ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-: ವಿಷಪೂರಿತ ಆಹಾರದ ಬಗ್ಗೆ ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದಲ್ಲಿ ತಿರಸ್ಕಾರ ಭಾವನೆ ಮೂಡುತ್ತಿದ್ದು, ಭವಿಷ್ಯದಲ್ಲಿ ಸಾವಯವ-ಸಿರಿಧಾನ್ಯ ಉತ್ಪನ್ನಗಳಿಗೆ ಬಹು ಬೇಡಿಕೆ ಹಾಗೂ ಉತ್ತಮ ಮಾರುಕಟ್ಟೆ ಲಭಿಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಾದ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತೋಟಗಾರಿಕೆ, ಕೃಷಿಕ ಸಮಾಜ, ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ-ಸಿರಿಧಾನ್ಯ ಮೇಳ ಹಾಗೂ ೬೨ ನೇ ಫಲಪುಷ್ಪ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪ ಮುಖ್ಯಮಂತ್ರಿ ಸವದಿ ಅವರು, ಬರಗು, ಸಾವೆ, ಕೊರಲೆ, ಊದಲು, ರಾಗಿ, ಜೋಳ, ನವಣೆ, ಸಜ್ಜೆ ಮತ್ತಿತರ ಸಿರಿಧಾನ್ಯಗಳನ್ನು ಮರದಿಂದ ಬುಟ್ಟಿಗೆ ಸುರಿಯುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣದಿಂದ ಮಾತ್ರ ಸದೃಢ ರಾಷ್ಟ್ರ ಕಟ್ಟುವುದು ಸಾಧ್ಯ. ಆ ಹಿನ್ನೆಲೆಯಲ್ಲಿ ಸಾವಯವ-ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ.
ಸಿರಿಧಾನ್ಯಕ್ಕೆ ಆದ್ಯತೆ ನೀಡಲು ರೈತರಿಗೆ ಕರೆ:
ರೈತ ಸಮುದಾಯ ಸಿರಿ ಸಂಪತ್ತಿಗೆ ಬೆನ್ನತ್ತದೇ ತಮ್ಮನ್ನೇ ಅವಲಂಬಿಸಿರುವ ಸಮಾಜದ ಆರೋಗ್ಯದ ದೃಷ್ಟಿಯಿಂದ ಸಾವಯವ -ಸಿರಿಧಾನ್ಯಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ದುಡ್ಡು, ಸಿರಿಸಂಪತ್ತು ಇದ್ದ ಮಾತ್ರಕ್ಕೆ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಬೆಳೆಗೆ ವಿಷವುಣಿಸಿ ಜನರಿಗೆ ನೀಡುತ್ತಿರುವುದು ದೊಡ್ಡ ಪಾಪದ ಕೆಲಸವಾಗಿದೆ.
ಅನ್ನದಾತ ಎನ್ನುವ ಪದಕ್ಕೆ ಅಪಮಾನ ಆಗದಂತೆ ನಾವು ರೈತರು ನಡೆದುಕೊಳ್ಳಬೇಕಿದೆ. ಉತ್ತಮ ಬೆಳೆಯನ್ನು ಸಮಾಜಕ್ಕೆ ನೀಡುವುದು ಭಗವಂತನ ಮೆಚ್ಚುಗೆಗೆ ಪಾತ್ರರಾಗಬೇಕು.
ಪಿಜ್ಜಾ ಬರ್ಗರ್ ಬಂದ ನಂತರ ಅತೀ ಹೆಚ್ಚು ರಾಸಾಯನಿಕ ಬಳಸಿ ಹೈಬ್ರೀಡ್ ಬೆಳೆ ಹೆಚ್ಚಾಗಿದೆ. ರಸಗೊಬ್ಬರ, ರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸಿ ಬೆಳೆದ ಬೆಳೆಯಿಂದ ೨೪ ಕೋಟಿ ಜನರಿಗೆ ರಕ್ತದೊತ್ತಡ, ಶೇ.೧೭ ರಷ್ಟು ಜನರಿಗೆ ಹೃದಯಸಂಬಂಧಿ ತೊಂದರೆ, ವರ್ಷಕ್ಕೆ ಕೋಟಿ ಜನರು ಕ್ಯಾನ್ಸರ್ ಗೆ ಬಲಿಯಾಗಲು ನಮ್ಮ ದುರಾಸೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿಯಲ್ಲಿ ಸಾಧನೆಗೈದವರಿಗೆ ಗುರುತಿಸಿ ಅವರನ್ನು ಸರ್ಕಾರ ಸನ್ಮಾನಿಸುತ್ತಿದೆ.
ಸಾವಯವ-ಸಿರಿಧಾನ್ಯ ಗಳಿಂದ ಉತ್ತಮ ಆರೋಗ್ಯ ರಕ್ಷಣೆ ಸಾಧ್ಯವಿದೆ. ಆಹಾರ ಪದ್ಧತಿಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ ಎಂದರು.
ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆಯುವುದರ ಜತೆಗೆ ಅವುಗಳ ಸಂಗ್ರಹಣೆ, ಪ್ಯಾಕಿಂಗ್ ಘಟಕ ಸ್ಥಾಪನೆಗೆ ಸರ್ಕಾರ ಹತ್ತು ಲಕ್ಷ ರೂಪಾಯಿ ಧನಸಹಾಯನೀಡುತ್ತಿದ್ದು, ರೈತ ಸಮುದಾಯ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಉಪನಿರ್ದೇಶಕ ಡಾ.ಎಚ್.ಡಿ.ಕೋಳೇಕರ್ ಸ್ವಾಗತಿಸಿ, ಸಾವಯವ ಕೃಷಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾವಯವ-ಸಿರಿಧಾನ್ಯಗಳ ಮಾರಾಟಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವುಗಳನ್ನು ಮಾರುಕಟ್ಟೆಯ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ಕೋಳೇಕರ್ ವಿವರಿಸಿದರು.
ತೋಟಗಾರಿಕೆ ಬೆಳೆ ಮಾಹಿತಿಗೆ ವಿಶೇಷ ಆ್ಯಪ್ ಬಿಡುಗಡೆ:
೪೨ ಕೋಟಿ ಅನುದಾನದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಜಲಾನಯನ ಮೂಲಕ ಬರ ತಡೆಗಟ್ಟುವ ಯೋಜನೆಗೆ ಚಾಲನೆ ನೀಡಲಾಯಿತು.
“ಫಲಶ್ರೇಷ್ಠರು” ಕಿರುಹೊತ್ತಿಗೆ ಹಾಗೂ ತೋಟಗಾರಿಕೆ ಬೆಳೆಗಾರರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿಯನ್ನು ನೀಡುವ ವಿಶೇಷ ಆಪ್ ಅನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಸಾಧಕ ಕೃಷಿಕರನ್ನು ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ರೈಲು, ವಿಮಾನ ಸೇರಿದಂತೆ ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಫ್.ದೊಡ್ಡಗೌಡರ, ಸಾವಯವ ಕೃಷಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ತುಬಚಿ, ತೋಟಗಾರಿಕೆ ಸಂಘದ ಅಧ್ಯಕ್ಷ ಪ್ರಕಾಶ್ ಪಾಟೀಲ, ಕೃಷಿ ಇಲಾಖೆಯ ಅಪರ ನಿರ್ದೇಶಕರು ಡಾ.ವಿ.ಜೆ.ಪಾಟೀಲ, ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಹಾಗೂ ವಿವಿಧ ಜಿಲ್ಲೆಗಳ ಕೃಷಿಕ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ