*ದೇಶ ಕಾಯುವ ಸೈನಿಕರು ಪ್ರತಿಯೊಬ್ಬರಿಗೂ ಸ್ಫೂರ್ತಿ- ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್*
ಮೊಹರೆಯಲ್ಲಿ ಮಾಜಿ ಸೈನಿಕರಿಂದ ಸನ್ಮಾನ
ಪ್ರಗತಿವಾಹಿನಿ ಸುದ್ದಿ: ದೇಶಕ್ಕಾಗಿ ತನ್ನ ಕುಟುಂಬವನ್ನೇ ತೊರೆದು ಜನರ ಹಿತ ಕಾಪಾಡುವ ಸೈನಿಕರು ಪ್ರತಿಯೊಬ್ಬರಿಗೂ ಸದಾ ಸ್ಫೂರ್ತಿ ಆಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಹೇಳಿದ್ದಾರೆ.
ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೊಹರೆ ಗ್ರಾಮದಲ್ಲಿ ಇಂದು ಮಾಜಿ ಸೈನಿಕರ ಕಲ್ಯಾಣ ಸಂಘವು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ದೇಶದ ಗಡಿ, ಯುದ್ಧ ಭೂಮಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ರಾಷ್ಟ್ರ ರಕ್ಷಿಸುವ ಸೈನಿಕರ ಕಾರ್ಯ ಅಸ್ಮರಣೀಯ ಎಂದರು.
ನಮ್ಮ ಸೇನೆ, ಸೈನಿಕರ ಬಗ್ಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ, ಗೌರವ ಇದೆ. ದೇಶ ಕಾಯುವ ಸೈನಿಕರು, ಅನ್ನ ಕೊಡುವ ರೈತರು ನಾವೆಲ್ಲರೂ ಸದಾ ಪ್ರೀತಿಸಬೇಕು. ಗೌರವಿಸಬೇಕು. ಸೈನಿಕರು ಮತ್ತು ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ನನಗಂತೂ ರೈತರು ಮತ್ತು ಸೈನಿಕರನ್ನು ಕಂಡರೆ ಗೌರವ ಪ್ರೀತಿ. ಅವರಿಲ್ಲದಿದ್ದರೆ ನಾವಿಲ್ಲ ಎಂದು ಸಚಿವರು ಹೇಳಿದರು.
ಇಡೀ ರಾಜ್ಯದಲ್ಲೇ ಬೆಳಗಾವಿ ಜಿಲ್ಲೆ ಹೆಮ್ಮೆ..!!
ಇಡೀ ಕರ್ನಾಟಕದಲ್ಲೇ ನಮ್ಮ ಜಿಲ್ಲೆ ಬೆಳಗಾವಿಯ ಬಗ್ಗೆ ನಮಗೆಲ್ಲ ದೊಡ್ಡ ಹೆಮ್ಮೆ ಎನಿಸುತ್ತದೆ. ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಸೈನಿಕರನ್ನು ಹೊಂದಿರುವ ಜಿಲ್ಲೆ ನಮ್ಮದು. ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಹಾಲಿ, ಮಾಜಿ ಸೈನಿಕರಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಗಡಿಯಲ್ಲಿ ಮಳೆ, ಚಳಿ, ಗಾಳಿ, ಬೀಸಲೆನ್ನದೆ ಸೈನಿಕರು ಬೆನ್ನಿಗೆ 50 ಕೆಜಿ, ಮುಂದೆ 20ಕೆಜಿಯಷ್ಟು ಹೊತ್ತು ದೇಶಕ್ಕಾಗಿ ದುಡಿಯುವುದನ್ನು ಬೇರೆ ಯಾರೂ ಮಾಡಲಾರರು. ಸೈನಿಕರ ಜೀವನ ಅಷ್ಟು ಸುಲಭದ್ದಲ್ಲ. ದೇಶಕ್ಕೊಸ್ಕರ ತಮ್ಮ ಯೌವನವನ್ನೇ ತ್ಯಾಗ ಮಾಡಿದವರು ಯಾರಾದರೂ ಇದು ಸೈನಿಕರು. ಅವರ ತ್ಯಾಗ, ಪರಿಶ್ರಮದಿಂದಲೇ ನಾವೆಲ್ಲ ಇಂದು ಪ್ರತಿನಿತ್ಯ ಸುಖನಿದ್ರೆ ಮಾಡುವಂತಾಗಿದೆ ಎಂದು ಹೇಳಿದರು.
ಸೈನಿಕರ ಕುಟುಂಬದ ಬಗ್ಗೆ ಕಾಳಜಿ
ಇಂದಿನ ವಿದ್ಯಾರ್ಥಿಗಳೂ ಮುಂದಿನ ಭವಿಷ್ಯದಲ್ಲಿ ದೇಶದ ಸೈನಿಕರಾಗಬೇಕೆಂಬ ಕನಸು ಕಂಡು ಮುನ್ನೆಡೆದರೆ ಅದಕ್ಕಿಂತ ದೊಡ್ಡಭಾಗ್ಯ ಬೇರೊಂದಿಲ್ಲ ಎಂದು ಹೇಳಿದ ಸಚಿವರು, ಸೈನಿಕರು, ಮಾಜಿ ಸೈನಿಕರಿಗೆ ಎಲ್ಲ ರೀತಿಯ ಸೌಲಭ್ಯ, ಗೌರವ ಕೊಡಲು ಬದ್ಧ. ಮಾಜಿ ಸೈನಿಕರು ಮತ್ತು ಅವರ ಕುಟುಂಬ ವರ್ಗದ ಶ್ರೇಯಸ್ಸಿಗಾಗಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷ ಸಣ್ಣಯಲ್ಲಪ್ಪ ತಳವಾರ, ಸಹೋದರಿ ರೋಹಿಣಿ ಪಾಟೀಲ, ಬಸವರಾಜ ತಳವಾರ, ಮಲ್ಲಯ್ಯ ಪೂಜಾರಿ, ನಾಗಪ್ಪ ಕಾಣರ್, ಆನಂದ ಜ್ಯೋತಿ, ಬಸಪ್ಪ ಮತ್ತಿಕೊಪ್ಪ, ರವಿ ಹೊನ್ನಣ್ಣವರ, ಸದಾಶಿವ ಹಿಟ್ಟನಗಿ, ದೀಪಕಗೌಡ ಪಾಟೀಲ, ಮಲ್ಲಿಕಾರ್ಜುನ ಕೇದಾರಿ, ದೇಶನೂರ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳಗಾವಿಯ ಅಧ್ಯಕ್ಷರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಾಜಿ ಸೈನಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ