Karnataka News

ವಿಕಾರಿ ಮನುಷ್ಯರನ್ನು ಶ್ರೇಷ್ಠಾಚಾರಿಗಳಾಗಿಸಲು ಗುರುವಿನ ಆಗಮನ

ಪ್ರಗತಿವಾಹಿನಿ ವಿಶೇಷ:

ಆಷಾಢ ಮಾಸದ ಹುಣ್ಣಿಮೆಯಲ್ಲಿ ಗುರುಪೂರ್ಣಿಮೆ ಬರುತ್ತದೆ. ಗುರುವಿನ ಮಹಿಮೆ ಅಪಾರವಾಗಿದೆ. ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮನೆಂದು ಕರೆಸಿಕೊಳ್ಳಲು ಅವನಿಗೆ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳೇ ಕಾರಣ. ಅವರ ಮಾರ್ಗದರ್ಶನವೇ ಆತನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು.

ಅಂತೆಯೇ ಮಹಾಭಾರತದಲ್ಲಿ ಅರ್ಜುನ ಒಬ್ಬ ಉತ್ತಮ ಬಿಲ್ಲುಗಾರ. ಅದಕ್ಕೆ ಗುರು ದ್ರೋಣಾಚಾರ್ಯರೇ ಕಾರಣ. ಇತಿಹಾಸದಲ್ಲಿ ಹಕ್ಕ ಬುಕ್ಕರು ಶತ್ರುಗಳಿಂದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ವಿದ್ಯಾರಣ್ಯ ಗುರುಗಳು ಕಾರಣವಾದರೆ, ಶಿವಾಜಿ ಮಹಾರಾಜ ಸೋತು ಬಸವಳಿದು ಕಂಗೆಟ್ಟು ಕುಳಿತಾಗ ರಾಮದಾಸರ ಗುರು-ಉಪದೇಶಆತ್ಮಬಲ ತುಂಬಲು ಕಾರಣವಾಯಿತು. ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮ ಗಾಂಧೀಜಿಯಾಗಲು ಕಾರಣರಾದ ಗುರುಗಳು ಅನೇಕರಿದ್ದಾರೆ. ಅವರತತ್ವೋಪದೇಶಗಳು ಗಾಂಧಿಯವರ ಮನಸ್ಸನ್ನೂ ಆಳವಾಗಿ ಹೊಕ್ಕು ಸತ್ಯ ಮತ್ತುಅಹಿಂಸೆಯ ಬಗ್ಗೆ ಇರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವು. ಆದ್ದರಿಂದ ಭಾರತ ಅಹಿಂಸೆಯಿಂದ ಸ್ವರಾಜ್ಯವನ್ನು ಪಡೆದ ಪ್ರಪಂಚದ ಮೊದಲ ರಾಷ್ಟ್ರವಾಯಿತು. ಈಗಲೂ ನಮ್ಮ ಸುತ್ತಮುತ್ತಲಿನ ಯಾವುದೇ ನಾಯಕರನ್ನು ಕೇಳಿದರೆ ಅವರ ಜೀವನದ ಗುರಿ ಅವರ ಗುರುಗಳು ಹಾಕಿಕೊಟ್ಟ ದಾರಿಯೆಂಬುದು ಸತ್ಯ.

ಆದರೆ ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಅವರಿಗೆ ಮೊದಲಿನಂತೆ ಗೌರವವಿಲ್ಲ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಪೋಷಕರು, ಸಾಮಾಜಿಕ ವ್ಯವಸ್ಥೆ, ಮಾಧ್ಯಮಗಳು ಸಹ ಕಾರಣವಾಗಿದ್ದು, ಇವುಗಳಿಂದಲೇ ನಮ್ಮ ಸಾಮಾಜಿಕ ಬುನಾದಿ ಅಲುಗಾಡುತ್ತಿದೆ. ಸಮಾಜದಲ್ಲಿ ಗುರುವಿನ ಮಾರ್ಗದರ್ಶನವಿಲ್ಲದೇ ಇಂದು ಅತ್ಯಾಚಾರ, ಅನ್ಯಾಯ, ವಂಚನೆ, ಭ್ರಷ್ಟಾಚಾರ ಮುಂತಾದವುಗಳು ತಾಂಡವವಾಡುತ್ತಿವೆ. ಶಿಕ್ಷಕರು ಮೌಲ್ಯಯುತವಾದ ಪ್ರಜೆಗಳನ್ನು ತಯಾರು ಮಾಡಬೇಕು. ಪ್ರಾಥಮಿಕ ಶಿಕ್ಷಣ ಮನುಷ್ಯನ ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಉತ್ತಮಗುರುವಿನ ಮಾರ್ಗರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ.

ಗುರುವೆಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವವರು ಮಾತ್ರವಲ್ಲ. ಮನೆಯಲ್ಲಿ ತಾಯಿ-ತಂದೆ, ಅಜ್ಜ-ಅಜ್ಜಿಯರು, ಬಂಧು-ಬಳಗದವರು, ಸ್ನೇಹಿತರು, ಪ್ರತಿನಿತ್ಯ ಮಾತನಾಡಿಸುವ ಸಜ್ಜನರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಸಹೃದಯಿ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ ಮಾನವ ಬಹಳ ಎತ್ತರಕ್ಕೆ ಏರಬಹುದು.‘ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿ’. ಏನು ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ, ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದಶನವಿಲ್ಲದೇ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದನೆಂಬುದು ತಿಳಿಯುತ್ತದೆ.

ಸರ್ವಜ್ಞ, ಬಸವಣ್ಣ, ಅಕ್ಕಮಹಾದೇವಿ, ಮುಂತಾದವರ ವಚನ ಸಾಹಿತ್ಯದಲ್ಲಿ, ಸಂತ ತುಕಾರಾಮ, ಜ್ಞಾನೇಶ್ವರ, ಚೊಖಾ ಮೇಳ, ಮುಕ್ತಾಬಾಯಿಯವರು ಬರೆದಿರುವ ಅಭಂಗಗಳಲ್ಲಿ ಗುರುವಿನ ಮಹಿಮೆ ಮಾಡಲಾಗಿದೆ.

ನಿಜವಾದ ಸದ್ಗುರು ನಿರಾಕಾರ ಭಗವಂತನಾಗಿದ್ದಾನೆ.ಈ ಪತಿತ ಪ್ರಪಂಚವನ್ನು ಮತ್ತೊಮ್ಮೆ ಪಾವನ ಮಾಡಲು ಸ್ವಯಂ ಸದ್ಗುರುವಾದ ಪರಮಾತ್ಮನು ಈ ಭೂಮಿಯ ಮೇಲೆ ಅವತರಿತನಾಗಿದ್ದಾನೆ. ಅವನು ನಿರಾಕಾರ ಜ್ಯೋತಿರ್ಬಿಂದು ಸ್ವರೂಪದಲ್ಲಿದ್ದಾನೆ. ಅವನು ವಿಶ್ವದ ಸರ್ವ ಆತ್ಮರ ಸತ್ಯ-ಗುರು ಆಗಿದ್ದಾನೆ.ಅವನು ಜ್ಞಾನ, ಪವಿತ್ರತೆ, ಪ್ರೇಮ, ಆನಂದ ಮತ್ತು ಶಕ್ತಿಗಳ ಸಾಗರವಾಗಿದ್ದಾನೆ. ಸದ್ಗುರುವಾಗಿ ನಮ್ಮೆಲ್ಲರಿಗೂ ಮುಕ್ತಿ ಮತ್ತು ಜೀವನ ಮುಕ್ತಿ ನೀಡಲು ಬಂದಿದ್ದಾನೆ.

ವಿಶ್ವದ ಸರ್ವದುಃಖಿ ಆತ್ಮರುಗಳನ್ನು ದುಃಖಗಳಿಂದ ಮುಕ್ತರನ್ನಾಗಿ ಮಾಡಲು ಮತ್ತು ಈ ಹಳೆಯ ಪತಿತ ಕಲಿಯುಗಿ ಸೃಷ್ಟಿಯನ್ನು ಮತ್ತೊಮ್ಮೆ ಪಾವನ ಸತ್ಯಯುಗಿ ಸೃಷ್ಟಿಯನ್ನಾಗಿ ಮಾಡಲು ಮತ್ತು ವಿಕಾರಿ ಮನುಷ್ಯರನ್ನು ಮತ್ತೊಮ್ಮೆ ಶ್ರೇಷ್ಠಾಚಾರಿ ದೇವತೆಗಳನ್ನಾಗಿ ಮಾಡಲು ಸುಖಕರನಾದ ಪರಮಾತ್ಮನು ಬಂದಿದ್ದಾನೆ. ಪರಮಾತ್ಮನು ಜ್ಞಾನ-ಸಾಗರನಾಗಿದ್ದು, ವರ್ತಮಾನ ಸಮಯದಲ್ಲಿ ನಾವು ಆತ್ಮರುಗಳಿಗೆ ಆಧ್ಯಾತ್ಮಿಕ ಜ್ಞಾನ ಮತ್ತು ಸಹಜ ರಾಜಯೋಗದ ಶಿಕ್ಷಣವನ್ನು ನೀಡುತ್ತಿದ್ದಾನೆ. ಸಹಜ ರಾಜಯೋಗದಿಂದ ಆತ್ಮದ ಎಲ್ಲಾ ಪಾಪ ಕರ್ಮಗಳು ಭಸ್ಮವಾಗಿ, ಆತ್ಮವು ಮತ್ತೊಮ್ಮೆ ಪಾವನವಾಗಿ ಸತೋಪ್ರಧಾನವಾಗುತ್ತದೆ. ರಾಜಯೋಗದಿಂದ ಮನುಷ್ಯಾತ್ಮರು ಮತ್ತೊಮ್ಮೆ ದೇವಾತ್ಮರಾಗುತ್ತಾರೆ.

ಹಾಗಾದರೆ ಬನ್ನಿ, ಈ ಗುರುಪೂರ್ಣಿಮೆಯಂದು ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಹೋಗಿ ಸತ್ಯಗುರುವಿನ ಪರಿಚಯ ತಿಳಿದು, ಮುಕ್ತಿ ಜೀವನಮುಕ್ತಿಗೆ ಪಾತ್ರರಾಗೋಣ.

  • ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್

  *ಕಡಲ ಕೊರೆತಕ್ಕೆ ದೀರ್ಘಕಾಲಿಕ  ಯೋಜನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button