*ದಕ್ಷಿಣ ಭಾರತ ಜೈನ ಸಭೆ ಇತರೆ ಸಮಾಜಗಳಿಗೆ ಮಾದರಿಯಾಗಿದೆ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ : ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ದಕ್ಷಿಣ ಭಾರತ ಮಹಿಳಾ ಪರಿಷತ್ ಮತ್ತು ವೀರ ಮಹಿಳಾ ಪರಿಷತ್ ಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ನೀಡುವ ಜೊತೆಗೆ, ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಜೈನ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಕ್ಷಿಣ ಭಾರತ ಜೈನ ಸಭೆ ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಅವರು ಸೋಮವಾರ ಹಾರೂಗೇರಿಯ ಶ್ರೀ ಆಧಿನಾಥ ಸಮುದಾಯ ಭವನದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭೆಯ 103ನೇ ತ್ರೈಮಾಸಿಕ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಹಿಂಸೆ, ತ್ಯಾಗ, ಶಾಖಾಹಾರಗಳ ರಾಯಭಾರಿಯಂತೆ ವಿಶ್ವದಲ್ಲಿ ಶಾಂತಿಯ ಸಂದೇಶ ಸಾರುತ್ತಿರುವ ಧರ್ಮ ಜೈನ ಧರ್ಮ, ಒಂದು ಇರುವೆಯೂ ಸೇರಿದಂತೆ ಯಾವುದೇ ಜೀವಿಗೆ ನೋವನ್ನುಂಟು ಮಾಡಬಾರದೆನ್ನುವ ಮಹಾನ್ ಧ್ಯೇಯದ ಮೇಲೆ ನಿಂತಿರುವ ಧರ್ಮ ಎಂದು ಹೇಳಿದರು.

ಸುಮಾರು 120 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಸ್ತವನಿಧಿಯಲ್ಲಿ ಸ್ಥಾಪಿತಗೊಂಡ ದಕ್ಷಿಣ ಭಾರತ ಜೈನಸಭೆಯ ಕಾರ್ಯಗಳು ಇಂದು ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತ ಜೈನ ಸಭೆಯು ಸಮಾಜದ ಅಭಿವೃದ್ಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ. ಶಿಕ್ಷಣ, ಸಂಸ್ಕಾರ, ಮತ್ತು ಕೃಷಿಗೆ ಉತ್ತೇಜನ ನೀಡುವ ಮುಖ್ಯ ಉದ್ಧೇಶದಿಂದ ಸಭೆ ತನ್ನ ಕಾರ್ಯವನ್ನು ನಿರ್ವಹಿಸುತ್ತ ಬಂದಿದೆ. ಯುವಕರಲ್ಲಿ ಸಮಾಜ ಜಾಗೃತಿ ಮತ್ತು ದುಶ್ಚಟದಿಂದ ದೂರವಾಗಿರುವಂತೆ ನೋಡಿಕೊಳ್ಳಲು ವೀರ ಸೇವಾ ದಳ ಸ್ಥಾಪಿಸಿ ಯುವಕರಲ್ಲಿ ಸಮಾಜ ಜಾಗೃತಿ ಮೂಡಿಸುವ ಕಾರ್ಯ ಯಾರಾದರೂ ಮಾಡಿದ್ದರೆ ಅದು ದಕ್ಷಿಣ ಭಾರತ ಜೈನ ಸಭೆ ಅಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.
ಜೈನ ಧರ್ಮದ ಅಭಿವೃದ್ಧಿ ಪ್ರಸ್ತುತ ಕಾಂಗ್ರೆಸ್ ಸರಕಾರ ಹಲವಾರು ರೀತಿಯಲ್ಲಿ ನೆರವು ಒದಗಿಸಿದೆ. ಮುಂದಿನ ದಿನಗಳಲ್ಲಿ ಯಾವುದೇ ಕೆಲಸಗಳಾಗಬೇಕಾದರೆ ನಾವು ಸಹ ಕೈ ಜೋಡಿಸುತ್ತೇವೆ ಎಂದು ಚನ್ನರಾಜ ಭರವಸೆ ನೀಡಿದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ನಾಂದಣಿ ಹಾಗೂ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಕೊಲ್ಲಾಪುರ ವಹಿಸಿದ್ದರು.
ಈ ವೇಳೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಡಿ. ಸುಧಾಕರ್, ಬಾಲಚಂದ್ರ ಪಾಟೀಲ, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಾಜೇಂದ್ರ ಪಾಟೀಲ (ಯಡ್ರಾವಕರ್), ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ ಸವದಿ, ಡಿ.ಸಿ.ಸದಲಗೆ, ಚನ್ನಪ್ಪಣ್ಣಾ ಅಸ್ಕಿ, ಡಾ. ಮಹಾವೀರ ದಾನಿಗೊಂಡ, ಉತ್ತಮ ಪಾಟೀಲ, ಮಾಜಿ ಸಚಿವರಾದ ವೀರಕುಮಾರ್ ಪಾಟೀಲ, ಅಪ್ಪಾಸಾಬ್ ಕುಲಗುಡೆ ಉಪಸ್ಥಿತರಿದ್ದರು.