ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆಯ ಆರೋಗ್ಯ ಸವಾಲುಗಳನ್ನು ತಂತ್ರಜ್ಞಾನ ಬಳಕೆಯಿಂದ ಎದುರಿಸಲು ಸರ್ಕಾರ ಮುಂದೆ ಬಂದಿದೆ. ಅದಕ್ಕಾಗಿ ಪಿ.ಹೆಚ್ .ಸಿ,.ಪ್ರಯೋಗಾಲಯ ಮುಂತಾದವುಗಳನ್ನು ಒಂದೇ ಕಮಾಂಡ್ ಅಡಿಯಲ್ಲಿ ತರಲಿದ್ದು , ಬೆಂಗಳೂರು ಆರೋಗ್ಯ ವ್ಯವಸ್ಥೆ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
ಅವರು ಇಂದು ಸದಾಶಿವನಗರದಲ್ಲಿ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಹಾಗೂ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಸೂಪರ್ ಸ್ಪೆಷಾಲಿಟಿ ವೈದ್ಯರು:
ಬೆಂಗಳೂರಿನ ಯಾವುದೇ ಮೂಲೆಯಲ್ಲಿರುವ ರೋಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರ ಸಮಾಲೋಚನೆ ತುರ್ತಾಗಿ ದೊರೆಯಬೇಕು. ಗೋಲ್ಡನ್ ವೇಳೆಯಲ್ಲಿ ಸಿಕ್ಕರೆ ಚಿಕಿತ್ಸೆ ಕೂಡಲೇ ಪ್ರಾರಂಭ ಮಾಡಬಹುದು ಹಾಗೂ ಗುಣಮುಖರನ್ನಾಗಿಸಬಹುದು. ಆಧುನಿಕ ಡಿಜಿಟಲ್ ತಂತ್ರಜ್ಞಾನ ಹಾಗೂ ಸಲಕರಣೆಗಳನ್ನು ಬಳಕೆ ಮಾಡಿ ದೇಹದ ತಪಾಸಣೆ, ಇಸಿಜಿ ಎಲ್ಲದರ ವರದಿಗಳು ಶೀಘ್ರವಾಗಿ ದೊರಕುತ್ತವೆ. ತಜ್ಞರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡುತ್ತಾರೆ. ಸೂಪರ್ ಸ್ಪೆಷಾಲಿಟಿ ವೈದ್ಯರು 24/ 7 28 ಕೇಂದ್ರಗಳಲ್ಲಿ ಲಭ್ಯವಿರುತ್ತಾರೆ. 800 ರಿಂದ 900 ತಜ್ಞರು ಇದ್ದಾರೆ. ಬಹಳ ದೊಡ್ಡ ಅನುಕೂಲ ಇಲ್ಲಿದೆ. ಕಾಮಾಂಡ್ ಕೇಂದ್ರವನ್ನು ಪ್ರಾರಂಭ ಮಾಡಲಾಗಿದೆ. ಆರೋಗ್ಯದ ಕುರಿತ ಸವಾಲುಗಳು ಈಗ ಹೆಚ್ಚಾಗಿವೆ ಎಂದರು.
ಆರೋಗ್ಯ ಸಮಸ್ಯೆಗಳಿಗೆ ಪರಿಹಾರ:
ನಮ್ಮ ಜೀವನಶೈಲಿ, ಸುತ್ತಮುತ್ತಲಿನ ಪರಿಸರ, ಆಹಾರ, ಮಾನಸಿಕ ಒತ್ತಡ , ಆಯ್ಕೆಗಳು , ಸಾಮಾಜಿಕ ಸ್ಥಿತಿಗತಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅವುಗಳಿಗೆ ಪರಿಹಾರ ದೊರಕಿಸಲಾಗಿದೆ. ಸಚಿವರೊಬ್ಬರು ವೈದ್ಯರಾಗಿದ್ದರೆ ಅವರಿಗೆ ಸಮಸ್ಯೆ ತಿಳಿದಿರುತ್ತದೆ. ಅತ್ಯಾಧುನಿಕ ಸೌಲಭ್ಯಗಳನ್ನು ಜನರಿಗೆ ನೀಡುವಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮುಂಚೂಣಿಯಲ್ಲಿದ್ದಾರೆ. ಅವರ ಮಾತಿಗೂ ಕೃತಿಗೂ ಸಾಮ್ಯವಿದೆ ಎಂದರು.
24/ 7 ಕಾರ್ಯನಿರ್ವಹಣೆ:
ಬೆಂಗಳೂರಿಗೆ ಈ ವರ್ಷ 243 ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಸುಮಾರು 110 ಪ್ರಾರಂಭವಾಗಿದ್ದು, ವಾರದೊಳಗೆ ಬಾಕಿ ಎಲ್ಲವೂ ಪ್ರಾರಂಭವಾಗಲಿದೆ. ಅಲ್ಲಿಯೂ ಸಮಾಲೋಚನೆ, ಔಷಧ,. ಪ್ರಯೋಗಾಲಯ ಸೌಲಭ್ಯಗಳನ್ನು ನೀಡಲಾಗಿದೆ. ನಮ್ಮ ಕ್ಲಿನಿಕ್ ನಲ್ಲಿ ತಕ್ಷಣ ಚಿಕಿತ್ಸೆ ಪ್ರಾರಂಭಿಸುತ್ತಾರೆ. ತಂತ್ರಜ್ಞಾನ ಬಹಳಷ್ಟು ಉಪಯೋಗವಾಗಿದೆ.ಈ ಕಾರ್ಯಕ್ರಮ ಯಶಸ್ವಿಯಾಗಲಿದೆ 24/ 7 ನಡೆಸಬೇಕೆಂದು ಸೂಚನೆ ನೀಡಿದ್ದು, ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪ್ರಾರಂಭ ಮಾಡಿದ್ದು ಇನ್ನಷ್ಟು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ