ಅನುಪಮಾ ಪ್ರಸಾದ್
ದೀಪಾವಳಿ ಅಂದರೆ ಎಲ್ಲರಿಗೂ ಒಂದಲ್ಲ ಒಂದು ನೆನಪು ಇದ್ದೇ ಇರಬೇಕಲ್ಲ. ಹಾಗೆಂದು ಹಬ್ಬದ ನೆನಪುಗಳೆಲ್ಲ ಖುಷಿ ಕೊಡುವಂತದ್ದೇ ಆಗಿರಬೇಕೆಬೆಂದೇನೂ ಇಲ್ಲ. ೨೦೨೦ರ ದೀಪಾವಳಿಯನ್ನು ಆತಂಕದ ಸಂದಿಗ್ದ ಮನಸ್ಥಿತಿಯಲ್ಲೆ ಎದುರುಗೊಳ್ಳುತ್ತಿದ್ದೇವೆ. ನಮ್ಮ ಜೀವಿತ ಕಾಲದಲ್ಲಿ ಇಂತಹುದೊಂದು ಸಮಯವನ್ನು ನಾವು ಎದುರುಗೊಳ್ಳುತ್ತೇವೆಂದು ಊಹಿಸಲೂ ಸಾಧ್ಯವಿರಲಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಂಬಂಧಗಳ ಸೂಕ್ಷ್ಮತೆಯಲ್ಲೂ ಇನ್ನು ಮುಂದೆ ಕೊರೋನೋತ್ತರ ಹಾಗು ಕೊರೋನ ಪೂರ್ವ ಎಂದೇ ಗುರುತಿಸಬೇಕಾದ ಸ್ಥಿತಿಯಲ್ಲಿರುವಾಗ ದೀಪಾವಳಿ ಬಂದಿದೆ. ಅಂದರೆ, ನಾವಿನ್ನೂ ಕೊರೊನಾ ಕಾಲದಲ್ಲೆ ಇರುವುದರಿಂದ ಈ ಬಾರಿ ಹಬ್ಬ ಎದುರುಗೊಳ್ಳುವ ಸಂಭ್ರಮವಂತು ಇಲ್ಲ. ಆದರೆ, ಈ ದೀಪಾವಳಿಯ ಹಣತೆಯ ಬೆಳಕು ಜಗತ್ತನ್ನಾವರಿಸಿದ ತಮವ ಕಳೆಯಬಹುದೇನೊ ಎಂಬ ನಿರೀಕ್ಷೆಯಂತು ಇದೆ. ಅದಕ್ಕೆ ಪೂರಕವಾಗಿ ಪಟಾಕಿ ನಿಷೇಧವಾಗಿರುವುದು ಧನಾತ್ಮಕ ಸಂಗತಿ. ನಗರಗಳಲ್ಲಂತು ತಂತಮ್ಮ ಮನೆಯ ಗೇಟಿನ ಕುಂದಕ್ಕೆ ದೀಪ ಹಚ್ಚಲು ಹೊರ ಬರುವಾಗಲೂ ಯಾವ ದಿಕ್ಕಿನಿಂದ ಯಾವ ಪಟಾಕಿ ಸಿಡಿದು ಬರುವುದೊ ಎಂಬ ಆತಂಕದಲ್ಲೆ ಹೊರಬರಬೇಕಾಗಿತ್ತು. ಅಸ್ತಮಾ ಪೀಡಿತರ ಯಾತನೆಯನ್ನಂತು ಕೇಳುವವರಿಲ್ಲದಂತಾಗಿತ್ತು. ಪಟಾಕಿ ಗದ್ದಲಕ್ಕೆ ಅಡಗಿಕೊಳ್ಳಲು ಜಾಗ ಹುಡುಕುವ ಪ್ರಾಣ ಪಕ್ಷಿಗಳ ಬಗ್ಗೆ ಹೇಳದಿರುವುದೇ ಒಳ್ಳೆಯದು. ಮನುಷ್ಯ ಈ ಭೂಮಿಯಲ್ಲಿ ತನ್ನ ಹೊರತು ಇನ್ನೊಂದು ಜೀವಿ ಬದುಕಬೇಕೆಂಬುದನ್ನೆ ಮರೆತುಬಿಟ್ಟಾಗಿದೆ. ನನಗಂತು ಈ ಬಾರಿ ದೀಪಾವಳಿಗೆ ಪಟಾಕಿ ನಿಷೇಧ ಮಾಡಿದ ವಾರ್ತೆ ಕೇಳಿದಾಗ, ಈ ನಿಷೇಧ ನಮ್ಮ ಬಾಲ್ಯದಲ್ಲೇ ಬಂದಿದ್ದರೆ ಎಷ್ಟು ಚಂದಿತ್ತು ಅನಿಸಿಬಿಟ್ಟಿತು. ಮಧ್ಯಮ ವರ್ಗದ ನಮ್ಮ ಮನೆಯಲ್ಲಿ ಹಬ್ಬದ ಇತರ ಖರ್ಚುಗಳ ಜೊತೆ ಪಟಾಕಿಗೆ ದುಡ್ಡು ಹಾಕುವುದೆಂದರೆ ದುಡ್ಡಿಗೇ ಬೆಂಕಿ ಕೊಟ್ಟಂತೆ ಎಂಬ ಭಾವವೇ ಬಲವಾಗಿತ್ತು. ಆದರೆ, ಅಕ್ಕಪಕ್ಕದಲ್ಲೆಲ್ಲ ಪಟಾಕಿ ಸದ್ದು ಕೇಳುವಾಗ, ನಮ್ಮನೆಯಲ್ಲು ಪಟಾಕಿ ಹಚ್ಚಬೇಕೆಂಬ ಆಸೆ ಆಗಷ್ಟೆ ಹದಿವಯಸ್ಸಿಗೆ ಕಾಲಿಟ್ಟಿದ್ದ ಅಣ್ಣನಿಗೆ ಬಲವಾಗಿಯೇ ಇತ್ತು. ತಮ್ಮನಂತು ಅಪ್ಪನಿಗೆ ದುಂಬಾಲು ಬೀಳುತ್ತಿದ್ದ. ಆದರೆ, ಅಮ್ಮ ಮಾತ್ರ ಕಟ್ಟುನಿಟ್ಟಾಗಿ ಪಟಾಕಿ ವಿರೊಧಿಸುತ್ತಿದ್ದಳು. ಆ ಇಪ್ಪತ್ತು ರೂಪಾಯಿ ನಾಳೆ ದಿನಸಿಗಾಗುತ್ತದೆ ಎಂಬುದು ಅವಳ ಅತಿ ವಾಸ್ತವ ದರ್ಶನ. ಅಪ್ಪಯ್ಯನಿಗೆ ಇಬ್ಬಂದಿತನ. ಕೊನೆಗೆ ಒಂದು ಪೆಟ್ಟಿಗೆಗೆ ಇಪ್ಪತೈದೊ ಐವತ್ತೋ ಪೈಸೆ ಇರುತ್ತಿದ್ದ ಕೇಪು ಪಟಾಕಿಯಲ್ಲಿ ಸಮಾಧಾನ ಪಡಿಸುತ್ತಿದ್ದರು. ಕೇಪು ಪಟಾಕಿ ಅಂದರೆ ಹದವಾದ ಕೆಂಪು ಬಣ್ಣದ ಹಣೆಬಿಂದಿಯಷ್ಟು ದೊಡ್ಡದಿರುತ್ತಿತ್ತು. ಸಣ್ಣ ರಟ್ಟಿನ ಕರಡಿಗೆಯಲ್ಲಿ ಹದಿನೈದೊ ಇಪ್ಪತೈದೋ ಇರುತ್ತಿತ್ತು. ಒಂದೊಂದು ಪಟಾಕಿಯನ್ನು ಸರಿಯಾದ ಜಾಗದಲ್ಲಿಟ್ಟು ಅದಕ್ಕೆ ಸಣ್ಣ ಕಲ್ಲಿನಲ್ಲೊ ಸುತ್ತಿಗೆಯಲ್ಲೊ ಒಂದು ಗುದ್ದಿದರೆ ಪಟ್ ಅನ್ನುತ್ತಿತ್ತು. ಅದನ್ನ ಒಂದರ ಮೇಲೊಂದು ಇಟ್ಟು ಗುದ್ದಿದರೆ ಸ್ವಲ್ಪ ಸದ್ದು ಜೋರಾಗಿರುತ್ತಿತ್ತು. ಹಬ್ಬದ ದಿನ ಸುತ್ತಲಿಂದ ಪಟಾಕಿ ಸದ್ದು ಏರತೊಡಗಿದಾಗ ತಮ್ಮ ತಡೆಯಲಾರದೆ ಹಳೆ ಸೈಕಲ್ ಟ್ಯೂಬ್ ತಂದು ಜೋರಾಗಿ ನೆಲಕ್ಕೆ ಹೊಡೆದು ಸದ್ದು ಹೊರಡಿಸುತ್ತಿದ್ದ. ಅದು ಕೇಪು ಹೊಡೆದದ್ದಕ್ಕಿಂತ ಜಾಸ್ತಿಯೇ ಸದ್ದು ಬರುತ್ತಿತ್ತು. ಆಗೆಲ್ಲ ನಗುತ್ತಿದ್ದರೂ ಚಿಂತನೆಯ ಹರಿವು ವಿಸ್ತರಿಸಲು ತೊಡಗಿದಂತೆ ಆರ್ಥಿಕ ಅಸಮಾನತೆಯ ಬಗ್ಗೆ ಕೊನೆಯಿಲ್ಲದ ಪ್ರಶ್ನೆಗಳು ಏಳಲಾರಂಭಿಸಿದ್ದವು. ನಾವು ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದತ್ತ ವಲಸೆ ಹೋದವರಾದ್ದರಿಂದ ನಮ್ಮನೆಯಲ್ಲಿ ಹಬ್ಬಗಳ ಆಚರಣೆ ಉತ್ತರಕನ್ನಡ ಪದ್ದತಿಯದು. ಹಬ್ಬಗಳ ಆಚರಣೆಯಲ್ಲಿ ಉತ್ತರಕನ್ನಡ ಪದ್ದತಿಗೂ ದಕ್ಷಿಣ ಕನ್ನಡ ಪದ್ದತಿಗೂ ಬಹಳ ವ್ಯತ್ಯಾಸಗಳಿವೆ. ಉದಾಹರಣೆಗೆ ನರಕ ಚತುರ್ದಶಿಯ ಹಿಂದಿನ ದಿನ ರಾತ್ರಿ ಬಚ್ಚಲುಮನೆಯ ಹಂಡೆ ತೊಳೆದು ಸೇಡಿ ಬರೆದು ನೀರು ತುಂಬಿಸಿ ಹಂಡೆಯ ಕೊರಳಿಗೊಂದು ಗೊಂಡೆ ಹೂವಿನ ಮಾಲೆ ಕಟ್ಟುವಲ್ಲಿಂದ ಹಬ್ಬದ ಗೌಜು ಆರಂಭ. ಹಾಗೆಯೇ ನರಕಚತುರ್ದಶಿ ದಿನ ಅಮ್ಮ ನಸುಕಿನಲ್ಲೆದ್ದು ಗಂಗೆನೀರು ತುಂಬಿ ಬಲಿತ ಸೌತೆಕಾಯಿಗೆ ಸೇಡಿ ಬರೆದು, ಸಾಂಕೇತಿಕವಾಗಿ ಬಲಿವೇಂದ್ರನ ರೂಪು ಬರೆದು ಬಲಿಚಕ್ರವರ್ತಿಯ ಖಡ್ಗವನ್ನು ಅಡಿಕೆಯ ಎಳೆ ಸಿಂಗಾರದ ಹಾಳೆಯಿಂದ ತಯಾರಿಸಿ ಮಣೆಗೆ ಸೇಡಿ ಬರೆದು ಸಂಪ್ರದಾಯದ ಹಾಡಿನೊಂದಿಗೆ ಬಲಿವೇಂದ್ರನನ್ನು ಮನೆಯ ದೇವರಕೋಣೆಯಲ್ಲೆ ಪ್ರತಿಷ್ಟಾಪಿಸುತ್ತಿದ್ದಳು. ಶಂಖ-ಜಾಗಟೆಗಳ ಮೂಲಕ ನಾವೆಲ್ಲ ಬಲಿ ಚಕ್ರವರ್ತಿಯನ್ನು ಮನೆಯೊಳಗೆ ಕರೆದೊಯ್ಯುತ್ತಿದ್ದೆವು. ಆದರೆ, ದಕ್ಷಿಣಕನ್ನಡದ ನಮ್ಮ ಅಜ್ಜನ ಮನೆಯಲ್ಲಿ ಬಲಿವೇಂದ್ರನನ್ನು ಮನೆಯ ಅಂಗಳದ ತುಳಸಿಕಟ್ಟೆಗಿಂತ ಮೂರು ಮೆಟ್ಟು ದೂರದಲ್ಲಿ ಬಾಳೆಕಂಬ ಹಾಕಿ ಗಂಡಸರೇ ಪ್ರತಿಷ್ಟಾಪಿಸಿ ಪೂಜಿಸುವುದು ಕ್ರಮ. ಪಾಡ್ಯದ ದಿನ ಗೋಪೂಜೆಯ ಆಚರಣೆಯಲ್ಲೂ, ಆ ದಿನ ಜಾನುವಾರುಗಳಿಗೆ ಕೊಡುವ ತಿನಿಸುಗಳಲ್ಲೂ ವ್ಯತ್ಯಾಸವಿದೆ. ನಮ್ಮಲ್ಲಿ ಮತ್ತೆ ಉತ್ತರಕನ್ನಡದ ಶಿರಸಿ ಕಡೆಯ ಆಚರಣೆಯಂತೆ ಪಾಡ್ಯದ ದಿನ ಬೆಳಗಿನಿಂದ ಜಾನುವಾರುಗಳ ಮೈ ತೊಳೆಯುವ. ಅವುಗಳ ಬೆನ್ನಿಗೆ ಕೋಡುಗಳಿಗೆ ಕೆಮ್ಮಣ್ಣು ಸೇಡಿ ಚಿತ್ರ ಬರೆದು, ಸಂಭ್ರಮ ಶುರುವಾಗುತ್ತಿತ್ತು. ನಂತರ ಅವುಗಳ ಕೊರಳಿಗೆ ಅಡಿಕೆ, ಸಿಂಗಾರ, ಗೊಂಡೆ ಹೂಗಳ ಮಾಲೆ ಹಾಗು ಶಾಸ್ತ್ರಕ್ಕಾದರೂ ಒಂದು ಹಿರಿ ಆಕಳ ಕೊರಳಿಗೆ ಒಂದು ರೂಪಾಯಿ ನೋಟಿನ ಮಾಲೆ ತೊಡಿಸಿ, ಪೂಜೆ ಸಿದ್ಧತೆ ನಡೆಯುತ್ತಿತ್ತು. ಮಧ್ಯಾಹ್ನ ಹನ್ನೆರಡು ಘಂಟೆಗೆಲ್ಲ ಗೋಪೂಜೆಗಾಗಿ ಹೆಂಗಸರು ಮಕ್ಕಳೆಲ್ಲ ಹೊಸಬಟ್ಟೆ, ಬಂಗಾರ ತೊಟ್ಟುಕೊಂಡು ಅಲಂಕಾರ ಮಾಡಿಕೊಂಡು ಹೊರಡುವ ಸಂಭ್ರಮ. ಗೋಪೂಜೆ ಮುಗಿಸಿ ಮನೆಯ ಪ್ರಧಾನ ಹೊಸ್ತಿಲು ಪೂಜೆ. ಅಪ್ಪಯ್ಯನ ಇಚ್ಚೆಯಂತೆ ನಾವೆಲ್ಲ ಇದ್ದುದರಲ್ಲೆ ಅಚ್ಚುಕಟ್ಟಾಗಿ ಸಿದ್ಧಗೊಳ್ಳುತ್ತಿದ್ದೆವು. ಬಹುಶಃ ಈ ಹೊರಡುವ ಅಲಂಕಾರದ ಕಾರ‍್ಯಕ್ರಮಗಳೆಲ್ಲ ಏಕೆಂದರೆ ಅಲ್ಲಿ ಊರು-ಕೇರಿ ಮನೆಗಳ ಎಲ್ಲರೂ ಪರಸ್ಪರ ಭೇಟಿಯಾಗುವ ಸಂಭ್ರಮವಿರುತ್ತಿತ್ತು. ಗೋಪೂಜೆ ನಂತರ ದನಗಳನ್ನು ಬಯಲಿಗೆ ಬಿಡುವ, ಓಟದ ಸಡಗರವಿರುತ್ತಿತ್ತು. ಈ ಓಟದಲ್ಲಿ ಜವ್ವನಿಗರು ಜಾನುವಾರುಗಳ ಬೆನ್ಹತ್ತಿ ಅವುಗಳ ಕೊರಳಿಂದ ಅಡಿಕೆ ಮಾಲೆ, ನೋಟಿನ ಮಾಲೆ ಕಿತ್ತುಕೊಳ್ಳುವ ಸ್ಪರ್ಧೆಯೂ ನಡೆಯುತ್ತದೆ. ಒಟ್ಟಾರೆ ಊರ ಮಂದಿ ಸೇರಿ ಸಂಭ್ರಮಿಸುವ ಸಮಯ. ಆದರೆ, ದಕ್ಷಿಣ ಕನ್ನಡ ಭಾಗದಲ್ಲಿ ಇಂತಹ ಆಚರಣೆಗಳೆಲ್ಲ ಇಲ್ಲದೆ ಗೋಪೂಜೆ ರಾತ್ರಿ ನಡೆಯುತ್ತದೆ. ನಮ್ಮ ಮನೆಯಲ್ಲಿ ಮಾತ್ರ ಮಧ್ಯಾಹ್ನದ ಗೋಪೂಜೆ. ಇದೆಲ್ಲ ಬದುಕಿನ ಬುಟ್ಟಿ ಹೊತ್ತು ವಲಸೆ ಹೋದವರ ಹಳವಂಡಗಳೆಂಬುದು ನಿಧಾನಕ್ಕೆ ಅರ್ಥವಾಗಲಾರಂಭಿಸಿತ್ತು. ಅಂತಾದ್ದರಲ್ಲಿ ಈ ವರ್ಷದ ದೀಪಾವಳಿ ಬೇರೆ ಬೇರೆ ಸ್ತರದಲ್ಲಿ ಮಹಾ ಸಾಮೂಹಿಕ ವಲಸೆಯ ನಂತರದಲ್ಲಿ ಎದುರಾಗಿದೆ. ಕಳೆದ ದೀಪಾವಳಿಯಲ್ಲಿದ್ದ ಜನ ಮಾನಸದ ಬದುಕಿನ ಗತಿ-ಲಯ ಬದಲಾಗಿದೆ. ದೀಪಾವಳಿಯ ಜ್ಯೋತಿ ಅಭಯ ಹಸ್ತವನೆತ್ತಿ ಎಲ್ಲರಿಗೂ ಎಲ್ಲಕ್ಕೂ ಶುಭ ಕೋರಲಿ ಎಂಬ ಕವಿಸಾಲು ತಾನಾಗಿ ಗುನುಗುನಿಸುತ್ತಿದೆ. ಅಚಾನಕ್ ಎರಗಿದ ತಿಮಿರ ಕಳೆದು ಶುಭ ಬೆಳಗಿನ ನಿರೀಕ್ಷೆಯೊಂದಿಗೆ ಬದಲಾದ ಸಂದರ್ಭದಲ್ಲಿ ಬದುಕಿನ ಒಲೆ ಹಚ್ಚಲು ಮಿಣ ಮಿಣ ದೀಪಗಳನ್ನು ಸಜ್ಜುಗೊಳಿಸಿಕೊಳ್ಳೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ