ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರಾಣಿಗಳ ಹಿಂಸೆ ತಡೆ (ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಅನಿಮಲ್ ಕ್ರ್ಯುಯೆಲ್ಟಿ -ಎಸ್‌ಪಿಸಿಎ) ಸಮಿತಿಗಳನ್ನು ರಚಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬುಧವಾರ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ
ಡಾ.ಸೋನಾಲಿ ಸರ್ನೋಬತ್ ಮತ್ತು ಶಿವಾನಂದ್ ಡಂಬಳ ಅವರು ಜಿಲ್ಲಾಧಿಕಾರಿ ಡಾ.ಮಹಾಂತೇಶ ಹಿರೇಮಠ ಮತ್ತು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್. ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ), ಪುನರ್ವಸತಿ ಕೇಂದ್ರಗಳು, ಆಸ್ಪತ್ರೆಗಳು, ಆಂಬ್ಯುಲೆನ್ಸ್, ಬೀದಿ ನಾಯಿಗಳಿಂದಾಗುವ ಸಮಸ್ಯೆಗಳು ಸೇರಿದಂತೆ ಪ್ರತಿಯೊಂದು ಅಂಶಗಳ ಬಗ್ಗೆ ಚರ್ಚಿಸಲಾಯಿತು. ಎಲ್ಲವುಗಳ ಕುರಿತು ತ್ವರಿತ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದರು.
ಬೀದಿ ನಾಯಿಗಳನ್ನು ನಗರದಿಂದ ಹೊರಗೆ ಹಾಕಲಾಗುತ್ತದೆ ಎನ್ನುವ ಸುದ್ದಿಯ ಕುರಿತು ಸಹ ಚರ್ಚಿಸಲಾಯಿತು. ಆದರೆ ಇದು ಆಧಾರರಹಿತ ಸುದ್ದಿಯಾಗಿದ್ದು, ಅಂತಹ ಪ್ರಸ್ತಾವನೆ ಇಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಪ್ರಾಣಿ ಕಲ್ಯಾಣ ಮಂಡಳಿ ಉಪನಿರ್ದೇಶಕ ಅಶೋಕ್ ಕೊಲ್ಲಾ ಸಹ ಉಪಸ್ಥಿತರಿದ್ದರು.
ಎಸ್ ಪಿಸಿಎ ಸಮಿತಿಯಲ್ಲಿ ಜಿಲ್ಲಾಧಿಕಾರಿ, ಕಾರ್ಪೊರೇಷನ್ ಕಮಿಷನರ್, ಎಸ್‌ಪಿ, ಡಿಸಿಪಿ, ಡಿಡಿಪಿಐ, ಎನ್‌ಜಿಒಗಳು, ಗೋಶಾಲಾ ಪ್ರಮುಖರು, ಪ್ರಾಣಿ ಕಾರ್ಯಕರ್ತರು ಇರುತ್ತಾರೆ.
ಈ ಸಮಿತಿಯು ಜಿಲ್ಲೆಯಾದ್ಯಂತ ಪ್ರಾಣಿ ಕಲ್ಯಾಣ ಮತ್ತು ಪ್ರಾಣಿಗಳ ಕ್ರೌರ್ಯದ ವಿರುದ್ಧ ತೆಗೆದುಕೊಳ್ಳುವ ಕ್ರಮಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ