*ಮುಖ್ಯೋಪಾಧ್ಯಾಯನಿಂದಲೇ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ: ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋನಾಲಿ ಸರ್ನೋಬತ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಗ್ರಾಮದ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಪಕರ ವಿರುದ್ಧ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ಆರೋಪ ಕೇಳಿಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಪೋಷಕರು, ಸಾರ್ವಜನಿಕರು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯೋಪಾಧ್ಯಾಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ಪ್ರಕರಣವನ್ನು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸೊರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಪೋಷಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಶಾಲೆಗಳು ವಿದ್ಯಾರ್ಥಿಗಳಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಸಂಸ್ಕಾರ ತುಂಬುವ ಕೇಂದ್ರಗಳಾಗಿರಬೇಕಾಗಿದ್ದು, ಆದರೆ ಇಂತಹ ಅಮಾನವೀಯ ಹಾಗೂ ವಿಕೃತ ಕೃತ್ಯಗಳು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಆರೋಪಿ ಮುಖ್ಯಾಧ್ಯಾಪಕರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು. ಆರೋಪಿತ ಮುಖ್ಯಾಧ್ಯಾಪಕರಿಗೆ ಕೆಲವು ರಾಜಕೀಯ ಪಕ್ಷಗಳಿಂದ ಪರೋಕ್ಷ ಬೆಂಬಲ ಅಥವಾ ರಕ್ಷಣೆಯನ್ನು ಒದಗಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಈ ಸಂವೇದನಾಶೀಲ ಪ್ರಕರಣದ ಕುರಿತು ಸಂಬಂಧಿಸಿದ ರಾಜಕೀಯ ಪಕ್ಷಗಳು ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ ಎಂದು ಸೋನಾಲಿ ಸರ್ನೋಬತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




