ವಿಶಿಷ್ಟ ಮುಸ್ಲಿಂ ಉಡುಪನ್ನು ಧರಿಸಿದ ಆರು ಮಂದಿ ಕೂಪರ್ ಆಸ್ಪತ್ರೆಯಿಂದ ಹಿಂದೂ ಶವವನ್ನು ಹೊತ್ತುಕೊಂಡು ಮೊದಲ ಬಾರಿಗೆ ಓಶಿವಾರ ಸ್ಮಶಾನಕ್ಕೆ ಬಂದಾಗ, ಸ್ಮಶಾನದ ಸಿಬ್ಬಂದಿ ಭಯಭೀತರಾದರು.
ಕನ್ನಡಕ್ಕೆ : ಶಾಮ ಹಂದೆ
-
*ಗಾಂಧೀಜಿ ತತ್ವ, ಸಿದ್ಧಾಂತಗಳೇ ಕಾಂಗ್ರೆಸ್ ಆಶಯ*7 hours ago
ವಿಶಿಷ್ಟ ಮುಸ್ಲಿಂ ಉಡುಪನ್ನು ಧರಿಸಿದ ಆರು ಮಂದಿ ಕೂಪರ್ ಆಸ್ಪತ್ರೆಯಿಂದ ಹಿಂದೂ ಶವವನ್ನು ಹೊತ್ತುಕೊಂಡು ಮೊದಲ ಬಾರಿಗೆ ಓಶಿವಾರ ಸ್ಮಶಾನಕ್ಕೆ ಬಂದಾಗ, ಸ್ಮಶಾನದ ಸಿಬ್ಬಂದಿ ಭಯಭೀತರಾದರು. ಆದರೆ ಅವರ ಬಳಿ ಸಾವಿನ ಪ್ರಮಾಣ ಪತ್ರವಿತ್ತು. ಆಸ್ಪತ್ರೆ ಪತ್ರ ಮತ್ತು ಮೃತ ವ್ಯಕ್ತಿಯ ಕುಟುಂಬದವರ ವೀಡಿಯೊ ಸಂದೇಶವಿತ್ತು. ಸ್ಮಶಾನದಲ್ಲಿದ್ದ ಸಿಬ್ಬಂದಿ ಅಂತಿಮ ಕ್ರಿಯೆಗೆ ಸಿದ್ಧರಾದ್ದರು. ಮೊದಲ ದಿನವಾದ್ದರಿಂದ ಮುಸ್ಲಿಂ ಕಾರ್ಯಕರ್ತರಿಗೆ ಹೊಸಬರಂತೆ ಸಮಸ್ಯೆ ಎದುರಾಗಿರಬೇಕು. ಆದರೂ ಮಾಹಿತಿ ತೆಗೆದುಕೊಳ್ಳುತ್ತಾ ಅವರು ಅಂತ್ಯಕ್ರಿಯೆಯನ್ನು ನಡೆಸಿದರು.
ಹಿಂದೂ ಪದ್ದತಿಯಂತೆ ಅಂತ್ಯ ವಿಧಿ-
ಕೋವಿಡ್ ಸೋಂಕಿನಿಂದ ಸಾವನಪ್ಪಿದ್ದ ಹಿಂದೂ ಜನರ ಶವಗಳ ಅಂತ್ಯವಿಧಿ ನೆರವೇರಿಸಲು ಕುಟುಂಬದವರು ಹಿಂದೇಟು ಹಾಕುವಾಗ,ಮುಂಬೈನ ಪ್ರಸಿದ್ಧ ಬಡಾ ಕಬ್ರಸ್ಥಾನದಲ್ಲಿಯ ಮುಸ್ಲಿಮರು ಮುಂದೆ ಬಂದರು.
ಒಂದಲ್ಲ, ಎರಡಲ್ಲ 300 ಕ್ಕೂ ಹೆಚ್ಚು ಹಿಂದೂ ಶವಗಳಿಗೆ ಈ ಮುಸ್ಲಿಂ ಕಾರ್ಯಕರ್ತರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅದೂ ಕೂಡ ಹಿಂದೂ ಪದ್ದತಿಯಂತೆ. ಕುತ್ತಿಗೆಗೆ ತುಳಸಿ ಹಾರವನ್ನು ಹಾಕಿ, ಚಿತೆಯನ್ನು ರಚಿಸಿ, ಹೆಗಲ ಮೇಲೆ ಮಡಕೆಯನ್ನು ಹೊತ್ತು, ಪ್ರದಕ್ಷಿಣೆ ಸುತ್ತಿ, ನಂತರ ಪಾಲಿಕೆಯ ಆದೇಶದಂತೆ ವಿದ್ಯುತ್ ಚಿತಾಗಾರದಲ್ಲಿ ಮಂತ್ರಾಗ್ನಿ ನೀಡಿದ್ದಾರೆ.
ಲೈವ್ ಅಂತ್ಯವಿಧಿ
ತಮ್ಮ ಮೊಬೈಲ್ನಿಂದ ವಾಟ್ಸಾಪ್ ವಿಡಿಯೋ ಕರೆ ಮಾಡಿ ಎಲ್ಲಾ ಅಂತ್ಯಕ್ರಿಯೆಗಳನ್ನು ಮೃತ ಕುಟುಂಬದವರಿಗೆ ತೋರಿಸಿದ್ದಲ್ಲದೇ ಕುಟುಂಬದವರು ವಿನಂತಿ ಮಾಡಿದ್ದರಿಂದ ಅಸ್ಥಿಯನ್ನು ವಿಸರ್ಜಿ ಸಿದ್ದಾರೆ. ಕೇಳಿದವರ ಮನೆಗಳಿಗೆ ಅಸ್ಥಿಯನ್ನು ತಲುಪಿಸಿದ್ದಾರೆ. ಅದೂ ಕೂಡ ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಉಚಿತವಾಗಿ. ಬದಲಾಗಿ ಬ್ರಾಹ್ಮಣರಿಗೆ ದಕ್ಷಿಣೆ ಕೂಡ ನೀಡಿದ್ದೂ ಇವರೇ. ಪುರೋಹಿತರು 20 ಅಡಿ ದೂರ ನಿಂತು ಸೂಚನೆಗಳನ್ನು ನೀಡುತ್ತಿದ್ದರು. ನಮಾಜಿನ ಟೋಪಿಯನ್ನು ಧರಿಸಿದ ಮುಸ್ಲಿಮ್ ಹಿಂದೂ ಮಂತ್ರಗಳನ್ನು ಜಪಿಸುತ್ತಾ ಶವಗಳಿಗೆ ಕೊನೆಯ ಮುಖಾಗ್ನಿಯನ್ನು ನೀಡುತ್ತಿದ್ದರು.
ಹಿಂದೂಗಳಲ್ಲಿಯೂ ಅನೇಕ ಪದ್ದತಿಗಳಿವೆ. ಕುಟುಂಬ ಸದಸ್ಯರು ಹೇಳಿದಂತೆ ಅವರು ಪ್ರತಿಯೊಂದು ಪದ್ಧತಿಯನ್ನು ಪಾಲಿಸಿದರು. ಒಂದು ಕುಟುಂಬದಲ್ಲಂತೂ ಒಬ್ಬಳೇ ಮಗಳಿದ್ದಳು. ಸಂಬಂಧಿಕರು ಬರಲೂ ಸಿದ್ಧರಿರಲಿಲ್ಲ. ಇಕ್ಬಾಲ್ ಮಮದಾನಿ ಆ ಬಾಲಕಿಯನ್ನು ಮುಂಬಯಿಯ ಪ್ರಸಿದ್ದ ಬಾಣಗಂಗಾಕ್ಕೆ ಕರೆದೊಯ್ದರು. (ಶ್ರೀರಾಮ ದಂಡಕಾರಣ್ಯದಲ್ಲಿರುವಾಗ ಇಲ್ಲಿಗೆ ಬಂದಿದ್ದರು. ಅವರ ಬಾಣದಿಂದಲೇ ಇಲ್ಲಿ ಗಂಗೆ ಪ್ರಕಟವಾಗಿದ್ದಾಳೆ ಎಂಬ ದಂತ ಕಥೆಯಿದೆ.) ಬಾಣಗಂಗಾದಲ್ಲಿ ಬಾಲಕಿ ಕುಟುಂಬದವರ ಅಸ್ಥಿಯನ್ನು ಹಿಂದೂ ವಿಧಿ ಪ್ರಕಾರ ವಿಸರ್ಜಿಸಿದರು.
ರಾಮ್ ನಾಮ್ ಸತ್ಯ ಹೈ
ಉತ್ತರ ಪ್ರದೇಶದ ಕಾನ್ಪುರ ಬಳಿ ಹಳ್ಳಿಯೊಂದರಲ್ಲಿ ಹಿಂದೂ ವೃದ್ದರೊಬ್ಬರು ಸಾವಿಗೀಡಾಗಿದ್ದರು. ಅವರ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಕೈಯಲ್ಲಿ ಮಡಕೆ ಹಿಡಿದು, ರಾಮ್ ನಾಮ್ ಸತ್ಯ ಹೈ ಎಂದು ಜಪಿಸುತ್ತಾ ಮುಸ್ಲಿಮರಿಂದ ಅಂತ್ಯಯಾತ್ರೆ ನಡೆಸಲಾಯಿತು. ಕಾರಣ ಲಾಕ್ಡೌನ್ ನಿಂದ ಅವರ ಯಾವುದೇ ಸಂಬಂಧಿಕರಿಗೆ ಬರಲು ಸಾಧ್ಯವಿರಲಿಲ್ಲ. ಗ್ರಾಮದಲ್ಲಿ ಎಲ್ಲ ಮುಸ್ಲಿಮರು, ಕೇವಲ ಒಂದೇ ಮನೆ ಹಿಂದೂವಿನದ್ದಾಗಿತ್ತು. ಮನೆಯ ಸದಸ್ಯರೆಲ್ಲ ಕೆಲಸದ ನಿಮಿತ್ತ ನಗರ ನಿವಾಸಿಗಳಾಗಿದ್ದರು. ವೃದ್ಧನನ್ನು ನೆರೆಹೊರೆಯ ಮುಸ್ಲಿಮರೇ ನೋಡಿಕೊಳ್ಳುತ್ತಿದ್ದರು. ಆದರೆ ಅಂತ್ಯಕ್ರಿಯೆಯನ್ನು ಹೇಗೆ ಮಾಡುವುದು? ಎಂಬ ಪ್ರಶ್ನೆಯಾಗಿತ್ತು. ಸಂಬಂಧಿಕರು ನೀವೇ ಮಾಡಿ ಎಂದು ಹೇಳಿದಾಗ ಮುಸ್ಲಿಂ ಯುವಕರು ಸೇರಿ ಮುಂದಿನ ಕಾರ್ಯಗಳನ್ನು ವಿಧಿವತ್ತಾಗಿ ನಡೆಸಿದರು. ರಾಮ್ ನಾಮ್ ಸತ್ಯ ಹೈ ಎಂಬ ಧ್ವನಿಯನ್ನು ಆ ವೀಡಿಯೋದಲ್ಲಿ ನೀವು ನೋಡಿರಬಹುದು. ಅದೇ ಪ್ರತಿಧ್ವನಿ ಮುಂಬಯಿಯಲ್ಲಿ 300 ಶವಗಳ ಅಂತ್ಯಕ್ರಿಯೆಯಲ್ಲಿ ಕೂಡ ಕೇಳಿಬಂತು. ಕಾರಣ ಕೊರೋನಾ ಸೋಂಕಿಗೆ ಬಲಿಯಾದವರ ಮೃತದೇಹವನ್ನು ಸ್ಪರ್ಶಿಸುವರಾರು?
ಬೆಂಬಲವಾಗಿ ನಿಂತ ಶೋಯೆಬ್ ಖತೀಬ್
ಇಲ್ಲಿ ಇಕ್ಬಾಲ್ ಮಮದಾನಿ ಮತ್ತು ಅವರ ಸಹೋದ್ಯೋಗಿಗಳ ಹಿಂದೆ ಬೆಂಬಲವಾಗಿ ನಿಂತವರು ಬಡಾ ಕಬ್ರಸ್ಥಾನದ ಅಧ್ಯಕ್ಷರಾದ ಶೋಯೆಬ್ ಖತೀಬ್. ಅನೇಕರಿಗೆ, ಅವರು ಕಬ್ರಸ್ಥಾನದ ಜಾಗವನ್ನೇ ಒದಗಿಸಿದರು. ಹಿಂದೂ ಶವಗಳ ಅಂತ್ಯವಿಧಿ ನೆರವೇರಿಸುವಾಗ ತನ್ನ ಧರ್ಮ ಭ್ರಷ್ಟವಾಗುವ ಯೋಚನೆಯೂ ಅವರಿಗೆ ಬರಲಿಲ್ಲ. ಹಿಂದೂಗಳಷ್ಟೇ ಅಲ್ಲ, ಕೆಲವು ಪಾರ್ಸಿ ಮತ್ತು ಕ್ರಿಶ್ಚಿಯನ್ನರ ಶವಗಳನ್ನು ಅವರ ಧಾರ್ಮಿಕ ವಿಧಿಗಳ ಪ್ರಕಾರ ವಿಲೇವಾರಿ ಮಾಡಿದರು. ಪಾರ್ಸಿಗಳ ಪದ್ಧತಿ ಬೇರೆ, ಕ್ರಿಶ್ಚಿಯನ್ ಪದ್ಧತಿಯೇ ಬೇರೆ . ಆದರೂ ಎಲ್ಲಾ ವಿಧಿಗಳನ್ನು ಅಚ್ಚುಕಟ್ಟಾಗಿ ಖತೀಬ್ ಮತ್ತು ಮಮದಾನಿ ತಂಡ ಮೃತ ವ್ಯಕ್ತಿಗಳ ಧರ್ಮದ ಪ್ರಕಾರ ನಡೆಸಿತು.
ನಾವೂ ಇದನ್ನು ಮಾಡಬಹುದೆ?
ಇಕ್ಬಾಲ್ ಮಮದಾನಿ ಹೇಳುತ್ತಿದ್ದರು, ನಾವು ಮುಸ್ಲಿಂರ ಶವಗಳನ್ನು ವಿಲೇವಾರಿ ಮಾಡುತ್ತಿರುವಾಗ ಚಿತಾಗಾರದಲ್ಲಿ ಅನೇಕ ಶವಗಳು ಬಿದ್ದಿರುವುದು ಗಮನಕ್ಕೆ ಬಂತು. ನಾವು ವೈದ್ಯರನ್ನು ಕೇಳಿದಾಗ, ಇವು ಹಿಂದೂಗಳ ಶವಗಳಾಗಿವೆ. ಯಾರೂ ಬರಲು ಸಿದ್ಧರಿಲ್ಲ ಎಂದು ತಿಳಿಸಿದಲ್ಲದೇ ಪಾಲಿಕೆಯ ಸಿಬ್ಬಂದಿಗಳ ಶಕ್ತಿ ಕೂಡ ಈಗ ಕ್ಷೀಣಿಸುತ್ತಿದೆ ಎಂದರು. “ನಾವು ಇದನ್ನು ಮಾಡಬಹುದೆ?” ನಾವು ಅವರ ಪದ್ದತಿಯಂತೆ ಮಾಡುತ್ತೇವೆ ಎಂದು ಕೇಳಿದಾಗ, “ಸರಿಯಾದ ದಾಖಲೆಗಳನ್ನು ಪಡೆದು ಮಾಡಿ. ಇದಕ್ಕಿಂತ ಉತ್ತಮವಾದದ್ದು ಏನಿದೆ” ಎಂದು ವೈದ್ಯರು ಅನುಮತಿ ನೀಡುತ್ತಲೇ ತಂಡವು ಏಪ್ರಿಲ್, ಮೇ, ಜೂನ್ ಮತ್ತು ಈಗ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ತಂಡದಲ್ಲಿ ಇನ್ನೂರು ಯುವಕರಿದ್ದಾರೆ. ಆದರೆ ಇದನ್ನು ಪ್ರಾರಂಭಿಸಿದ ಮೊದಲ ಏಳು ಜನರ ಹೆಸರನ್ನು ನಾನು ನಮೂದಿಸಲೇಬೇಕು. ಬಡಾ ಕಬ್ರಸ್ಥಾನದ ಅಧ್ಯಕ್ಷರಾದ ಶೋಯೆಬ್ ಖತೀಬ್, ಹಿರಿಯ ಪತ್ರಕರ್ತ ಇಕ್ಬಾಲ್ ಮಮದಾನಿ, ಉದ್ಯಮಿ ಶಬೀರ್ ನಿರ್ಬನ್, ಅಡ್ವಕೇಟ್ ಇರ್ಫಾನ್ ಶೇಖ್, ಉದ್ಯಮಿ ಸಲೀಮ್ ಪಾರೇಖ್, ಉದ್ಯಮಿ ಸೊಹೈಲ್ ಶೇಖ್, ಸಾಮಾಜಿಕ ಕಾರ್ಯಕರ್ತ ರಫೀಕ್ ಸುರತಿಯಾ.
ಎಲ್ಲಾ ಸೇವೆ ಉಚಿತ
ಆರಂಭದಲ್ಲಿ ಆಂಬುಲೆನ್ಸ್, ಶವವಾಹಿನಿಯ ಸಮಸ್ಯೆ ಇತ್ತು. ಕೋವಿಡ್ ಸೊಂಕಿತರಿಗಾಗಿ ಸಂಬಂಧಿಕರೇ ಬರದಿದ್ದರೆ, ಅವರಿಗೆ ಆಂಬ್ಯುಲೆನ್ಸ್ ಎಲ್ಲಿ ಸಿಗುತ್ತದೆ? ಆಗ ಮಮದಾನಿ ಮತ್ತು ಖತೀಬ್ ಅವರು ಹಾಳಾಗಿ ಬಿದ್ದಿರುವ ಆಂಬುಲೆನ್ಸ್ ಶೋಧಿಸಿ ಅದನ್ನು ಸರಿಪಡಿಸಿದರು. ಈಗ ಅವು ನಿರಂತರವಾಗಿ ಕೆಲಸ ಮಾಡುತ್ತಿವೆ. ಖತೀಬ್ ಭಾಯ್, ಇಕ್ಬಾಲ್ ಭಾಯ್ ಮತ್ತು ಅವರ ಇಡೀ ತಂಡ ಈ ಕೆಲಸಕ್ಕಾಗಿ ಒಂದೇ, ಒಂದು ರೂಪಾಯಿ ತೆಗೆದುಕೊಳ್ಳುವುದಿಲ್ಲ. ಎಲ್ಲಾ ಖರ್ಚುಗಳನ್ನು ಸ್ವತಃ ಭರಿಸುತ್ತಾರೆ. ಕೆಲವು ದಾನಿಗಳು ಅವರಿಗೆ ಸಹಾಯ ಮಾಡಿದ್ದಾರೆ. ಆದರೆ ಅವರು ಮೃತರ ಸಂಬಂಧಿಕರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ. ಲಾಕ್ಡೌನ್ ನಿಂದ ಮೊದಲೇ ಜನರು ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾರೆ. ಅಂತಿಮ ವಿಧಿಗಳಿಗೆ ಅವರಿಂದ ಹಣವನ್ನು ಕೇಳುವುದಾದರು ಹೇಗೆ? ಎಂಬುದು ಇಕ್ಬಾಲ್ ಭಾಯ್ ಅವರ ಪ್ರಶ್ನೆ. ಇಕ್ಬಾಲ್ ಭಾಯ್ ಮತ್ತು ಅವರ ತಂಡ ತಮ್ಮ ಕುಟುಂಬವನ್ನು ಲೆಕ್ಕಿಸದೆ ಈ ಕೆಲಸ ಮಾಡುತ್ತಿದ್ದಾರೆ. ಪ್ರಚಾರ ಬಯಸದೇ ಮಾಡುವ ಕಾರ್ಯಕ್ಕೆ ಮುಕ್ತ ಮನಸ್ಸಿನಿಂದ ಸಲಾಂ ಮಾಡಬಹುದೇ?
ಬೆಂಗಳೂರಿನ ಮುಸ್ಲಿಂ ಯುವಕರಿಗೂ ಸಲಾಂ
ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಹಾಗೂ ಕಾವಲ ಭೈರಸಂದ್ರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ವ್ಯಾಪಕ ಹಿಂಸಾಚಾರದಲ್ಲಿ ಕಿಡಿಗೇಡಿಗಳು ರಾಕ್ಷಸ ಕೃತ್ಯ ಎಸಗುತ್ತಿರುವಾಗ ಮುಸ್ಲಿಂ ಯುವಕರ ತಂಡವೊಂದು ಆಂಜನೇಯ ಸ್ವಾಮಿ ದೇವಾಲಯದ ಸುತ್ತಲೂ ಮಾನವ ಸರಪಳಿ ರಚಿಸಿಕೊಂಡು ರಕ್ಷಣೆಗೆ ನಿಂತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಆತಂಕವೇ ಆವರಿಸಿದ ಸಂದರ್ಭದಲ್ಲಿ ಮುಸ್ಲಿಂ ಯುವಕರ ಈ ದಿಟ್ಟ ಮಾನವೀಯ ಬದ್ಧತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
ಜಾತಿ ಧರ್ಮ ಎನ್ನುವುದು ಹುಟ್ಟಿನಿಂದ ಗುರುತಿಸಲಾಗುವ ಒಂದು ಸಂಕೇತವೇ ಹೊರತು ಬೇರೆ ಯಾರನ್ನೂ ಕೀಳಾಗಿ ನೋಡಲು ದೊರೆಯುವ ಪರವಾನಗಿಯಲ್ಲ. ವೈಯಕ್ತಿಕವಾಗಿ ಯಾರು ಯಾವ ಧರ್ಮವನ್ನು ಅನುಸರಿಸಿದರೂ ಅಂತಿಮವಾಗಿ ಎಲ್ಲರೂ ಮಾನವ ಧರ್ಮದ ಅನುಯಾಯಿಗಳೇ ಆಗಿದ್ದೇವೆ ಎನ್ನುವುದರಲ್ಲಿ ದೇಶದ ಹಾಗೂ ಮನುಕುಲದ ಹಿತವಿದೆ.
(ಮೂಲ ಲೇಖಕರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ, ರಾಷ್ಟ್ರ ಸೇವಾ ದಳದ ಕಾರ್ಯನಿರ್ವಾಹಕ ಟ್ರಸ್ಟಿ ಮತ್ತು ಲೋಕ ಭಾರತಿ ಪಕ್ಷದ ಅಧ್ಯಕ್ಷ.)
( ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೆಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ