
ಪ್ರಗತಿವಾಹಿನಿ ಸುದ್ದಿ, ಶಿರಸಿ:  ಒಂದೇ ಪಕ್ಷದವರಾಗಿದ್ದರೂ ಹಾವು-ಮುಂಗುಸಿಯಂತಿದ್ದ ಸಂಸದ ಅನಂತಕುಮಾರ ಹೆಗಡೆ ಮತ್ತು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಪರಸ್ಪರ ಭೇಟಿಯಾದರು. 
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನಂತಕುಮಾರ ಹೆಗಡೆ ಮನೆಗೆ ಭೇಟಿ ನೀಡಿದ್ದರು. ಈ ಭಾಗದಲ್ಲಿ ಇದು ಭಾರಿ ಚರ್ಚೆಗೆ ಕಾರಣವಾಯಿತು.
ಇತ್ತೀಚಿಗಷ್ಟೇ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ದೀರ್ಘ ವಿಶ್ರಾಂತಿಯಲ್ಲಿದ್ದ ಮಾಜಿ ಕೇಂದ್ರಸಚಿವ, ಸಂಸದ ಅನಂತಕುಮಾರ ಹೆಗಡೆ ನಿವಾಸಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಶಾಸಕ ಕಾಗೇರಿ ಹಾಗು ಸಂಸದ ಅನಂತಕುಮಾರ ನಡುವೆ ಈ ಮೊದಲು ಸಾಕಷ್ಟು ಭಿನ್ನಾಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಪದೇ ಪದೇ ಕೇಳಿ ಬಂದಿತ್ತು. ಆದರೆ ಜಿಲ್ಲೆಯ ಈ ಎರಡು ರಾಜಕೀಯ ದಿಗ್ಗಜರ ಭೇಟಿ, ಕ್ಷೇತ್ರದ ಜನರಲ್ಲಿ ಒಂದು ಹೊಸ ಚರ್ಚೆಗೆ ಕಾರಣವಾಗಿದೆ.
ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿಯಾಗುತ್ತಾರೆ ಎನ್ನುವ ವಿಷಯವೂ ಈಚೆಗೆ ಭಾರಿ ಸುದ್ದಿಯಾಗಿತ್ತು. ಹಾಗಾಗಿ ಕಾಗೇರಿ ಭೇಟಿ ಮಹತ್ವ ಪಡೆದಿತ್ತು.
				
				
					 
					 
				 
					 
					 
					 
					
 
					


