(ದಿನಾಂಕ:೦೨-೦೧-೨೦೨೧ ರಂದು ಹುಬ್ಬಳ್ಳಿಯ ಲ್ಯಾಮಿಂಗಟನ್ ಪ್ರೌಢಶಾಲೆಯಲ್ಲಿ ಮುಂಜಾನೆ ೧೧.೩೦ ಗಂಟೆಗೆ ಇತ್ತೀಚೆಗೆ ನಿಧನರಾದ ದಿ.ಎಂ.ಬಿ.ನಾತು ಅವರಿಗೆ ನುಡಿ ನಮನ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಿಮಿತ್ಯ ಈ ಲೇಖನ)
ಬಸವರಾಜ ಹೊರಟ್ಟಿ
ಎಂ.ಬಿ.ನಾತು ಹಾಗೂ ನನ್ನ ಸ್ನೇಹ ಕಳೆದ ಐವತ್ತು ವರ್ಷದಿಂದ ಇದೆ. ನನ್ನ ಅತ್ಯಂತ ಆತ್ಮೀಯ ಒಡನಾಡಿಯಾಗಿ ಮಾರ್ಗದರ್ಶಕನಾಗಿ, ಸ್ನೇಹಿತನಾಗಿ ಇದ್ದು ಸದಾ ನನ್ನ ಹಿತಕಾಪಾಡುತ್ತಾ ಬಂದಿರುವ ಎಂ.ಬಿ.ನಾತು ಇಲ್ಲದಿರುವುದು ಶಿಕ್ಷಣ ಲೋಕಕ್ಕೆ ಹಾಗೂ ಶಿಕ್ಷಕ ಸಂಘಟನೆಗೆ ಹಾಗೂ ವಿಶೇಷವಾಗಿ ನನಗೆ ಅಪಾರ ನಷ್ಟ ಉಂಟಾಗಿದೆ. ನನಗಂತೂ ಒಬ್ಬ ಆತ್ಮೀಯ ಸ್ನೇಹಿತ ಇಲ್ಲದಿರುವ ಕೊರತೆ ಸದಾ ಕಾಡುತ್ತಿದೆ.
೧೯೭೦-೮೦ರ ದಶಕದಲ್ಲಿ ಶಿಕ್ಷಕರ ಪಾಡಂತೂ ಹೇಳತೀರದು. ಅದರಲ್ಲೂ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗೆ ಸರ್ಕಾರ, ಸಮಾಜ, ಸ್ಪಂದಿಸದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿತ್ತು. ಯಾವುದೇ ಶಿಕ್ಷಕರಿಗೆ ಅನ್ಯಾಯವಾದರೆ ನ್ಯಾಯ ಒದಗಿಸುವ ಯಾವೊಂದು ಸಂಘಟನೆ ಇಲ್ಲದ ಕಾಲವದು. ಶಿಕ್ಷಕರಲ್ಲದವರು ಶಿಕ್ಷಕರ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ಆಯ್ಕೆಯಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಅದೇ ತಾನೆ ನಾನು ೧೯೭೫ರಲ್ಲಿ ಶಿಕ್ಷಕ ವೃತ್ತಿಗೆ ಕಾಲಿಟ್ಟಾಗ ಕೃಪಾದಾನಂ ಶಾಲೆಯ ಬಾಲಿರಡ್ಡಿ ಹಾಗೂ ಲ್ಯಾಮಿಂಗಟನ್ ಶಾಲೆಯ ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ಧ ಧ್ವನಿಯೆತ್ತಿದಾಗ ನಮಗೆ ಸಿಕ್ಕಿದ್ದು ಅಮಾನತ್ತು. ಆ ಸಂದರ್ಭದಲ್ಲಿ ಇದಕ್ಕೆಲ್ಲಾ ಪರಿಹಾರ ಹುಡುಕಲು ಸಮಾನ ಮನಸ್ಕ ಶಿಕ್ಷಕರಾದ ಕೆ.ವ್ಹಿ.ರಾಯಚೂರು, ಎನ್.ಎಚ್.ಪುರಾಣಿಕ, ಎಂ.ಬಿ.ಸಾವಜ್ಜಿ, ಪ್ರಕಾಶ ನಾಯಕ, ಸಹಜಾನಂದ ದಂದರಗಿ, ಸಿ.ವ್ಹಿ.ಹೂಗಾರ, ಬಿ.ಎಸ್.ಸೊಪ್ಪೀನ, ಸಿ.ಎಸ್.ಅಷ್ಟಗಿಮಠ, ಸಿ.ಎಸ್.ಗುಬ್ಬಣ್ಣವರ, ಎಸ್.ಬಿ.ತವರದ ಸೇರಿದಂತೆ ಹಲವು ಸ್ನೇಹಿತರೊಂದಿಗೆ ಚರ್ಚಿಸಿ ಹುಟ್ಟು ಹಾಕಿದ್ದೇ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ.
ಈ ಸಂಘಟನೆಯ ಮೂಲಕ ಹಲವಾರು ಹೋರಾಟ ಮಾಡುವ ಸಂದರ್ಭದಲ್ಲಿ ನಮ್ಮೊಟ್ಟಿಗೆ ೧೯೭೭ ರಲ್ಲಿ ಸಂಘಟನೆಯೊಂದಿಗೆ ಸೇರಿದ ಎಂ.ಬಿ.ನಾತು ಅಂದಿನಿಂದ ಇಂದಿನವರೆಗೆ ನಮ್ಮೊಡನೆ ಇದ್ದು ಎಲ್ಲ ಹೋರಾಟದ ಯಶಸ್ಸಿನಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು.
ಹುಬ್ಬಳ್ಳಿ ನ್ಯೂ ಇಂಗ್ಲೀಷ್ ಶಾಲೆಯ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯನಾಗಿ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುವುದರ ಜೊತೆಗೆ ಅನ್ಯಾಯಕ್ಕೆ ಒಳಗಾದ ಶಿಕ್ಷಕರಿಗೆ ನ್ಯಾಯ ಕೊಡಿಸುವಲ್ಲಿ ಸಂಘಟನೆಯ ಜೊತೆಗೆ ಮಂಚೂಣಿಯಲ್ಲಿದ್ದವರು. ಅವರ ಗಟ್ಟಿಧ್ವನಿ, ಚಿಂತನೆ, ಹರಿತವಾದ ಬರವಣಿಗೆಯಿಂದ ಸಂಘಟನೆಗೊಂದು ದೊಡ್ಡ ಶಕ್ತಿಯಾಗಿ ನಿಂತವರು ನಾತು. ಹೋರಾಟದ ಸಂದರ್ಭದಲ್ಲಿ ಸಾವಿರಾರು ಶಿಕ್ಷಕ ಸಮೂಹವನ್ನು ಆವಾಜ್ ದೋ ಎನ್ನುವ ಘೋಷಣೆಯನ್ನು ಮೊಳಗಿಸುವ ಮೂಲಕ ಇಡೀ ಶಿಕ್ಷಕ ಸಮೂಹವನ್ನು ಮಂತ್ರಮುಗ್ಧರನ್ನಾಗಿಸಿ ಆ ಮೂಲಕ ಹೋರಾಟದ ಕಿಚ್ಚನ್ನು ಹಚ್ಚುತ್ತಿದ್ದರು.
ಮಾಧ್ಯಮಿಕ ಶಾಲಾ ನೌಕರರ ಸಂಘದ ೪೫ ವರ್ಷದ ನಿರಂತರ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಸುವುದರ ಜೊತೆಗೆ ಹೊರಾಟಕ್ಕೊಂದು ಸ್ವರೂಪವನ್ನು ನೀಡುವ ಮೂಲಕ ತಾರ್ಕಿಕ ಅಂತ್ಯಕ್ಕೆ ಒಯ್ಯುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ನನ್ನ ಏಳು ಚುನಾವಣೆಗಳಲ್ಲಿ ಹಲವಾರು ಮಹತ್ವದ ಸಂಗತಿಗಳನ್ನು ಶಿಕ್ಷಕ ಸಮೂಹಕ್ಕೆ ತಲುಪಿಸುವ ಮೂಲಕ ಅಲ್ಲಿಂದ ಇಲ್ಲಿಯವರೆಗೆ ನನ್ನೊಡನೆ ಇದ್ದು ಸತತ ಜಯಗಳಿಸುವಲ್ಲಿ ಇವರ ಪಾತ್ರ ವಿಶೇಷವಾದದ್ದು. ನನ್ನ ಅವನ ಸ್ನೇಹ ಅತ್ಯಂತ ಅವಿನಾಭಾವದ್ದು. ಅವರ ಅಗಲಿಕೆ ನನಗೆ ಹಾಗೂ ನಮ್ಮ ಕುಟುಂಬಕ್ಕೆ ತುಂಬಲಾರದ ಅಪಾರ ನಷ್ಟ ಉಂಟುಮಾಡಿದೆ.
ಎಂ.ಬಿ.ನಾತು ಅವರ ಸೇವೆ ಕೇವಲ ಶಿಕ್ಷಕ ಸಂಘಟನೆಗೆ ಅಷ್ಟೇ ಮೀಸಲಾಗದೇ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಇವರ ಸೇವೆ ಅಪಾರ. ಧಾರವಾಡ ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ತರುವಲ್ಲಿ ಯಶಸ್ವಿಯಾದವರು. ಮಂಚೂಣಿಯಲ್ಲಿ ನಿಂತು ಆ ಸಂಘಕ್ಕೂ ಒಂದು ಗಟ್ಟಿ ಧ್ವನಿಯಾಗಿ ನಿಂತಿದ್ದರು. ಜೊತೆಗೆ ಅಪಾರ ದೈವಿ ಭಕ್ತರಾಗಿ ಪೂಜೆ, ಪುನಸ್ಕಾರ, ಪ್ರಾರ್ಥನೆಯಲ್ಲಿಯೂ ಒಂದು ಹೆಜ್ಜೆ ಮುಂದೆ ಇದ್ದವರು. ಜೊತೆಗೆ ಅತಿಥಿ ಸತ್ಕಾರದಲ್ಲಿಯೂ ಸ್ನೇಹಿತವಲಯದಲ್ಲಿ ಅತ್ಯಂತ ಪ್ರೀತಿ ಪಾತ್ರರಾದವರು. ಸಂಕಷ್ಟಕ್ಕೀಡಾದ ಹಲವಾರು ಕುಟುಂಬಗಳಿಗೆ ತಕ್ಷಣ ಸ್ಪಂದಿಸಿ ನೈತಿಕ ಸ್ಥೈರ್ಯ ತುಂಬುತ್ತಿದ್ದರು. ಎಲ್ಲ ಪಕ್ಷದಲ್ಲಿಯೂ ಸ್ನೇಹಿತರನ್ನು ಹಿತೈಷಿಗಳನ್ನು ಹೊಂದಿದ್ದರೂ, ಹೆಚ್ಚು ನಿಕಟ ಸಂಪರ್ಕ ನನ್ನೊಡನೆ ಇತ್ತು. ಕೇಂದ್ರ ಸಚಿವ ದಿ|| ಅನಂತಕುಮಾರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಹೋಗೋ ಬಾರೋ ಎನ್ನುವ ಸಲಿಗೆ ಹೊಂದಿದರೂ ಅವರನ್ನೆಂದೂ ದುರುಪಯೋಗ ಮಾಡಿಕೊಳ್ಳದವರು ಎಂ.ಬಿ.ನಾತು. ಇವರೆಲ್ಲರ ಸಂಪರ್ಕ ಇದ್ದರೂ ಒಬ್ಬ ಶಿಕ್ಷಕನಾಗಿ, ಶಿಕ್ಷಣ ಪ್ರೇಮಿಯಾಗಿ ಶಿಕ್ಷಕ ಸಂಘಟನೆಯತ್ತಲೇ ಅವರ ಒಲವು ಹೆಚ್ಚುಇತ್ತು.
೭೪ನೇ ಇಳಿವಯಸ್ಸಿನಲ್ಲಿಯೂ ಬತ್ತದ ಅವರ ಉತ್ಸಾಹ, ಗಟ್ಟಿಧ್ವನಿ, ಮೊನಚು ಬರವಣಿಗೆಯ ಹೊಳಪು ಕಳೆಗುಂದಿದ್ದಿಲ್ಲ. ಇನ್ನೂ ಹೆಚ್ಚು ಸಮಯ ನಮ್ಮೊಂದಿಗೆ ಇರುತ್ತಾರೆಂಬ ಆಶಯ ನಮ್ಮಲ್ಲಿತ್ತು. ಅವರ ಸೇವೆಯನ್ನು ಶಿಕ್ಷಣ ಕ್ಷೇತ್ರ ಸಮಾಜ, ಧಾರ್ಮಿಕ ಕ್ಷೇತ್ರಗಳು ಹೆಚ್ಚೆಚ್ಚು ಬಯಸಿದ್ದವು. ಇತ್ತೀಚೆಗೆ ಅವರು ಬ್ರಾಹ್ಮಣ ಅಭಿವೃದ್ಧಿ ನಿಗಮದ ಸದಸ್ಯರಾಗಿ ನೇಮಕವಾದಾಗ ನನ್ನನ್ನೂ ಸೇರಿದಂತೆ ಇಡೀ ಬ್ರಾಹ್ಮಣ ಸಮುದಾಯ ಅವರಿಂದ ಬಹಳಷ್ಟು ನಿರೀಕ್ಷೆ ಮಾಡಿದ್ದೆವು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ. ಇಂತಹ ಸ್ನೇಹಿತನ ಅಗಲುವಿಕೆಯಿಂದ ನನ್ನನ್ನು ಸೇರಿದಂತೆ ಅಪಾರ ಶಿಕ್ಷಕ ಸಮೂಹಕ್ಕೆ ಸಾಕಷ್ಟು ನೋವುಂಟು ಮಾಡಿದೆ. ಅವರ ಹೋರಾಟ ಶಿಕ್ಷಕರ ಪರ ಕಾಳಜಿ, ಸಮಾಜಮುಖಿ ಚಿಂತನೆಗಳನ್ನು ಇಂದಿನ ಸಮಾಜಕ್ಕೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಇದೇ ದಿನಾಂಕ:೦೨-೦೧-೨೦೨೧ ರಂದು ಹುಬ್ಬಳ್ಳಿಯ ಲ್ಯಾಮಿಂಗಟನ್ ಪ್ರೌಢಶಾಲೆಯಲ್ಲಿ ಮುಂಜಾನೆ ೧೧.೩೦ ಗಂಟೆಗೆ ನುಡಿನಮನ ಹಾಗೂ ಭಾವಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಂ.ಬಿ.ನಾತು ಅವರಿಗೆ ಎಂ.ಬಿ.ನಾತು ಅವರೇ ಸಾಟಿ. ಇಂತಹ ಸ್ನೇಹಿತನ ನೆನಪು ನನನ್ನು ಸದಾಕಾಲ ಕಾಡುತ್ತಿದೆ. ಬನ್ನಿ ಸ್ನೇಹಿತರೇ ಈ ಹೃದಯಸ್ಪರ್ಷಿ ಕಾರ್ಯಕ್ರಮದಲ್ಲಿ ನಾವು ನೀವೆಲ್ಲರೂ ಸೇರಿ ಅವರ ಆತ್ಮಕ್ಕೆ ಶಾಂತಿ ಕೋರೋಣ.
(ಲೇಖಕರು – ಮಾಜಿ ಸಭಾಪತಿಗಳು ಹಾಗೂ
ವಿಧಾನಪರಿಷತ್ ಹಿರಿಯ ಸದಸ್ಯರು)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ