Latest

ಭಗವಂತನ ಸಂಸ್ಮೃತಿಯೇ ಸಂಪತ್ತು. ವಿಸ್ಮೃತಿಯ ವಿಪತ್ತು: ಸ್ವರ್ಣವಲ್ಲೀ ಶ್ರೀ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಭಗವಂತನ ಸಂಸ್ಮೃತಿಯೇ ಸಂಪತ್ತು. ವಿಸ್ಮೃತಿಯೇ ವಿಪತ್ತು. ಭಗವಂತನ ಧ್ಯಾನ ಮಾಡಿ ಹೊರ ಬಂದ ಅನೇಕ ಕಾಲದ ಬಳಿಕವೂ ಅವನ ಪ್ರಭಾವ ಇರುತ್ತದೆ. ಆಗ ಧೈರ್ಯವೂ ಇರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಮಂಗಳವಾರ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸರಳವಾಗಿ ಆಚರಿಸಲಾದ ಶ್ರೀಲಕ್ಷ್ಮೀ ನೃಸಿಂಹ ಜಯಂತಿ ಹಿನ್ನಲೆಯಲ್ಲಿ ಆನ್‌ಲೈನ್ ಮೂಲಕ ಶ್ರೀಗಳು ಆರ್ಶೀಚನ ನುಡಿದರು. ನಮ್ಮೊಳಗಿನ ಅಧೀರತೆ ನಿವಾರಣೆಗೆ ದೇವರ ಧ್ಯಾನ ಮಾಡಬೇಕು. ಇಂದು ಸಮಾಜದಲ್ಲಿ ಬಹಳ ಜನ ಅಧೈರ್ಯದಿಂದ ಬಳಲುತ್ತಿದ್ದಾರೆ. ಭಗವಂತನ ಸ್ಮರಣೆಯ ಮೂಲಕ ಧೈರ್ಯ ತಂದುಕೊಳ್ಳಬೇಕಿದೆ. ಇದು ಇಂದು ಅತೀ ಅವಶ್ಯವಿದೆ ಎಂದ ಶ್ರೀಗಳು, ಭಗವಂತನು ಗುರು ಗುರು. ಅವನು ಒಂದು ಗುರುವಲ್ಲ, ಎರಡು ಗುರು. ಗುರುವಿಗೂ ಗುರು ಭಗವಂತ. ಅವನನ್ನು ನೆನಪಿಸಿಕೊಂಡರೆ ಮನಸ್ಸಿಗೆ ಧೈರ್ಯ ಬರುತ್ತದೆ ಎಂದರು.

ಹಿರಣ್ಯ ಕಶ್ಯಪುವನ್ನು ಧ್ವಂಸ ಮಾಡಿದ ಭಗವಂತ. ನೃಸಿಂಹ ರೂಪಿ ಭಗವಂತನಿಗೂ ಹಿರಣ್ಯ ಕಶ್ಯಪುವಿಗೂ ಯುದ್ದ ನಡೆಯಿತು. ಆತ ಅವನ ಕರುಳನ್ನು ಮುರಿದದ್ದು ಏಕೆ? ಸುಮ್ಮನೆ ಸಂಹರಿಸಲಿಲ್ಲ ಯಾಕೆ? ಎಂಬುದಕ್ಕೆ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಭಗವಂತನು ಹರಿ ಭಕ್ತರ ವಿರುದ್ಧದ ಬೀಜ ಇದೆಯೋ ಎಂದು ಬಗೆದು ನೋಡಿದ್ದಾನೆ. ಭಕ್ತರನ್ನು ಕಂಡರೆ ಭಗವಂತನಿಗೆ ಅಷ್ಟು ಕಾಳಜಿ. ಆದರೆ, ನಾವು ಅವವನ್ನು ಶ್ರದ್ಧಾ ಭಕ್ತಿಗಳಿಂದ ಕರೆಯೋದಿಲ್ಲ. ಈ ಕಾರಣದಿಂದ ಈ ಮಾತು ಅನುಭವಕ್ಕೆ ಬರುವದಿಲ್ಲ. ಹಾಗಾಗಿ ಪ್ರಹ್ಲಾದನ ಅನುಭವ ನಮಗೆ ಬರೋದಿಲ್ಲ. ಶ್ರದ್ಧಾ ಭಕ್ತಿಯಿಂದ ಕರೆದರೆ ಅವನು ರಕ್ಷಣೆ ಮಾಡುವದು ಅನುಭವನಕ್ಕೆ ಬರುತ್ತದೆ. ಆಗ ಮನಸ್ಸಿಗೂ ಧೈರ್ಯ ಬರುತ್ತದೆ. ಭಕ್ತರ ರಕ್ಷಕನಾದ ಭಗವಂತ ಅವತರಿಸಿದ ದಿವಸ ಇದು ಎಂದರು.

ನೃಸಿಂಹ ಜಯಂತಿಯ ದಿನದಂದು ಕೃಷಿ ಜಯಂತಿ ಕಾರ್ಯಕ್ರಮ ಮಾಡುತ್ತಿದ್ದೆವು. ಆದರೆ, ಕಳೆದ ಎರಡು ವರ್ಷಗಳಿಂದ ಸಾಧ್ಯವಾಗಿಲ್ಲ. ಆದರೂ ಈ ಬಾರಿ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದಿಂದ ಅಂತರ್ಜಾಲ ಕೃಷಿ ರಸಪ್ರಶ್ನೆ ನಡೆಯಿತು. ರಾಜ್ಯದ 16ಕ್ಕೂ ಅಧಿಕ ಜಿಲ್ಲೆಗಳ 1900 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಭಾಗವಹಿಸುವಿಕೆಯಿಂದ ಸಂತೋಷ ಆಗುತ್ತದೆ. ರಾಜ್ಯದ ಬೇರೆ ಬೇರೆ ಜಿಲ್ಲೆ ಮಕ್ಕಳೂ ಪಾಲ್ಗೊಂಡಿದ್ದು, ಫಲಿತಾಂಶ ಹೊರ ಬಿದ್ದಿಲ್ಲ ಎಂದ ಶ್ರೀಗಳು, ಕೊರೋನಾ ರೋಗ ಆಘಾತಕಾರಿ ಪರಿಣಾಮ ಉಂಟು ಮಾಡಿದೆ. ಸಮಾಜದಲ್ಲಿ ಅನೇಕ ಬದಲಾವಣೆ ಕೂಡ ತರುತ್ತಿದೆ. ನಗರದಲ್ಲಿ ಇದ್ದ ಜನರನ್ನು ಹಳ್ಳಿ ಕಡೆ ದಬ್ಬಿ ಕಳಿಸಿದೆ. ಹಳ್ಳಿಗಳಲ್ಲಿ ಸೋಂಕು ಇದ್ದರೂ ನಗರದಷ್ಟು ತೀವ್ರತೆ ಇಲ್ಲ. ಎಲ್ಲರೂ ಕೃಷಿ ಜೀವನದಿಂದ ತೊಡಗಿಕೊಳ್ಳಬೇಕು. ಕೃಷಿ ಕಡೆ ಆಸಕ್ತರಾಗಬೇಕು. ಕೋವಿಡ್ ಸಂದರ್ಭದಲ್ಲಿ ಎಚ್ಚರಿಕೆ, ದೇವರ ಸ್ಮರಣೆ ಬೇಕು. ಎರಡನ್ನೂ ಸನುಸರಿಸೋಣ ಎಂದರು.

ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದವು. ಸಂಜೆ ಪ್ರಹ್ಲಾದ ಚರಿತ್ರೆ ಕೀರ್ತನೆಯನ್ನು ವಿ. ಶಂಕರ ಭಟ್ಟ ಉಂಚಳ್ಳಿ ಸಂಗಡಿಗರು ನಡೆಸಿಕೊಟ್ಟರು. ಆನ್‌ಲೈನ್‌ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲಾಯಿತು. ಭಕ್ತರು, ಶಿಷ್ಯರು ಶ್ರೀಗಳ ಸೂಚನೆಯಂತೆ ಅವರವರ ಮನೆಯಿಂದಲೇ ಭಕ್ತಿ ಶ್ರದ್ಧೆ ಸಲ್ಲಿಸಿದರು. ಭಕ್ತರು ಮನೆ ಮನೆಗಳಲ್ಲಿ ಮುತ್ಸಂಜೆ ದೇವರ ಮುಂದೆ ಪಾನಕ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.

ಭಗವಂತನನ್ನು ಅನೇಕ ಶ್ರದ್ಧಾ ಭಕ್ತಿಯಿಂದ ಕೂಗಿ ಕರೆದರೆ ಆತ ಬಂದೇ ಬರತ್ತಾನೆ. ನಮ್ಮ ಹೃದಯದಲ್ಲಿ ಅವನ ಸಾನ್ನಿಧ್ಯ ಕಂಡುಕೊಳ್ಳಲು ಆಗದೇ ಹೋದರೆ ಶತಮಾನಗಳ ಕಾಲ ಅನೇಕ ಉಪಾಸಕರು ಉಪಾಸನೆ ಮಾಡಿದ ಸಾನ್ನಿಧ್ಯಕ್ಕೆ ಹೋಗಿ ಭಕ್ತಿಯಿಂದ ಭಗವಂತನ ದರ್ಶನ ಮಾಡಿಕೊಳ್ಳಬೇಕಿದೆ ಎಂದು ಶ್ರೀಗಳು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button