Kannada NewsKarnataka NewsNational

*ತಂದೆಯ ಸಾವಿನ ಆಘಾತಕ್ಕೆ ಮಗನೂ ಬಲಿ; ಕೆಲವೇ ಗಂಟೆಗಳ ಅಂತರದಲ್ಲಿ ತಂದೆ-ಮಗ ಸಾವು*

ಪ್ರಗತಿವಾಹಿನಿ ಸುದ್ದಿ: ತಂದೆಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಮಗನೂ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 58 ವರ್ಷದ ಅಮೀನ್ ಸಾಬ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿರಿಯ ಮಗ 37 ವರ್ಷದ ಮೆಹಬೂಬ್ ದಾದಾಪೀರ್ ತೀವ್ರ ಆಘಾತಕ್ಕೊಳಗಾಗಿದ್ದಾನೆ. ಈ ವೇಳೆ ಲೋ ಬಿಪಿಯಿಂದ ಅಸ್ವಸ್ಥಗೊಂಡಿದ್ದ ಆತ ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ತಂದೆ ಮೃತಪಟ್ಟ ಎರಡ್ಮೂರು ಗಂಟೆಗಳ ಅಂತರದಲ್ಲೇ ಮಗನೂ ಕೊನೆಯುಸಿರೆಳೆದಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

ಇನ್ನು ಮೃತ ಮೆಹಬೂಬ್ ದಾದಾಪೀರ್ ಅವರಿಗೆ ಕೇವಲ ಎಂಟು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಹೊಸ ಬದುಕಿನ ಕನಸು ಕಾಣುತ್ತಿದ್ದ ಯುವಕ ದಿಢೀರ್ ಮೃತಪಟ್ಟಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಒಂದೇ ದಿನದಲ್ಲಿ ತಂದೆ ಮತ್ತು ಮಗ ಇಬ್ಬರನ್ನೂ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರ್ಘಟನೆಯಿಂದ ಇಡೀ ತಿಪ್ಪನಹಟ್ಟಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

Related Articles

Back to top button