Kannada NewsKarnataka NewsLatest

ಶೀಘ್ರದಲ್ಲಿ 155 ಡಾಕ್ಟರ್ ನೇಮಕ: ಸಚಿವ ಅರಬೈಲ್ ಶಿವರಾಮ ಹೆಬ್ಬಾರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ರಾಜ್ಯ ಕಾರ್ಮಿಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಶೀಘ್ರದಲ್ಲಿಯೇ ೧೫೫ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಅರಬೈಲ್ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಇಲ್ಲಿನ ಅಶೋಕ ನಗರದಲ್ಲಿರುವ ಇ.ಎಸ್.ಐ. ಆಸ್ಪತ್ರೆಗೆ ಸೋಮವಾರ(ಜೂ.೨೨) ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಕಾರ್ಮಿಕ ಆಸ್ಪತ್ರೆಯಲ್ಲಿ ಒಟ್ಟು ೫೯೦ ವೈದ್ಯರ ಹುದ್ದೆಗಳಿದ್ದು, ೩೧೩ ಜನ ಕೆಲಸ ನಿರ್ವಹಿಸುತ್ತಿದ್ದು, ೨೭೭ ಡಾಕ್ಟರ್ ಕೊರತೆಯಿದೆ.
ಕೆ.ಪಿ.ಎಸ್.ಸಿ. ಮೂಲಕ ೧೫೫ ಜನ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಪತ್ರ, ಸಿಂಧುತ್ವ ಹಾಗೂ ದಾಖಲಾತಿಗಳ ಪರಿಶೀಲನೆ ಹಂತದಲ್ಲಿ ಇದೆ. ಇನ್ನೂ ಹತ್ತರಿಂದ ಹದಿನೈದು ದಿನಗಳಲ್ಲಿ ಅವರಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ.
ವೈದ್ಯರ ಕೊರತೆ ಇರುವ ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುವುದು.
ಕೋವಿಡ್-೧೯ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹಾಗೂ ರೋಗಿಗಳ ಆರೈಕೆ ಮತ್ತು ಸುರಕ್ಷತೆಗೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಕೊರತೆ ಇಲ್ಲ. ರಾಜ್ಯದಲ್ಲಿ ಈಗಾಗಲೇ ಒಂದು ವರ್ಷಕ್ಕೆ ೬೦೦ ಕೋಟಿ ರೂ.ಗಳ ಔಷಧಿಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಸಚಿವ ಹೆಬ್ಬಾರ್ ಅವರು ತಿಳಿಸಿದರು.
ಇಲಾಖೆಯಲ್ಲಿ ೨೨ ಲಕ್ಷದ ಜನ ಕಟ್ಟಡ ಕಾರ್ಮಿಕರಿದ್ದು, ಅದರಲ್ಲಿ ೧೪ ಲಕ್ಷ ಜನರಿಗೆ ಐದು ಸಾವಿರ ಪರಿಹಾರ ಧನ ಮುಟ್ಟಿದೆ. ಕಟ್ಟಡ ಕಾರ್ಮಿಕರನ್ನು ಹೊರತುಪಡಿಸಿದರೆ, ಮನೆ ಕೆಲಸದವರು, ಅಗಸರು, ಕ್ಷೌರಿಕ, ವಾದ್ಯ, ಟೇಲರ್ ವೃತ್ತಿಯವರ ದಾಖಲಾತಿಗಳು ಸರ್ಕಾರದ ಬಳಿ ಲಭ್ಯವಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಕಾರ್ಮಿಕ ಇಲಾಖೆಯಲ್ಲಿ ಒಟ್ಟು ಮೂರು ಒಕ್ಕೂಟಗಳಿವೆ. ಕಟ್ಟಡ ಕಾರ್ಮಿಕರ ಒಕ್ಕೂಟ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟಗಳು ಸಕ್ರಿಯವಾಗಿವೆ. ಕೇರಳದಲ್ಲಿ ೨೬, ಚೆನೈನಲ್ಲಿ ೧೯ ಒಕ್ಕೂಟಗಳಿವೆ ಎಂದು ಅವರು ತಿಳಿಸಿದರು.

೭೧೧ ಕೋಟಿ ಪರಿಹಾರಧನ ವಿತರಣೆ:
ಇಲಾಖೆಯಿಂದ ಒಂದು ಸಾವಿರ ಕೋಟಿ ರೂ. ಪರಿಹಾರಧನ ನೀಡಬೇಕಾಗಿತ್ತು. ಅದರಲ್ಲಿ ೭೧೧ ಕೋಟಿ ಪರಿಹಾರಧನ ಈಗಾಗಲೇ ನೀಡಲಾಗಿದೆ. ಇಲಾಖೆಯ ನಿಯಮಾವಳಿ ಪ್ರಕಾರ ಕಾರ್ಮಿಕರು ಜಾಬ್ ಕಾರ್ಡ್‌ಗಳನ್ನು ನವೀಕರಣ ಮಾಡಿಕೊಳ್ಳಬೇಕು. ಆದರೆ ಯಾರು ಕೂಡ ನವೀಕರಣ ಮಾಡಿಸಿಕೊಳ್ಳುವುದಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.ಆದರೆ ಕೋವಿಡ್-೧೯ ಪರಿಸ್ಥಿಯಲ್ಲಿ ಈ ಪದ್ದತಿಯನ್ನು ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಕಾರ್ಮಿಕರು ತಮ್ಮ ಜಾಬ್ ಕಾರ್ಡ್ ನವೀಕರಣ ಮಾಡಿಕೊಳ್ಳುವುದಲ್ಲದೇ ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಕಾರ್ಮಿಕ ಇಲಾಖೆ ಕಾರ್ಮಿಕ ಉಪ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ, ಸಹಾಯಕ ಕಾರ್ಮಿಕ ಆಯಕ್ತರಾದ ನಾಗೇಶ ಡಿ.ಜಿ, ಕಾರ್ಮಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರ, ತರುನ್ನುಮ್ ಬಂಗಾರಿ, ಇ.ಎಸ್.ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ಪ್ರಕಾಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯನ್ನು ಪರಿಶೀಲಿಸಿದ ಅವರು, ಮೂಲಸೌಕರ್ಯಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button