
ಪ್ರಗತಿವಾಹಿನಿ ಸುದ್ದಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಬೆನ್ನಲ್ಲೇ, ಆಲ್‌ರೌಂಡರ್ ರವೀಂದ್ರ ಜಡೇಜಾ ಹಂಚಿಕೊಂಡಿರುವ ಪೋಸ್ಟ್ ತೀವ್ರ ಕುತೂಹಲ ಮೂಡಿಸಿದೆ.
ಬಿಸಿಸಿಐ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಖಾಲಿ ಇರುವ ಆಯ್ಕೆ ಸಮಿತಿ ಸದಸ್ಯ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೊರಡಿಸಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಜಡೇಜಾ, “What’s the procedure?” (ಇದರ ಪ್ರಕ್ರಿಯೆ ಏನು?) ಎಂದು ನಗುವಿನ ಎಮೋಜಿ ಜೊತೆ ಪ್ರಶ್ನಿಸಿದ್ದಾರೆ.
ಅಜಿತ್ ಅಗರ್ಕರ್ ಅಕ್ಟೋಬರ್ 4, 2026 ರಂದು ತಮ್ಮ ಸ್ಥಾನದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಜಡೇಜಾ ಈ ರೀತಿ ಪೋಸ್ಟ್ ಮಾಡಿರುವುದು ಹಲವು ಅನುಮಾನ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸಕ್ರಿಯರಾಗಿರದ ರವೀಂದ್ರ ಜಡೇಜಾ, ಬಿಸಿಸಿಐ ಪೋಸ್ಟ್‌ಗೆ ನೇರವಾಗಿ ಈ ರೀತಿ ಕಾಮೆಂಟ್ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದರ ಹಿಂದೆ ಕೆಲವು ಪ್ರಮುಖ ಕಾರಣಗಳಿವೆ ಎಂದು ಹೇಳಲಾಗುತ್ತಿದೆ.
ಅಜಿತ್ ಅಗರ್ಕರ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ರವೀಂದ್ರ ಜಡೇಜಾ ಅವರ ಆಯ್ಕೆಯ ಕುರಿತು ಹಲವು ಏರುಪೇರುಗಳು ಕಂಡುಬಂದಿದ್ದವು. 2024 ರ ಟಿ20 ವಿಶ್ವಕಪ್ ಗೆಲುವಿನ ನಂತರ ಜಡೇಜಾ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಆ ನಂತರ ನಡೆದ 2024 ರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮತ್ತು 2025 ರ ಆಸ್ಟ್ರೇಲಿಯಾ ಪ್ರವಾಸದ ಪ್ರಮುಖ ಏಕದಿನ ಪಂದ್ಯಗಳಿಂದ ಅವರನ್ನು ಕೈಬಿಡಲಾಗಿತ್ತು. ಇದು ಜಡೇಜಾ ಅವರಿಗೆ ಬೇಸರ ತರಿಸಿತ್ತು ಎನ್ನಲಾಗಿದೆ.
ಕ್ರಿಕೆಟ್ ಬಗ್ಗೆ ಗೊತ್ತಿರುವವರು ಯಾರು ಬೇಕಿದ್ದರೂ ಈ ಹುದ್ದೆಗೇರಬಹುದು, ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಗೊತ್ತಿದ್ದರೆ ಸಾಕು ಎಂಬಾರ್ಥದಲ್ಲಿ ಜಡೇಜಾ ಪರೋಕ್ಷವಾಗಿ ಅಜಿತ್ ಅಗರ್ಕರ್ಗೆ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




