Kannada NewsKarnataka NewsNational

*ಕಿಡಿ ಹೊತ್ತಿಸಿದ ಸೋಶಿಯಲ್ ಮಿಡಿಯಾ ಪೋಸ್ಟ್: ಲಾಠಿ ಚಾರ್ಜ್, ಕಲ್ಲು ತೂರಾಟ*

ಪ್ರಗತಿವಾಹಿನಿ ಸುದ್ದಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ಹಾಕಿದ ಒಂದು ಸೋಷಿಯಲ್‌ ಮೀಡಿಯಾ ಪೋಸ್ಟ್ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿದೆ.

ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆತ ಪೋಸ್ಟ್ ಮಾಡಿದ್ದ. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಲಾಗಿತ್ತು.

ಯುವಕ ಹಾಕಿದ ಪೋಸ್ಟ್ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು ಸೋಮವಾರ ರಾತ್ರಿ ಹೈಡ್ರಾಮಾವೇ ಸೃಷ್ಟಿಯಾಗಿದೆ.

ಉದಯಗಿರಿ ಠಾಣಾ ವ್ಯಾಪ್ತಿಗೆ ಸೇರಿದ ಬಡಾವಣೆಯ ಯುವಕನೊಬ್ಬ ಒಂದು ಕೋಮಿಗೆ ಅವಮಾನ ಮಾಡುವ ರೀತಿ ಪೋಸ್ಟ್ ಮಾಡಿ ಶೇರ್ ಮಾಡಿದ್ದನು. ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಅರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Home add -Advt

ಆದರೆ ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ಆದರೆ ಅಲ್ಲಿದ್ದ ಗುಂಪು ಇದನ್ನು ಕೇಳಲು ಸಿದ್ಧರಿರಲಿಲ್ಲ. ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋದದ್ದನ್ನು ಗಮನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅದಕ್ಕೂ ಬಗ್ಗದೇ ಹೋದಾಗ ಅಶ್ರುವಾಯು ಸಿಡಿಸಿ ಯುವಕರ ಗುಂಪನ್ನು ಚದುರಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Related Articles

Back to top button