“ಸೈನಿಕರು ದೇಶ ರಕ್ಷಣೆಗೆ ಸದಾ ಸಿದ್ಧರು”- ಕರ್ನಲ್ ಸುಭಾಷ ಜಾದವ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : “ಪ್ರಸ್ತುತ ರಾಜಕೀಯ, ಸಾಮಾಜಿಕ, ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಕಾರ್ಯ ಅತ್ಯಂತ ಮುಖ್ಯವಾಗಿದೆ. ದೇಶದ ಜನರನ್ನು, ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಅದರಂತೆ ಪರಿಸರ ಸಂರಕ್ಷಿಸುವದರ ಮೂಲಕ ಜೀವದಾಯಿಯಾದ ನೀರನ್ನು ಮತ್ತು ನೈರ್ಮಲ್ಯವನ್ನು ಉಳಿಸಬೇಕಾಗಿದೆ.
ನಮ್ಮನ್ನು ನಾವು ಸದಾ ಶಿಸ್ಥಿಗೆ ಒಳಪಡಿಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಮಿಂಚಿ ಹೋಗುವ ವೇಳೆ ಮತ್ತೆ ಸಿಗಲಾರದು. ಅದಕ್ಕಾಗಿ ನಮ್ಮ ನಮ್ಮ ಕರ್ತವ್ಯ ನಿಷ್ಠೆ ಮೆರೆಯಬೇಕಾಗಿದೆ. ನಾನು ಸೈನಿಕನಾಗಿ ಹುಟ್ಟಿದ್ದೇನೆ ಸೈನಿಕನಾಗಿಯೇ ಸಾಯುತ್ತೇನೆ ಎಂಬ ಭಾವದ ಸೈನಿಕರು ದೇಶ ರಕ್ಷಣೆಗೆ ಸದಾ ಸಿದ್ಧರು” ಎಂದು ನಿವೃತ್ತ ಕರ್ನಲ್ ಸುಭಾಷ ಜಾದವ ಅವರು ನುಡಿದರು.
ನಗರದ ಎಸ್.ಕೆ.ಇ. ಸಂಸ್ಥೆಯ ಆರ್.ಪಿ.ಡಿ ಮಹಾವಿದ್ಯಾಲಯವು ಏರ್ಪಡಿಸಿದ. “ಆರ್ಪಿಡಿಯನ್ಸ ಡೇ-2019” ಬೃಹತ್ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ಕಮಾಂಡೋವಿಂಗ್‍ನ ಕರ್ನಲ್ ರಾಬಿನ್ ಫರ್ನಾಂಡೀಸ್ ಅವರು ಮಾತನಾಡಿ ಜೀವನ ಸರಳವಿಲ್ಲ ಅದನ್ನು ಸವಾಲಾಗಿ ಸ್ವೀಕರಿಸಿ ಬದ್ಧತೆಯಿಂದ ಗೆಲ್ಲಬೇಕು ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಶೃದ್ಧೆಯು ಬೆಳೆದು ಬರಬೇಕಾಗಿದೆ. ಎಂದು ನುಡಿದರು.
ಅಹಮದ್ ನಗರದ ಕರ್ನಲ್ ಜೀವನ ಝೇಂಡೆಯವರು ಜೀವನ ಸಾಧನೆಗೆ ಮಿತಿಯಿಲ್ಲ ಆಕಾಶ ಮುಟ್ಟುವ ಗುರಿ ಮತ್ತು ಅದಕ್ಕೆ ತಕ್ಕ ಮನಸ್ಸು ಮತ್ತು ಕಾರ್ಯ ನಮ್ಮದಾಗಿರಬೇಕು ಎಂದು ನುಡಿದರು.
ಎಸ್.ಕೆ.ಇ ಸಂಸ್ಥೆಯ ಉಪಾದ್ಯಕ್ಷರಾದ ಶ್ರೀ ಕಿರಣ ಠಾಕೂರ ಅವರು ಸಂಸ್ಥೆಯ ಬೆಳವಣಿಗೆಯಲ್ಲಿ ಸಂಸ್ಥಾಪಕರ ಕಾರ್ಯ ಮಹತ್ವದ್ದಾಗಿದೆ. ದೇಶ ಸೇವೆಗೆ ಶ್ರೇಷ್ಠ ಸೈನಿಕರನ್ನ ಕೊಟ್ಟ ಕೊಡುಗೆ ನಮ್ಮ ಸಂಸ್ಥೆಯದ್ದಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ ಶ್ರೀ ಆರ್.ಡಿ. ಶಾನಭಾಗ ಅವರು ವಹಿಸಿದ್ದರು. ದೇಶ ರಕ್ಷಣೆಗೆ ಸೇವೆ ಸಲ್ಲಿಸಿದ ಕರ್ನಲ್ ಸುಭಾಷ ಜಾದವ, ಕರ್ನಲ್ ಮಧುಕರ್ ಕದಂ, ಕರ್ನಲ್ ಜೀವನ ಝೇಂಡೆ, ಕರ್ನಲ್ ಎ.ಬಿ.ಜಾದವ, ಕರ್ನಲ್ ವಿ.ಎಸ್. ಕಾಳಂಗೆ, ಕರ್ನಲ್ ರಾಬಿನ್ ಫರ್ನಾಂಡಿಸ್, ಕರ್ನಲ್ ವಿಫುಲ್ ಚಂದ್ರನಾಥ, ಕರ್ನಲ್ ಸಂಜೀವ ಶಿಂಧೆ ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ಸಲ್ಲಿಸಿದ ಡಾ. ರಾಜೇಂದ್ರ ಪವಾರ, ಕುಸ್ತಿಪಟು ಅತುಲ ಶಿರೋಳೆ, ಸಹಕಾರ ಇಲಾಖೆಯ ಶ್ರೀನಿವಾಸ ಸಜ್ಜನ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ರಾಷ್ಟ್ರಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಕುಮಾರಿ ಅನುಷ್ಕಾ ಸ್ವಾಗತಗೀತೆಯನ್ನು ಹಾಡಿದರು. ಹಳೇ ವಿದ್ಯಾರ್ಥಿಗಳ ಒಕ್ಕೂಟದ ಚೇರಮನ್ನರಾದ ಪ್ರೋ ಪಸನ್ನ ಜೋಶಿಯವರು ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಸದಸ್ಯರಾದ ಶ್ರೀಮತಿ ಲತಾ ಕಿತ್ತೂರ ಅವರು ಸಂಸ್ಥೆಯ ಸಾಧನೆಯನ್ನು ಬಣ್ಣಿಸಿ ಪ್ರಸ್ತುತ ಅಮೃತ ಮಹೋತ್ಸವ ವರ್ಷದ ಚಟುವಟಿಕೆಗಳ ವಿವರಣೆಯನ್ನು ನೀಡಿದರು.
ಪ್ರೋ ಎಸ್.ಎಸ್ ಶಿಂಧೆ ಅವರು ಕಾರ್ಯಕ್ರಮದ ವಂದನಾರ್ಪಣೆ ಸಲ್ಲಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಅಪಾರ ಸಂಖ್ಯೆಯಲ್ಲಿ ಮಾಜಿ ಮತ್ತು ಹಾಜಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ