CrimeKannada NewsKarnataka NewsLatest

*ಟ್ರ್ಯಾಲಿಯಲ್ಲಿ ಚಿನ್ನದ ಬಿಸ್ಕೆಟ್ ಅಂಟಿಸಿ ಸಾಗಾಟ*: *ಅಮಾಯಕ ಪ್ರಯಾಣಿಕರನ್ನೇ ಬಳಸಿಕೊಂಡು ಖತರ್ನಾಕ್ ಪ್ಲಾನ್!*

ಪ್ರಗತಿವಾಹಿನಿ ಸುದ್ದಿ: ವಿದೇಶದಿಂದ ಅಕ್ರಮವಾಗಿ ತರಲಾಗಿದ್ದ ಚಿನ್ನವನ್ನು ಅಮಾಯಕ ಪ್ರಯಾಣಿಕರ ಲಗೇಜ್‌ ಟ್ರ್ಯಾಲಿಗಳ ಮೂಲಕ ಸಾಗಿಸುತ್ತಿದ್ದ ಜಾಲವನ್ನು ಡಿಆರ್‌ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು ₹1.80 ಕೋಟಿ ಮೌಲ್ಯದ 1.3 ಕೆ.ಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಮಲೇಷ್ಯಾದ ಕೌಲಾಲಂಪುರದಿಂದ ಇಬ್ಬರು ಆರೋಪಿಗಳು ಚಿನ್ನವನ್ನು ಭಾರತಕ್ಕೆ ತಂದಿದ್ದರು ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್‌ ಟ್ರ್ಯಾಲಿಗಳಿಗೆ ಚಿನ್ನದ ಬಿಸ್ಕೆಟ್‌ಗಳನ್ನು ಅಂಟಿಸಿ, ಬಳಿಕ ಆ ಟ್ರ್ಯಾಲಿಗಳನ್ನು ಅಮಾಯಕ ಪ್ರಯಾಣಿಕರು ಬಳಸುವಂತೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಯಾಣಿಕರು ಚಿನ್ನದ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಟ್ರ್ಯಾಲಿ ತೆಗೆದುಕೊಂಡು ಕಸ್ಟಮ್ಸ್ ತಪಾಸಣೆ ದಾಟುತ್ತಿದ್ದರು. ಬಳಿಕ ಆರೋಪಿಗಳು ಆ ಪ್ರಯಾಣಿಕರನ್ನು ಹಿಂಬಾಲಿಸಿ, ಸೂಕ್ತ ಸಮಯದಲ್ಲಿ ಟ್ರ್ಯಾಲಿಯಿಂದ ಚಿನ್ನದ ಬಿಸ್ಕೆಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ಮೂಲಕ ಪ್ರಯಾಣಿಕರಿಗೆ ಅರಿವೇ ಇಲ್ಲದಂತೆ ಚಿನ್ನ ಸಾಗಾಟ ಮಾಡಿಸುವ ಹೊಸ ರೀತಿಯ ತಂತ್ರವನ್ನು ಆರೋಪಿಗಳು ಬಳಸುತ್ತಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಕುರಿತು ಖಚಿತ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳ ಚಟುವಟಿಕೆಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.

ಪ್ರಯಾಣಿಕರನ್ನು ಅರಿವಿಲ್ಲದೆ ಬಳಸಿಕೊಂಡು ಚಿನ್ನ ಸಾಗಾಟ ಮಾಡುತ್ತಿದ್ದ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button