ಜಯಶ್ರೀ.ಜೆ. ಅಬ್ಬಿಗೇರಿ
ಸುಖ ಯಾರಿಗೆ ಬೇಡ ಹೇಳಿ? ಸುಖವೆಂಬ ಪದವೇ ಅದ್ಭುತ ಹಿತಕರ ಸುಖಕರ. ಅದರ ಹುಡುಕಾಟದಲ್ಲೇ ಬದುಕು ಪಣಕ್ಕಿಟ್ಟು ಹೋರಾಡುತ್ತೇವೆ. ಏಕೆ, ಹೇಗೆ, ಏನು ಎಂಬ ಪ್ರಶ್ನೆಗಳ ಗೋಜಿಗೆ ಹೋಗದೆ, ಮೌನವಾಗಿ ಉಳಿದು ಅನುಭಾವಿಯಾದವನು ಸದಾ ಸುಖದ ಭಾವದಲ್ಲಿ ಒಂದಾಗಿ ಬಿಡುತ್ತಾನೆ.
ಸಿರಿಯ ಸಂಸಾರವು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ ಸರ್ವಜ್ಞ ಎಂಬ ವಚನದಲ್ಲಿ ಸರ್ವಜ್ಞ ಸಿರಿ ಸಂಸಾರ ಸ್ಥಿರವಲ್ಲ, ಸುಖದ ಆಗರವೂ ಅಲ್ಲ ಎಂದಿದ್ದಾನೆ,
’ನೀನು ಆಟದ ಮೈದಾನದಲ್ಲಿದ್ದರೆ ಅದು ಸುಂದರ ಆಟ. ನೀನು ಮನೆಯಲ್ಲಿದ್ದರೆ ಅದು ಪವಿತ್ರ ಪರಿಶುದ್ಧ ಪ್ರೇಮ. ನೀನು ಕೆಲಸದಲ್ಲಿದ್ದರೆ ಅದು ಕಾರ್ಯಮಗ್ನತೆ. ನೀನು ವಿಶಾಲ ಆಗಸದಲ್ಲಿ ಕಣ್ಣಾಡಿಸುತ್ತಿದ್ದರೆ ಅದು ಭವ್ಯತೆಯ ಭಾವ.’ ಇದು ಒಬ್ಬ ಪಾಶ್ಚಿಮಾತ್ಯ ತತ್ವಜ್ಞಾನಿ ಧರ್ಮದ ಕುರಿತು ಹೇಳಿದ ಬಗೆ. ಇದನ್ನು ನಾವು ಸುಖಕ್ಕೂ ಅನ್ವಯಿಸಬಹುದು.
ಎನಿತು ಹೇಳಿದರೂ ಕಡಿಮೆ
ಮುದ್ದು ಕಂದಮ್ಮನ ಮುಗಳ್ನಗು, ಒಂದೊಳ್ಳೆಯ ಕೆಲಸ ಮಾಡಿದಾಗ ಒಂದೆರಡು ಪ್ರಶಂಸೆಯ ಮಾತು, ದಟ್ಟ ಕಾನನದಲ್ಲಿ ತಪ್ಪಿದ ಹಾದಿ ಮರಳಿ ಸಿಗುವಿಕೆ, ಹದಿ ಹರೆಯದ ಹುಚ್ಚು ಪ್ರೀತಿ, ಪುಟ್ಟ ಪುಟ್ಟ ಪಾದಗಳನ್ನು ಕೈಯಲ್ಲಿ ಹಿಡಿದಾಗಿನ ಹಿತ, ಪ್ರಾರ್ಥನಾ ಮಂದಿರದಲ್ಲಿ ಎಲ್ಲರೊಂದಿಗಿನ ಮಂತ್ರ ಪಠಿಸುವಿಕೆ, ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೇ ಗೆಳೆಯರೊಂದಿಗೆ ಮೈದಾನಕ್ಕೆ ಜಿಗಿಯುವುದು. ಹಣ್ಣಿನ ಮರಕ್ಕೆ ಕಲ್ಲು ಒಗೆಯುವುದು ಬಿದ್ದ ಹಣ್ಣುಗಳನ್ನು ನನಗೆ ನಿನಗೆ ಎಂದು ಕಿತ್ತಾಡುವುದು. ಇದ್ದುದರಲ್ಲಿಯೇ ಹಂಚಿ ತಿನ್ನುವುದು ಅಬ್ಬಬ್ಬಾ! ಹೀಗೆ ಪಟ್ಟಿ ಮಾಡುತ್ತ ಹೋದರೆ ಸುಖ ಸಂತಸದ ಎಲ್ಲೆ ಮುಗಿಯದು.
ಸುಖದ ಭಾವದ ನೆಲೆಗಳು ಒಂದೇ ಎರಡೇ? ಸುಖವೆಂಬ ಭಾವವನ್ನು ಅದೆಷ್ಟು ಶಬ್ದಗಳಲ್ಲಿ ಅದಾವ ಪದ ಪುಂಜಗಳಲ್ಲಿ ಹಿಡಿದಿಡಲು ಹೋದರೂ ಸುಖದ ಭಾವ ಪೂರ್ಣವೆನಿಸದು. ಬಾಯಿ ಮಾತಿನಲ್ಲಿ ವಿವರಿಸಿದರೂ ಸುಖಕ್ಕೆ ನ್ಯಾಯ ದೊರಕಿಸಲಾಗುವುದಿಲ್ಲ. ಸುಖವೆಂಬುದೇ ಹಾಗೆ. ಅದರ ಬಗ್ಗೆ ಎನಿತು ಹೇಳಿದರೂ ಕಡಿಮೆ ಎನಿಸುತ್ತದೆ. ಅದೊಂದು ತರಹ ತಾಯಿ ಇದ್ದ ಹಾಗೆ. ತಾಯಿಯ ಕಾಳಜಿ ಮತ್ತು ಪ್ರೀತಿಯನ್ನು ಎಷ್ಟು ಹಾಡಿ ಹೊಗಳಿದರೂ ಸಾಲದು. ಮನಸ್ಸಿಗೆ ತೃಪ್ತಿ ಆಗದು. ಆಕೆ ಮನೆಯಲ್ಲಿದ್ದಾಳೆ ಎನ್ನುವ ಭಾವವೇ ಸಾಕು ಸುಖದ ಘಮಲಿಗೆ. ಪದಗಳಲ್ಲಿ ಸರಳವಾಗಿ ಹಿಡಿದಿಡಲಾಗದ, ವಿವರಿಸಲಾಗದ, ಸರಳವಾಗಿ ದಕ್ಕಲಾರದ್ದನ್ನು ಸುಖ ಎಂದೆನ್ನಬಹುದೇನೋ. ಹಾಗೆ ನೋಡಿದರೆ ಸುಖವೆಂಬುದು ಜಗದ ಎಲ್ಲದರಲ್ಲೂ ಎಲ್ಲರಲ್ಲೂ ಹಾಸು ಹೊಕ್ಕಾಗಿದೆ. ಆದರೆ ದಾವಂತದ ಓಟದಲ್ಲಿ ಸುಖದ ಇರುವಿಕೆಯನ್ನು ಕಾಣದೇ ಕುರುಡರಾಗಿದ್ದೇವೆ.
ಸಾಕಾಗಲ್ಲ ಸುಖಕ್ಕೆ ವಿವರಣೆ
ನಮ್ಮ ತಾತ ಮುತ್ತಾತಂದಿರು ಸುಖವಾದ ಜೀವನ ಕಳೆದರು. ಧರ್ಮ ಪಥದಲ್ಲಿ ಸತ್ಯದ ಹಾದಿಯಲ್ಲಿ ನಡೆದರು. ಹೀಗಾಗಿ ಅವರಿಗೆ ಅನಾಯಾಸವೆಂಬಂತೆ ದೊರೆಯಿತು. ಸುಖವೆಂಬುದು ಪ್ರತಿಯೊಂದರಲ್ಲಿಯ ಒಳ್ಳೆಯದನ್ನು ಆಸ್ವಾದಿಸುವುದು. ಒಬ್ಬೊಬ್ಬರಿಗೆ ಒಂದರಲ್ಲಿ ಸುಖಾನುಭವದ ಚಮತ್ಕಾರವಾಗುತ್ತದೆ. ಮರಳು ಬೆರಳ ತುದಿಯಲ್ಲಿ ಹಾದು ಹೋದಂತಾಗುತ್ತದೆ. ಹಾಗೆ ನೋಡಿದರೆ ಸುಖಕ್ಕೆ ವಿವರಣೆ ಸಾಕಾಗಲ್ಲ. ಅದು ಜೊತೆಯಲ್ಲಿ ಇರುವಾಗ ಇಡೀ ಜಗವೇ ನಮ್ಮೊಂದಿಗಿರುವ ಭಾವ ಹಾಡಿ ಕುಣಿಯುತ್ತಿರುತ್ತದೆ. ವಿವರಿಸಿದರೆ ಸ್ವಾರಸ್ಯವನ್ನು ಸರ್ವಥಾ ಕಾಣಲು ಸಾಧ್ಯವಿಲ್ಲ. ನೇರ ನುಡಿಯಲ್ಲಿ ಹೇಳಬೇಕೆಂದರೆ ಮೂಗನೊಬ್ಬ ಬೆಲ್ಲದಚ್ಚು ತಿಂದು ಅದನ್ನು ಹೇಳಲು ಪ್ರಯತ್ನಿಸಿದಂತೆ. ಆದರೆ ಅದನ್ನು ಸಂಗ್ರಹಿಸಬೇಕೆಂಬ ಅಬ್ಬರ ಅಲ್ಪ ಸ್ವಲ್ಪದ್ದಲ್ಲ. ಅನುಭವಗಳು ಹೃದಯದ ಬಾಗಿಲು ತಟ್ಟಿದರೆ ಸುಖ ಎಂದೆನಿಸಿಕೊಳ್ಳುತ್ತವೆ. ತನ್ನನ್ನು ತಾನು ಸುಖಿಯಾಗಿ ಇಟ್ಟುಕೊಳ್ಳುವವನಿಗೆ ದುಃಖ ನೀಡುವ ಶಕ್ತಿ ಯಾವುದೂ ಇಲ್ಲ. ದುಃಖವನ್ನು ಸುಖದ ಕ್ಷಣಗಳಿಂದ ಬದಲಾಯಿಸಬಹುದು. ಆದರೆ ಸುಖದ ಕ್ಷಣಗಳು ಎಂದೆಂದೂ ಅಮರ. ವ್ಶೆಜ್ಞಾನಿಕ ಸತ್ಯ ಸಂಗತಿಗಳಂತೆ ಎಲ್ಲ ಕಾಲ ದೇಶದಲ್ಲಿ ಒಂದೇ ರೀತಿ ಆಗಿರುವುದಿಲ್ಲ. ನಿಂತ ಮರ ನಿಂತಲ್ಲೇ ಸ್ಥಿರವಾಗಿರುತ್ತದೆ. ಆದರೆ ಅದರ ನೆರಳು ಬದಲಾಗುತ್ತದೆ. ಹಾಗೆಯೇ ಸುಖವೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅದು ಬಾಹ್ಯ ವಸ್ತುವಿನ ಮೇಲೆ ನಿರ್ಧರಿತವಾಗುವುದಿಲ್ಲ. ಮನೋಭಾವದ ಮೇಲೆ ನಿರ್ಧರಿತವಾಗುತ್ತದೆ. ಸುಖದ ಹಿತವಾದ ಗಾಳಿ ನಮ್ಮ ಮನೋಭಾವದಲ್ಲಿದೆ. ಕಸ್ತೂರಿ ಮೃಗ ತಾನು ಹೋದಲೆಲ್ಲ ತನ್ನನ್ನು ಉಲ್ಲಸಿತಗೊಳಿಸುವ ಸುವಾಸನೆ ಎಲ್ಲಿಂದ ಬರುತ್ತಿದೆ? ಎಂಬ ಪ್ರಶ್ನೆ ಕಾಡಿ, ಇಡಿ ಕಾಡನ್ನು ತಿರುಗಿ ಹುಡುಕುತ್ತದೆ. ಆದರೆ ಅದು ಅರಸುವ ಸುವಾಸನೆ ಅದರ ನಾಭಿಯಲ್ಲಿಯೇ ಅಡಗಿದೆ. ಅಂತೆಯೇ ಸೌಖ್ಯದ ಸುವಾಸನೆ ಮನದಿಂದಲೇ ತೇಲಿ ಬರುತ್ತದೆ. ಅದನ್ನು ಗಳಿಸುವ ಶಕ್ತಿ ದೈವದತ್ತವಾದುದಲ್ಲ. ಸುಖ ಸಾಕಾರಗೊಳ್ಳುವ ಜಗತ್ತು ಮಾತ್ರ ದೇವನದು.
ಕಾಲಿಗೆ ತೊಡರುತ್ತದೆ
ಸದ್ಭಾವ ಸದ್ಬುದ್ಧಿ ಮನೋಶಕ್ತಿಯ ಫಲವೇ ಸುಖ. ಸುಖದ ಬೀಜ ಬಿತ್ತಿದರೆ ಬೆಳೆದು ಹೂ ಬಳ್ಳಿಯಾಗಿ ಕಾಲಕ್ರಮೇಣ ಹಣ್ಣು ನೀಡುವುದು. ಸುಖವೆಂಬುದು ಕಣ್ಣಿಗೆ ಕಾಣುವ ಸಾಕಾರ ರೂಪಕ್ಕಿಂತ ಕಾಣದ ನಿರಾಕಾರದಲ್ಲಿದೆ. ಸುಖದ ಬೆಲೆ ಸರಳತೆ ಆಗಿದೆ. ಸುಖವಾಗಿರಲು ಒಂದೇ ಮಾರ್ಗ ಸುಖವಾಗಿರುವುದು. ತನ್ನನ್ನು ತಾನು ಉತ್ತಮಪಡಿಸಿಕೊಳ್ಳುವವನು ಸುಖವಾಗಿರುತ್ತಾನೆ. ಸುಖಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅದು ಬೆಳೆಯುತ್ತದೆ. ನಿರ್ಲಕ್ಷಿಸಿದರೆ ಸಾಯುತ್ತದೆ. ಪಾಲನೆ ಪೋಷಣೆ ಮಾಡಿದರೆ ಸದಾ ನಮ್ಮೊಂದಿಗಿರುತ್ತದೆ. ಸುಖಕ್ಕೆ ಸಾಮಾನ್ಯ ಸೂತ್ರವೊಂದಿದೆ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು. ಜೀವನ ಪರ್ಯಂತ ಸುಖಕ್ಕಾಗಿ ನಿರೀಕ್ಷಿಸದೇ ಜೀವಿಸುವ ಪ್ರತಿ ಕ್ಷಣವನ್ನು ಸುಖಿಸುವುದು ಜಾಣತನ. ಬಹಿರಂಗದ ಹಸಿವು ನೀಗಿಸುವುದು ಸುಖವಲ್ಲ. ಭ್ರಮೆಯೆಂಬ ಬಿಸಿಲುಗುದರೆ ಹಿಂದೆ ತಿರುಗಿದರೆ ಸುಖ ದೊರೆಯುವುದಿಲ್ಲ. ಸುಖವೆಂಬುದು ವಿಶ್ವದಷ್ಟು ವಿಶಾಲ. ಅದಕ್ಕೆ ರಾಜ್ಯ ದೇಶ ಸಿರಿ ಸಂಪದವೆಂಬ ಭೇದವಿಲ್ಲ. ಯಾವುದರಲ್ಲೂ ಭೇದ ಭಾವ ಎನಿಸದೇ ಎಲ್ಲವನ್ನೂ ಅದು ಇರುವಂತೆ ಸ್ವೀಕರಿಸುವ ಗುಣ ನಮ್ಮದಾದರೆ ಸುಖದ ಅಭಾವ ಕಾಡದು. ಮಗುವಿನಂತೆ ನಿಷ್ಕಲ್ಮಷ ಮನಸ್ಸಿನಿಂದ ಬದುಕಲು ಕಲಿತರೆ ಹೋದಲೆಲ್ಲ ಬದುಕು ಸುಖದ ಹಾಸಿಗೆ ಹಾಸಿ ಸ್ವಾಗತಗೈಯ್ಯುತ್ತದೆ. ಹೂವಿನೊಂದಿಗೆ ಮುಳ್ಳಿರುವಂತೆ ಸುಖದೊಂದಿಗೆ ದುಃಖವಿದೆ ಎಂಬ ಜ್ಞಾನ ನಮ್ಮಲ್ಲಿ ಮನೆ ಮಾಡಿದರೆ ಮುಳ್ಳಿನಿಂದ ನೋವಾಗದಂತೆ ಹೂ ಪಡೆಯಬಹುದು. ಅಂದರೆ ಸತ್ಯದರ್ಶನವಾಗಿ ಚೆಲ್ಲುವುದು ಎಲ್ಲೆಲ್ಲೂ ಸುಖದ ಹೂ ನಗೆ. ಸುಖದ ರಸ ಚಿಲುಮೆಯಾಗಿ ಚಿಮ್ಮುತ್ತದೆ. ಹಂಬಲಿಸಿ ಹುಡುಕುವ ಸುಖದ ಬಳ್ಳಿ ಕಾಲಿಗೆ ತೊಡರಿಕೊಳ್ಳುತ್ತದೆ.
(ಲೇಖಕರು – ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ