯಪಟ್ಟ ಅವರು, ನವೆಂಬರ್ 15ರಂದು ಬೆಂಗಳೂರಿನಲ್ಲಿ ಶಂಕರೋತ್ಸವ ಕೂಡ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಉಪನ್ಯಾಸಕಿ ವಿಜಯನಳಿನಿ ರಮೇಶ್ ಮಾತನಾಡಿ, ಮಕ್ಕಳಲ್ಲಿ ಸಂತಸ, ಸಂಭ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಹೆಣ್ಣುಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗ್ರಾಮೀಣ ಸಂಸ್ಕೃತಿ ಹಾಗೂ ಉತ್ತಮ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಆಗಬೇಕು. ಹಣಕ್ಕಿಂತ ಸಂತೋಷದಿಂದ ಬದುಕುವ ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕಾಗಿದೆ ಎಂದು ಹೇಳಿದರು.

ಕೇಂದ್ರ ಹವ್ಯಕ ಮಹಿಳಾ ವೇದಿಕೆಯ ಸಂಚಾಲಕಿ ಮಧುರಾ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಗರೀಕರಣ ಮತ್ತು ಜಾಗತೀಕರಣದ ಪರಿಣಾಮ ಹವ್ಯಕತನ ನಿಧಾನವಾಗಿ ಕ್ಷೀಣಿಸುತ್ತಿದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಿಳಾ ಸಮಾವೇಶ ಹಾಗೂ ಮಹಿಳಾ ವೇದಿಕೆಗಳ ಮೂಲಕ ಸಮಾಜವನ್ನು ಸಂಘಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹವ್ಯಕ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 17 ಪ್ರತಿಭಾವಂತರಿಗೆ ‘ಹವ್ಯಕ ಪಲ್ಲವ’ ಪುರಸ್ಕಾರ ಪ್ರದಾನ ಮಾಡಲಾಯಿತು.

ಬಿಂದು ಹೆಗಡೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರೇಖಾ ಸತೀಶ ಭಟ್ಟ ಸ್ವಾಗತಿಸಿದರು. ಭವ್ಯಾ ಹಳೆಯೂರು‌ ನಿರ್ವಹಿಸಿದರು. ಗಾಯತ್ರೀ ರಾಘವೇಂದ್ರ ವಂದಿಸಿದರು. ಈ ವೇಳೆ ಮಹಾಸಭೆಯ ಉಪಾಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಕಾರ್ಯದರ್ಶಿ ಆದಿತ್ಯ ಕಲಗಾರು, ನಿರ್ದೇಶಕರಾದ ಶಶಾಂಕ್ ಹೆಗಡೆ ಶೀಗೇಹಳ್ಳಿ ಹಾಗೂ ಜಿ. ಎಂ. ಭಟ್ಟ ಕಾಜಿನಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button