Belagavi NewsBelgaum NewsEducationKannada NewsKarnataka News

ದಕ್ಷಿಣ ವಲಯ ಕುಲಪತಿಗಳ ಸಮ್ಮೇಳನ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ವಿಶ್ವವಿದ್ಯಾಲಯಗಳ ಸಂಘದ (AIU) ದಕ್ಷಿಣ ವಲಯ ಕುಲಪತಿಗಳ ಸಮ್ಮೇಳನ-2023 ವನ್ನು  ದಿನಾಂಕ 26 ಮತ್ತು 27 -10-2023 ರ ಈ ಎರಡು ದಿನಗಳ ಕಾಲ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪ್ರೇಕ್ಷಾಗೃಹದಲ್ಲಿ ಆಯೋಜಿಸಲಾಗಿದೆ.

ಸಮಾರಂಭಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಮ್.ಸಿ.ಸುಧಾಕರ ಅವರು ಚಾಲನೆ ನೀಡಿದರು. ಕೊರೊನಾ ನಂತರದ ಕಾಲಘಟ್ಟದಲ್ಲಿ ಅನೇಕ ವಿಭಾಗದಲ್ಲಿ ಡಿಜಿಟಲ್ ವಿಭಾಗ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಅದರಲ್ಲೂ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಹುದಾಗಿದೆ. ATM ನಿಂದ ಬದಲಾಗಿ ಡಿಜಿಟಲ್ ಆ್ಯಪ್ ಮುಖಾಂತರ ಹಣಕಾಸು ವ್ಯವಹಾರ ಬಂದಿದೆ. ಇದು ಮನುಷ್ಯನ ಬದುಕನ್ನು ಪಾರದರ್ಶಕವನ್ನಾಗಿ ಮಾಡಿ ಮತ್ತು ವೇಗವನ್ನು ಹೆಚ್ಚಿಸಿದೆ ಎಂದು ಸುಧಾಕರ ಹೇಳಿದರು.
ಈ ನಿಟ್ಟಿನಲ್ಲಿ ಇದು ಇವತ್ತಿನ ಶಿಕ್ಷಣ ವ್ಯವಸ್ಥೆಯ ಭವಿಷ್ಯವಾಗಿದ್ದು ಇದರಲ್ಲಿ ಭಯರಹಿತ ವ್ಯವಸ್ಥೆಯನ್ನು ತರುವಲ್ಲಿ ಇಂದಿನ ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಇವತ್ತಿನ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಔದ್ಯೋಗಿಕ ರಂಗದ ಬೇಡಿಕೆಗಳು ತ್ವರಿತಗತಿಯಲ್ಲಿ ಬದಲಾವಣೆಯಾಗಿದ್ದು ಅದಕ್ಕೆ ತಕ್ಕಂತೆ ವಿವಿಗಳು ವಿದ್ಯಾರ್ಥಿಗಳಿಗೆ ಕೌಶಲ್ಯಭರಿತ ಶಿಕ್ಷಣವನ್ನು ನೀಡಬೇಕಿದೆ ಎಂದು ಹೇಳಿದರು. ಇದನ್ನು ಡಿಜಿಟಲ್ ಕ್ಷೇತ್ರದಲ್ಲಿ ಆದ ಬದಲಾವಣೆ ನಮಗೆ ಒದಗಿಸಿಕೊಡಬಹುದು ಎಂದು ಹೇಳಿದರು. ಅದಕ್ಕೆ ತಕ್ಕಂತೆ ಪ್ರಾಧ್ಯಾಪಕರಿಗೂ ತರಬೇತಿಯನ್ನು ನೀಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ AIU ಅಧ್ಯಕ್ಷರಾದ ಪ್ರೊ ಜಿ ಡಿ ಶರ್ಮಾ, ಕಾರ್ಯಕ್ರಮದ ಗೌರದ ಅತಿಥಿ ಪ್ರೊ .ಎಸ್ ಆರ್ ನಿರಂಜನ್, AIU ಕಾರ್ಯದರ್ಶಿ ಪಂಕಜ ಮಿತ್ತಲ, ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ ಎಸ್. ಹಾಗೂ ಕುಲಸಚಿವ ಪ್ರೊ ಬಿ ಈ ರಂಗಸ್ವಾಮಿ ಹಾಜರಿದ್ದರು. ಅತಿಥಿಗಳು  ಜ್ಯೋತಿ ಬೆಳಗುವುದರ ಮೂಲಕ ಕಾಯಕ್ರಮಕ್ಕೆ ಚಾಲನೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ ಎಸ್ ಸ್ವಾಗತಿಸಿದರು. ಪಂಕಜ ಮಿತ್ತಲ ಸೆಕ್ರೆಟರಿ ಜನರಲ್ ಎ.ಐ.ಯು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ದಕ್ಷಿಣ ವಲಯದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದಲ್ಲಿ ಈ ಮುಂಚೆ ಒಟ್ಟು ಆರು ಸಭೆಗಳನ್ನು ಮಾಡಲಾಗಿದ್ದು ಐದು ವಲಯ ಸಮಾರಂಭಗಳನ್ನು ಮಾಡಲಾಗಿದೆ. ಪ್ರಸ್ತುತ ಇದು ಕನಾಟಕದಲ್ಲಿ ಮೊಟ್ಟ ಮೊದಲಬಾರಿಗೆ ದಕ್ಷಿಣ ವಲಯದ  ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಕುಲಪತಿಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಭೆಯಲ್ಲಿ 2023 ರಿಂದ 2047 ರ ಮಧ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ಪರಿವರ್ತನೆ  ಹೇಗೆಲ್ಲ ಕೆಲಸ ಮಾಡಬಹುದು. ಅದು ನಮ್ಮ ಕಲಿಕೆಯಲ್ಲಿ ಸಂಶೋಧನೆ, ನಿರ್ಧಾರ ಕೈಗೊಳ್ಳುವಲ್ಲಿ, ಎಂಬುದನ್ನು ವಿವರಿಸುತ್ತ ಬಂದಿರುವ ಗಣ್ಯರು ಅನೇಕ ವಿಷಯಗಳನ್ನು ಕಲಿಸುತ್ತಾರೆ ಅನೇಕವಾದವುಗಳನ್ನು ಕಲಿಯಬಹುದಾಗಿದೆ. ಈ ಸಂಘವು ಇಡೀ ವಿಶ್ವದಲ್ಲಿಯೆ ಅತ್ಯಂತ ಅಧಿಕ ಸದಸ್ಯರುಗಳನ್ನು ಹೊಂದಿರುವ ಸಂಘವಾಗಿದ್ದು, ವಿಶ್ವದ ಅತ್ಯಂತ ಹಳೇಯ ಸಂಘಗಳಲ್ಲಿ ಎರಡನೇಯ ಸಂಘವಾಗಿದೆಯೆಂದು ತಿಳಿಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಪ್ರೊ. ಜಿ.ಡಿ ಶರ್ಮಾ ಅಧ್ಯಕ್ಷರು ಎ.ಐ.ಯು ಹಾಗು ಕುಲಪತಿ, ಯು.ಎಸ್.ಟಿ.ಎಮ್ ಮೇಘಾಲಯ ಇವರು ಮಾತನಾಡುತ್ತ ನಮ್ಮ ರಾಷ್ಟ್ರ ತಂತ್ರಜ್ಞಾನಕ್ಕೆ ವ್ಯಾಪಾರ ಮಾಡುವ ಸ್ಥಳವಾಗದೆ ಇಲ್ಲಿನ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಹುಟ್ಟು ಹಾಕಿ ಆರ್ಥಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿರಬೇಕು ಎಂದು ತಿಳಿಸಿದರು.

ತದನಂತರ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.  ಕರ್ನಾಟಕ  ಉನ್ನತ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಪ್ರೊ. ಎಸ್ ಆರ್.ನಿರಂಜನ ಮಾತನಾಡಿದರು. ವಿತಾವಿಯ ಕುಲಸಚಿವರಾದ ಡಾ. ಬಿ.ಈ ರಂಗಸ್ವಾಮಿ ಅವರು ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ಇದರಲ್ಲಿ ಸುಮಾರು 80 ಕ್ಕಿಂತ ಹೆಚ್ಚು ಕುಲಪತಿಗಳು, 100 ಕ್ಕೂ ಹೆಚ್ಚು ಪ್ರಾಚಾರ್ಯರು ಹಾಗೂ ಔದ್ಯೋಗಿಕ ರಂಗದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button