Latest

ಮೈಸೂರಿಗೆ ಆಗಮಿಸಿದ ಸೋನಿಯಾ ಗಾಂಧಿ; 2 ದಿನ ರಾಜ್ಯದಲ್ಲೇ ವಾಸ್ತವ್ಯ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಬರಮಾಡಿಕೊಂಡರು. ಸಂಸದ ಡಿ ಕೆ ಸುರೇಶ್ ಅವರು ಹಾಜರಿದ್ದರು.

 

ಪ್ರಗತಿವಾಹಿನಿ ಸುದ್ದಿ; ಮೈಸೂರು; ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾರತ್ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ.

ದೆಹಲಿಯಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾ ಗಾಂಧಿ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದತೆ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.

ಕೊಡಗು ಪ್ರವಾಸ ರದ್ದು:
ಮೈಸೂರಿನಿಂದ ಸೋನಿಯಾ ಗಾಂಧಿಯವರು ಕೊಡಗಿಗೆ ಪ್ರಯಾಣ ಬೆಳಸಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಕೊಡಗು ಪ್ರವಾಸ ದಿಢೀರ್ ರದ್ದಾಗಿದೆ ಎಂದು ತಿಳಿದುಬಂದಿದೆ.

ಮೈಸೂರಿಗೆ ಆಗಮಿಸುತ್ತಿದ್ದಂತೆ ಸೋನಿಯಾ ಗಾಂಧಿ ವಿಶೇಷ ವಿಮಾನದಲ್ಲಿ ಕೊಡಗಿಗೆ ತೆರಳಬೇಕಿತ್ತು. ಆದರೆ ವಿಮಾನ ಹಾರಾಟಕ್ಕೆ ಪ್ರತಿಕೂಲ ಹವಾಮಾನವಿರುವುದರಿಂದ ಕೊಡಗು ಪ್ರವಾಸ ರದ್ದಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಮೈಸೂರಿನ ಕಬಿನಿ ಬಳಿ ರೆಸಾರ್ಟ್ ನಲ್ಲಿಯೇ ಎರಡು ದಿನ ವಿಶ್ರಾಂತಿ ಪಡೆಯಲಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಭೇಟಿ ವೇಳೆ ನಡೆದ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ, ಮೊಟ್ಟೆ ದಾಳಿ ಬೆಳವಣಿಗೆ ಬೆನ್ನಲ್ಲೇ ಆತಂಕ ವಾತಾವರಣವಿದ್ದು, ಭದ್ರತಾ ದೃಷ್ಟಿಯಿಂದ ಸೋನಿಯಾ ಗಾಂಧಿಯವರ ಕೊಡಗು ಪ್ರವಾಸ ರದ್ದು ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಅಕ್ಟೋಬರ್ 6ರಂದು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ:
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿಯವರು ಅಕ್ಟೋಬರ್ 6ರಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ 2 ದಿನ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ಯಾವ ಕಾರ್ಯಕರ್ತರು, ಮುಖಂಡರಿಗೆ ಭೇಟಿಗೆ ಅವಕಾಶವಿಲ್ಲ ಎಂದು ತಿಳಿಸಿದರು.

ಅ.5ರಂದು ಮೈಸೂರಿಗೆ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಅ.6ರಿಂದ ಖರ್ಗೆ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅ.6ರಂದೇ ಸೋನಿಯಾ ಗಾಂಧಿಯವರು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಇನ್ನು ಪ್ರಿಯಾಂಕಾ ಗಾಂಧಿ ಕೂಡ ಅ.7ರಂದು ರಾಜ್ಯಕ್ಕೆ ಆಗಮಿಸಲಿದ್ದು, ಅವರು ಕೂಡ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಒಟ್ಟಾರೆ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈಸೂರು ಹಾಗೂ ಹಳೇ ಮೈಸೂರು ಭಾಗದಲ್ಲಿ ಸಾಗುತ್ತಿರುವ ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

6 ರಾಜ್ಯಗಳ ವಿಧಾನಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್

https://pragati.taskdun.com/politics/6-stateby-electiondate-announce/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button