ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸರ್ ಜಡ್ಜ್ ಮೆಂಟ್ ಎಷ್ಟು ಗಂಟೆಗೆ ಬರುತ್ತೆ? – ಬುಧವಾರ ಇಡೀ ದಿನ ಇಂತಹ ಪ್ರಶ್ನೆಯ ನೂರಾರು ಪೋನ್ ಕಾಲ್ ಗಳಿಗೆ ಉತ್ತರ ಕೊಟ್ಟು ನ್ಯಾಯವಾದಿಗಳು ಸುಸ್ತಾಗಿದ್ದಾರೆ.
ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಸುಪ್ರಿಂ ಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ, ಇಲ್ಲವೋ? ಮಹಾರಾಷ್ಟ್ರ 2004ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಕೈಗೆತ್ತಿಕೊಳ್ಳಬಹುದೋ ಅಥವಾ ತಿರಸ್ಕರಿಸಬೇಕೋ? ಎನ್ನುವ ಕುರಿತು ಬುಧವಾರ ವಿಚಾರಣೆ ಆರಂಭಿಸುವುದಾಗಿ ಸುಪ್ರಿಂ ಕೋರ್ಟ್ ತಿಳಿಸಿತ್ತು. ಇದು ಗಡಿ ವಿವಾದದ ವಿಚಾರಣೆಯಲ್ಲ, ಕೇವಲ ಈ ವಿಚಾರ ಸರ್ವೋಚ್ಛ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎನ್ನುವುದರ ಕುರಿತು ವಾದ ವಿವಾದ ಆರಂಭವಷ್ಟೆ.
ಆದರೆ ಜನಸಾಮಾನ್ಯರಲ್ಲಿ ಉಂಟಾಗಿರುವ ಕಲ್ಪನೆ, ವದಂತಿ ಗಡಿ ವಿವಾದದ ಕುರಿತು ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ ಎನ್ನುವುದಾಗಿತ್ತು. ಅಂದರೆ ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧ ಭೂ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೋ ಬೇಡವೋ ಎನ್ನುವ ಕುರಿತು ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ ಎಂದು ಅರ್ಥೈಸಿದ್ದರು.
ಇದಕ್ಕೆ ಕಾರಣ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಗೊಂದಲದ ವರದಿ ಮತ್ತು ಪೊಲೀಸ್ ಇಲಾಖೆ ಗಡಿ ಪ್ರದೇಕ್ಕೆ ಬಂದು ಎರಡೂ ರಾಜ್ಯಗಳ ಉನ್ನತಾಧಿಕಾರಿಗಳ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ದೌಡಾಯಿಸಿದ್ದು.
ಫೋನ್ ಕಾಲ್ ಗಳಿಗೆ ಉತ್ತರಿಸಿ ಸುಸ್ತಾದ ವಕೀಲರು
ಗಡಿ ವಿವಾದದ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದಿಸಲು ರಾಜ್ಯದ ಪರವಾಗಿ ನ್ಯಾಯವಾದಿಗಳು ತಂಡ ರಚಿಸಲಾಗಿದೆ. ಬುಧವಾರ ಈ ತಂಡದ ಬಹುತೇಕ ಸದಸ್ಯರಿಗೆ ಫೋನ್ ಕಾಲ್ ಗಳ ಸುರಿಮಳೆಯೇ ಬಂದಿತ್ತಂತೆ. ಸರ್, ಜಡ್ಜ್ ಮೆಂಟ್ ಎಷ್ಟು ಗಂಟೆಗೆ ಬರುತ್ತದೆ? ತೀರ್ಪು ಏನಾಗಬಹುದು? ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವ ಸಾಧ್ಯತೆ ಇದೆಯಾ? ಹಾಗಾದಲ್ಲಿ ಕರ್ನಾಟಕಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತಾ ? ಇಂತಹ ಪ್ರಶ್ನೆಗಳಿಗೆ ಉತ್ತರಿಸಿ ವಕೀಲರೇ ಸುಸ್ತಾದರಂತೆ.
ಜನಸಾಮಾನ್ಯರಷ್ಟೇ ಅಲ್ಲ, ಹಲವಾರು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಸಹ ಕಾಲ್ ಮಾಡಿದ್ದರಂತೆ. ಬೇರೆ ಬೇರೆ ಜಿಲ್ಲೆಗಳ ಪೊಲೀಸರು ಗಡಿ ವಿವಾದದ ತೀರ್ಪು ಬರುವ ಹಿನ್ನೆಲೆಯಲ್ಲಿ ತಾವು ಹೆಚ್ಚಿನ ಪ್ರಮಾಣದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾಗಿಯೂ ತಿಳಿಸಿದರಂತೆ.
ವಿಪರ್ಯಾಸವೆಂದರೆ ಬುಧವಾರ ಗಡಿ ವಿವಾದದ ವಿಷಯವೇ ನ್ಯಾಯಾಲಯದ ಮುಂದೆ ಬಂದಿಲ್ಲ. ನ್ಯಾಯಾಧೀಶರು ಸಾಂವಿಧಾನಿಕ ಪೀಠದಲ್ಲಿ ಬ್ಯುಸಿಯಾಗಿದ್ದರಿಂದ ಈ ವಿಷಯ ಕೈಗೆತ್ತಿಕೊಳ್ಳಲಾಗಿಲ್ಲ.
2004ರಲ್ಲಿ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ಸುಪ್ರಿಂ ಕೋರ್ಟ್ ವ್ಯಾಪ್ತಿಗೆ ಬರುತ್ತದೆಯೇ? ಬರುತ್ತದೆಯೆಂದಾದರೆ ವಿಷಯ ವಿಚಾರಣೆಗೆ ಯೋಗ್ಯವೇ? ಎನ್ನುವ ವಿಷಯಗಳೇ ಇನ್ನೂ ವಿಚಾರಣೆಗೆ ಬಂದಿಲ್ಲ. ಇವೆಲ್ಲ ಮುಗಿದು ಮುಖ್ಯ ವಿಷಯ ವಿಚಾರಣೆಗೆ ಬರುವುದಕ್ಕೆ ಇನ್ನೂ ಹಲವು ವರ್ಷಗಳೇ ಬೇಕಾಗಬಹುದು.
ಅಲ್ಲಿಯವರೆಗೂ ಮಹಾರಾಷ್ಟ್ರ ರಾಜಕಾರಣಕ್ಕಾಗಿ ಕಿರಿಕಿರಿ ಮುಂದುವರಿಸಿ, ಕನ್ನಡಿಗರನ್ನು ಕೆರಳಿಸುವ ಕೃತ್ಯವನ್ನು ಮುಂದುವರಿಸಬಹುದು.
https://pragati.taskdun.com/chief-minister-chandrakanta-patil-releases-belgaum-itinerary-what-will-he-do-in-belgaum-see/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ