Karnataka News

ಗಡಿನಾಡು – ನಮ್ಮ ನಾಡು

ಡಾ. ಎಚ್. ಆಯ್. ತಿಮ್ಮಾಪುರ

‘ಗಡಿ ಗಟ್ಟಿ ಇದ್ದರೆ ನಾಡು, ಧಡಿ ಗಟ್ಟಿ ಇದ್ದರೆ ಸೀರೆ ಎಂಬ ಮಾತನ್ನು ನಮ್ಮ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮಿಗಳು ತಮ್ಮ ಪ್ರತಿಯೊಂದು ಭಾಷಣದಲ್ಲಿ ಹೇಳುತ್ತಾರೆ. ಗಡಿನಾಡು ಎಂದಾಗ ಇಂದು ನಾವು ಭೌಗೋಲಿಕವಾಗಿ ಒಪ್ಪಿಕೊಂಡ ಕನ್ನಡ ನಾಡಿನ ಅಂಚು ಪ್ರದೇಶಗಳೆಲ್ಲ ಗಡಿಭಾಗಗಳಾಗಿವೆ. ಕಾಗವಾಡದಂಥ ಗಡಿಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಗಡಿನಾಡು-ನಡುನಾಡು ಎಂಬ ಭೇದವಿಲ್ಲದ ಪರಿಕಲ್ಪನೆ ಇಲ್ಲಿ ಸಾಕಾರವಾಗಿದೆ ಎಂದು ನಾನು ಭಾವಿಸಿದ್ದೇನೆ.

ಗಡಿಭಾಗದ ಅನೇಕ ಹಳ್ಳಿಗಳಲ್ಲಿ ಮರಾಠಿ ಭಾಷಿಕರು ಪ್ರತಿವರ್ಷ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಾರೆ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಾರೆ. ಆದರೆ ನಾವು ಸರಕಾರದ ಅನುದಾನವಿದ್ದರೆ ಮಾತ್ರ ಸಮ್ಮೇಳನ ಮಾಡುವ ಆಲೋಚನೆ ಮಾಡುತ್ತೇವೆ. ಅದು ದೂರಾಗಿ ಎಲ್ಲರೂ ಕನ್ನಡ ಸಂಸ್ಕೃತಿ ಉಳಿಸುವ ಕಾರ್ಯವನ್ನು ಮಾಡಬೇಕಾದ ಅನಿವಾರ‍್ಯತೆ ಇದೆ.

ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಕವಿರಾಜಮಾರ್ಗ ಅಲಂಕಾರಗ್ರಂಥವಾದರೂ ಕನ್ನಡ ನಾಡು ನುಡಿಗಳ ಭೌಗೋಳಿಕ ಉದ್ದಗಲ ಹಾಗು ಕನ್ನಡ ಸಂಸ್ಕೃತಿಯ ಸೌರಭವನ್ನು ಸೂಸುವ ಅನೇಕ ಪದ್ಯಗಳನ್ನೊಳಗೊಂಡ ಐತಿಹಾಸಿಕ ಪ್ರಮಾಣ ಗ್ರಂಥವಾಗಿದೆ. ಕಾವೇರಿಯಿಂದಮಾ ಗೋದಾವರಿವರಮಿರ್ಪನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂದು ಅಂದಿನ ಕನ್ನಡ ನಾಡಿನ ವಿಸ್ತಾರವನ್ನು ಕವಿ ಹೇಳಿದ್ದಾನೆ. ಚದುರರ್ ನಿಜದಿಂ ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು ಕನ್ನಡಿಗರು ಎಂದು ಹೇಳುತ್ತ ಕನ್ನಡಿಗರ ಸದ್ಗುಣಗಳನ್ನೆಲ್ಲ ಪೋಣಿಸಿದ್ದಾನೆ ಈ ಕೆಳಗಿನ ಪದ್ಯದಲ್ಲಿ-

ಸುಭಟರ‍್ಕಳ್ ಕವಿಗಳ್ ಸು

ಪ್ರಭುಗಳ್ ಚಲ್ವರ‍್ಕಳಭಿಜನರ‍್ಕಳ್ ಗುಣಿಗಳ್

ಅಭಿಮಾನಿಗಳತ್ಯುಗ್ರರ್

ಗಭೀರಚಿತ್ತರ್ ವಿವೇಕಿಗಳ್ ನಾಡವರ‍್ಗಳ್

ವೀರಯೋಧರೂ ಕವಿಗಳೂ ಸುಪ್ರಭುಗಳೂ ಸುರಸುಂದರರೂ ಸುಂಸ್ಕೃತರೂ ಗುಣಿಗಳೂ ಅಭಿಮಾನಿಗಳೂ ಅತಿ ಉಗ್ರರೂ ಗಂಭೀರ ಮನಸ್ಕರೂ ಹಾಗೂ ವಿವೇಕಿಗಳೂ ಆಗಿದ್ದರೆಂದು ಅಂದಿನ ಕನ್ನಡಿಗರ ಗುಣ ಸತ್ವಗಳನ್ನು ಬಿಟ್ಟೂ ಬಿಡದೆ ಬಣ್ಣಿಸಿದ್ದಾನೆ. ಇಂದಿನ ಕನ್ನಡಿಗರಿಲ್ಲಿಯೂ ಅಭಿಮಾನ ಪುಟಿದೇಳುವಂತೆ ಶ್ರೀವಿಜಯ ಚಿತ್ರಿಸಿದ್ದಾನೆ.

ಕವಿರಾಜಮಾರ್ಗ ಎಂಬ ಲಕ್ಷಣ ಗ್ರಂಥದಲ್ಲಿ ಉಲ್ಲೇಖಿತವಾಗಿರುವ ಕಾವೇರಿಯಿಂದ ಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಎಂಬ ವಾಕ್ಯ ಕರ್ನಾಟಕ-ಮಹಾರಾಷ್ಟ್ರಗಳು ಏಕಸಾಂಸ್ಕೃತಿಕ ಮಾತ್ರವಲ್ಲ, ಏಕರಾಜಕೀಯ ಆಡಳಿತಕ್ಕೂ ಒಳಗಾಗಿದ್ದುದನ್ನು ಧ್ವನಿಸುತ್ತದೆ. ಶಾತವಾಹನರಿಂದ ಹಿಡಿದು ರಾಷ್ಟ್ರಕೂಟರವರೆವಿಗೂ ಇಂದಿನ ಕರ್ನಾಟಕ-ಮಹಾರಾಷ್ಟ್ರ ಭೂಭಾಗವು ಸಾಂಸ್ಕೃತಿಕವಾಗಿ ಹೇಗೆ ಅವಿನಾಭಾವ ಸ್ವರೂಪವನ್ನು ರೂಪಿಸಿಕೊಂಡೇ ಬಂದಿದೆ ಎಂಬುದನ್ನು ಖಚಿತವಾಗಿ ಮನಗಾಣಬಹುದಾಗಿದೆ. ಹಾಲನ ಗಾಥಾಸತ್ತಸುಯೀ ಕೃತಿಯಿಂದ ಹಿಡಿದು ಜ್ಞಾನೇಶ್ವರನ ಜ್ಞಾನೇಶ್ವರಿ ಕಾವ್ಯದವರೆಗೂ ಕನ್ನಡ-ಮರಾಠಿ ಭಾಷೆಗಳ ಸಂಬಂಧದ ವಿಶಿಷ್ಟ ನೆಲೆಗಳು ಎಂಥ ಆಯಾಮದಲ್ಲಿ ಇದ್ದವು ಎಂಬುದು ತಿಳಿದು ಬರುತ್ತದೆ. ಮಹಾರಾಷ್ಟ್ರ ಪ್ರಾಕೃತದಲ್ಲಿರುವ ಗಾಥಾಸತ್ತಸುಯೀ ಮತ್ತು ಅಪಭ್ರಂಶಗೊಂಡು ಮರಾಠಿಯಲ್ಲಿ ರಚಿತವಾದ ಜ್ಞಾನೇಶ್ವರಿ ಕಾವ್ಯದವರೆಗೂ ಅಖಂಡ ಸಂಸ್ಕೃತಿಗೆ ಪ್ರಾಕೃತ ಮತ್ತು ಕನ್ನಡ ಭಾಷೆಗಳು ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟಿವೆ. ಹಾಗೆಯೇ ಶಾತವಾಹನರಿಂದ ಹಿಡಿದು ಭೌಂಸ್ಲೆಗಳವರೆಗೆ ಹಲವಾರು ರಾಜವಂಶಗಳವರು ಕಾವೇರಿ-ಗೋದಾವರಿ ನದಿಗಳ ನಡುವಣ ಭೂಭಾಗವನ್ನು ಆಳಿ, ಸುಸಂಸ್ಕೃತ ಮತ್ತು ಸುಸಮೃದ್ಧಗೊಳಿಸಿರುವುದು ಗಮನಾರ್ಹ. ಮುಂದೆ ಪೇಶ್ವೆಗಳ ಆಡಳಿತಾವಧಿಯಲ್ಲಿ ಮತ್ತು ಅನಂತರ ಬಂದ ಬ್ರಿಟಿಶರ ಆಡಳಿತಾವಧಿಯಲ್ಲಿ ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕಗಳಲ್ಲಿ ಮರಾಠೀಕರಣ ಪ್ರಕ್ರಿಯೆ ಗಂಭೀರವಾಗಿ ಬೆಳೆಯಿತು. ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಬೆಳಗಾವಿ, ವಿಜಾಪುರ, ಧಾರವಾಡ ಮತ್ತು ಕಾರವಾರಗಳ ಸಂಬಂಧ ಸಂಪೂರ್ಣ ಮಹಾರಾಷ್ಟ್ರದೊಂದಿಗೇ ಇತ್ತು. ಹಾಗೆಯೇ ಕಲಬುರ್ಗಿ, ರಾಯಚೂರುಗಳು ಸೊಲ್ಲಾಪುರದೊಂದಿಗೂ, ಬೀದರ್ ಲಾತೂರಿನೊಂದಿಗೂ ಸಂಬಂಧ ಹೊಂದಿದ್ದವು. ಒಟ್ಟಾರೆ ರಾಜಕೀಯ, ಧಾರ್ಮಿಕವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಹೇಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದವು ಎಂಬುದನ್ನು ಮನಗಾಣಬಹುದು.

ಮಹಾಜನ ವರದಿ ಸಂಪೂರ್ಣ ಅಧ್ಯಯನ ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ರೇಖೆ ಗುರುತಿಸಿ, ಗಡಿತಂಟೆಗೆ ನಾಂದಿ ಹಾಡಿದೆ. ಕೆಲವನ್ನು ನಾವು ಕಳೆದುಕೊಂಡರು ಮಹಾಜನ ವರದಿ ಒಪ್ಪಿಕೊಂಡು ನಡೆದಿದ್ದೇವೆ. ಕೆಲವು ಮರಾಠಿಗರು ಕಾಲು ಕೆದರಿ ಜಗಳ ಮಾಡುತ್ತಿದ್ದಾರೆ. ಇಲ್ಲಿರುವುದು ಕೇವಲ ರಾಜಕೀಯ ಜಗಳವಷ್ಟೆ. ಜನರನ್ನು ದಿಶಾಬೂಲ್ ಮಾಡಿ ಅಭಿವೃದ್ಧಿ ಮಾಡದೆ ಅಧಿಕಾರ ಉಳಿಸಿಕೊಳ್ಳುವ ಹುನ್ನಾರವಾಗಿದೆ.

ಹೀಗೆ ಎರಡು ಭಿನ್ನ ವಾರ್ಗೀಕ ಭಾಷೆಗಳು ಒಂದೇ ಸಾಂಸ್ಕೃತಿಕ ಆಯಾಮವನ್ನು ಹೊಂದಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಭಾಗಗಳಲ್ಲಿ ಭಾಷಾ ಸಂಘರ್ಷ ಮತ್ತು ಗಡಿಸಮಸ್ಯೆ ಬಹಳ ಗಂಭೀರವಾಗಿ ಬೆಳೆದು ಪೆಡಂಭೂತವಾಗಿದೆ. ಡೆಪ್ಯೂಟಿ ಚೆನ್ನಬಸಪ್ಪ ಅವರಿಂದ ಹಿಡಿದು ಇಂದಿನವರೆವಿಗೂ ಮುಂಬೈ ಕರ್ನಾಟಕದ ಅದರಲ್ಲಿಯೂ ಬೆಳಗಾವಿ ಜಿಲ್ಲೆಯ ಗಡಿಭಾಗದ ಸಂಕೀರ್ಣತೆಯನ್ನು ಪರಿಹರಿಸಲು ಪ್ರಯತ್ನಗಳು ನಡೆದೇ ಇವೆ. ಆದರೂ ಏಕೆ ಫಲಿತಾಂಶ ಸಾಧ್ಯವಾಗಿಲ್ಲ? ಎಂಬುದು ಬಹಿರಂಗವಾಗಿಯೇ ಎದ್ದು ಕಾಣುವ ಬಿಡಿಸಲಾಗದ ಪ್ರಶ್ನೆಯಾಗಿದೆ. ಅದಕ್ಕೆ ಏನೆಲ್ಲ ಕಾರಣಗಳಿವೆ; ನೆರೆಯ ಮಹಾರಾಷ್ಟ್ರದಲ್ಲಿನ ಕಾರ್ಯಸ್ವರೂಪ ಎಂಥದು? ಕರ್ನಾಟಕದಲ್ಲಿ ಇಂದಿಗೂ ಝಾಲಾಚ್ ಪಾಹಿಜೆ ಎಂಬ ರಾಜಕೀಯ ಪ್ರೇರಿತವಾಗಿದ್ದರೂ ಸರಿಯೇ ಒಕ್ಕೊರಲ ಗಟ್ಟಿದನಿ ದಿನೇ ದಿನೇ ಹೆಚ್ಚು ಹೆಚ್ಚು ಬಿರುಸುಗೊಳ್ಳುತ್ತಿರುವ ಕಾರಣಗಳಾವುವು? ಎಂಬುದನ್ನು ಅಧ್ಯಯನ ಮಾಡಬೇಕಾಗಿದೆ. ಕೇವಲ ಎರಡು ದಿನಗಳ ಹಿಂದೆ (ದಿನಾಂಕ ೨೬-೧-೨೦೨೧ ರಂದು) ಮಹಾರಾಷ್ಟ್ರದ ಮುಖ್ಯಮಂತ್ರಿ ಗಡಿ ಸಮಸ್ಯೆ ಕುರಿತು ೫೦೦ ಪುಟಗಳ ಕೃತಿಯೊಂದನ್ನು ಬಿಡುಗಡೆ ಮಾಡಿದ ಸಂಗತಿ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಗಡಿ ಸಮಸ್ಯೆಯನ್ನು ನಿರಂತರವಾಗಿ ಜೀವಂತವಾಗಿಟ್ಟುಕೊಂಡು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬ ಹುನ್ನಾರ ಇದರಲ್ಲಿದೆ. ಕುವೆಂಪು ಅವರು ನಮಗೆ ಮನುಷ್ಯ ಡಾಕ್ಟರರು, ಮನುಷ್ಯ ಇಂಜನಿಯರರು ಬೇಕು ಎಂದು ತಮ್ಮ ಭಾಷಣ ಒಂದರಲ್ಲಿ ಹೇಳಿದ್ದರು. ಇಂದು ನಮಗೆ ಮನುಷ್ಯ ರಾಜಕೀಯ ಧುರೀಣರು ಬೇಕು.

ಯಾವುದೇ ಒಂದು ಪ್ರದೇಶದ ಭಾಷೆ, ಆ ಪ್ರದೇಶದ ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ. ಸಂಸ್ಕೃತಿಗೂ-ಭಾಷೆಗೂ ನಿಕಟ ಸಂಬಂಧ. ಭಾಷೆಯ ಹುಟ್ಟು ಬೆಳವಣಿಗೆಗೆ ಸಂಸ್ಕೃತಿಯೇ ಅಡಿಗಲ್ಲು. ಭಾಷೆ ಸಂಸ್ಕೃತಿಯ ವಿಕಾಸಕ್ಕೆ ಅನುಕೂಲಕರ ವಾತಾವರಣ ನಿರ‍್ಮಿಸುವ ಸಾಧ್ಯತೆಯಿದೆ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಭಾಷಾಭಿಮಾನ ಸಂಸ್ಕೃತಿಯ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಅಪಾಯಕಾರಿಯಾದ ಪ್ರವೃತ್ತಿಯೇನೋ ಎಂದು ಅನುಮಾನಿಸುವಂತಾಗಿದೆ. ಭಾರತದ ಮಟ್ಟಿಗಂತೂ ಈ ಮಾತು ಸತ್ಯ. ತಲೆ ತಿರುಕ ಸಂಸ್ಕೃತಿ ಭಾಷೆ-ಭಾಷೆಗಳ ನಡುವೆ ಗೋಡೆ ಎಬ್ಬಿಸುತ್ತದೆ. ರಾಜಕೀಯ ಆರ್ಭಟದಲ್ಲಿ ಸಂಸ್ಕೃತಿಯ ಸದ್ದು, ನಾದ, ಲಯ ಕೇಳಿಸದಷ್ಟು, ಗುರುತಿಸದಷ್ಟು ನಾವು ಕಿವುಡರಾಗಿದ್ದೇವೆ.

ಬೆಳಗಾವಿ ಪ್ರದೇಶದಲ್ಲಿ ಸಂಸ್ಕೃತಿಯ ಅಥವಾ ಜನಾಂಗೀಯ ದ್ವೇಷವಿಲ್ಲ. ಭಾಷಾ ದ್ವೇಷವೂ ಇಲ್ಲ. ದ್ವೇಷವಿರುವುದು ಬರೇ ರಾಜಕೀಯ ವಲಯದಲ್ಲಿ ಮಾತ್ರ…. ಬೆಳಗಾವಿ ನೆಲದ ಸಾಂಸ್ಕೃತಿಕ ಅರಾಜಕತೆ ಕ್ಷೀಣಿಸುತ್ತಿರುವ ಇಂದಿನ ಪರಿಸರದಲ್ಲಿ ಭಾಷಿಕ ಸಮನ್ವಯ ಸಾಧಿಸಬೇಕಾದದ್ದು ಮಾನವೀಯ ಅಗತ್ಯಗಳಲ್ಲೊಂದು. ಈ ಪ್ರಜ್ಞಾವಂತಿಕೆ ಮಾನವನ ಹೃದಯವಂತಿಕೆಯನ್ನು, ಶ್ರೇಷ್ಠತೆಯನ್ನು ಉನ್ನತಕ್ಕೇರಿಸಬಲ್ಲದು. ಇಂಥ ಅದಮ್ಯ ಶಕ್ತಿಯಲ್ಲಿ ನಾವೆಲ್ಲ ನಂಬಿಕೆಯಿಡಬೇಕಾಗಿದೆ. ಅಂದಾಗಲೇ ಸಾಂಸ್ಕೃತಿಕ ಸಾಮರಸ್ಯ ಸಾಧ್ಯ.

ಗಡಿಭಾಗದ ಅಭಿವೃದ್ಧಿಗೆ ನಮ್ಮ ಸರಕಾರ ವಿಶೇಷ ಆದ್ಯತೆ ನೀಡುತ್ತದೆ. ಈ ಅರ್ಥ ಬರುವ ಮಾತುಗಳನ್ನು ಕರ್ನಾಟಕದ ಏಕೀಕರಣ ನಂತರ ಪ್ರತಿ ಮುಖ್ಯಮಂತ್ರಿಯ ಬಾಯಿಯಿಂದಲೂ ಒಂದಿಲ್ಲೊಂದು ಸಂದರ್ಭದಲ್ಲಿ ನಾವುಗಳೆಲ್ಲ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಸೀಮಾಭಾಗದ ಅಭಿವೃದ್ಧಿಯ ಬಗ್ಗೆ ಆಗಾಗ ನಮ್ಮ ಸರಕಾರಗಳು ಜಿಜ್ಞಾಸೆ ತೋರುತ್ತಲೇ ಬಂದಿವೆ. ಈ ಭಾಗದಲ್ಲಿ ಕನ್ನಡ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನಮ್ಮ ಸರಕಾರಗಳು ಮತ್ತು ನಮ್ಮ ಕರ್ನಾಟಕ ಸರಕಾರದ ಕೃಪಾಪೋಷಿತ ಮಂಡಲಿಗಳು, ಪ್ರಾಧಿಕಾರಗಳು, ಅನುಷ್ಠಾನಗಳು, ಪರಿಷತ್ತುಗಳು ವಿಶೇಷ ಕಾರ್ಯ ಯೋಜನೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಲೇ ಸಾಗಿವೆ. ನಮ್ಮ ಬೇರೆ ಬೇರೆ ಸರಕಾರಗಳೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ಮುಂತಾದ ವಿಭಿನ್ನ ಆಕರ್ಷಕ ಹೆಸರುಗಳಡಿಯಲ್ಲಿ ಇಲ್ಲಿಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಲೇ ಬಂದಿವೆ…. ಇದರರ್ಥ ಒಂದು ನಾಡಿನ ಭೌತಿಕ-ಭೌಗೋಳಿಕ, ಸಾಮಾಜಿಕ-ಸಾಂಸ್ಕೃತಿಕ ಏಕತೆಯಲ್ಲಿ ಗಡಿಭಾಗದ ವಿಶೇಷ ಮಹತ್ವವನ್ನು ನಮ್ಮ ಇದುವರೆಗಿನ ಎಲ್ಲಾ ಸರಕಾರದವರೂ ಮನಗಂಡಿದ್ದಾರೆ ಆದರೂ ಜವಾಬ್ದಾರಿಯುತ ಚಿಂತನಗಳು ಕನ್ನಡಿಗರ ತಲೆಯನ್ನು ಕೊರೆಯದಿರುವುದು ವಿಪರ್ಯಾಸದ ಸಂಗತಿ.

ಭಾಷೆ, ಸಂಸ್ಕೃತಿಯ ಬಗೆಗೆ ಮರಾಠಿಗರಿಗಿರುವ ತೀವ್ರ ನಿಷ್ಠೆ, ಕಾಳಜಿ, ಕನ್ನಡಿಗರಿಗಿರುವ ಅಪಾರ ಉದಾಸೀನತೆ, ಎರಡೂ ಘಾತುಕ ಪ್ರವೃತ್ತಿಗಳೇ, ಆಂಗ್ಲ ಹಾಗೂ ಸ್ಪೆನಿಷ ಭಾಷೆಯ ಆಕ್ರಮಣಕಾರಿ ಸ್ವಭಾವದಿಂದ ಲ್ಯಾಟಿನ್ ಅಮೆರಿಕೆಯ ಬುಡಕಟ್ಟು ಸಂಸ್ಕೃತಿ ಹಾಗೂ ಭಾಷೆಯ ಸಂಪೂರ್ಣ ನಷ್ಟಗೊಂಡಂತೆ ಮರಾಠಿಯ ಹಠಮಾರಿ, ಉಗ್ರ ಸ್ವಭಾವದಿಂದಾಗಿ ಗಡಿಪ್ರದೇಶದ ಕನ್ನಡ ಹಾಳಾಗುತ್ತದೆ ಎಂಬ ಆತಂಕ ಏಕೀಕರಣದ ನಂತರದ ಕಾಲದಲ್ಲಿ ಮೂಡಿದ್ದು ಸತ್ಯ. ಭಾಷಾಶಾಸ್ತ್ರಜ್ಞರ ಪ್ರಕಾರ ಭಾಷೆಗೆ ಬಾಹ್ಯ ಹಾಗೂ ಆಂತರಿಕ ಎಂಬೆರಡು ಅಂಶಗಳಿವೆ. ಅಕ್ರಮಣ ಮಾಡುವ ಜನಾಂಗವೂ ಇನ್ನೊಂದು ಭಾಷೆಯ ವ್ಯಾಕರಣ ವ್ಯವಸ್ಥೆಯನ್ನಷ್ಟೇ ಅಲ್ಲ ಸಾಂಸ್ಕೃತಿಕ ಸ್ವರೂಪವನ್ನೇ ಬದಲಾಯಿಸುವ ತಾಕತ್ತು. ಹೊಂದಿರುತ್ತದೆ. ಬೆಳಗಾವಿಯ ಗಡಿ ಪ್ರದೇಶದಲ್ಲಿ ನಾವಿದನ್ನು ಇಂದು ಪ್ರತ್ಯೆಕ್ಷವಾಗಿ ಅನುಭವಿಸುತ್ತಿದ್ದೇವೆ.

ಕರ್ನಾಟಕ ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳು ಗಡಿ ಭಾಗಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲವೊಂದು ವಿಶೇಷ ಕಾರ್ಯಕ್ರಮಗಳನ್ನು ಕೈಕೊಳ್ಳುತ್ತಲಿವೆ. ಇವುಗಳ ವ್ಯಾಪ್ತಿ ಹೆಚ್ಚಾಗಬೇಕಾಗಿದೆ. ಹಾಗೆಯೇ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆಯನ್ನು ಕೊಡುವದು ಜರೂರ ಇದೆ. ಕನಿಷ್ಠ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸರಬರಾಜು ಇತ್ಯಾದಿಗಳಿಗೆ ವರ್ಷಾನುವರ್ಷ ಪರದಾಡಬೇಕಾದ ಜನತೆ, ಎಲ್ಲಿದ್ದರೇನು ಅನ್ನುವ ಉದಾಸೀನ ಭಾವನೆ ತಾಳುವದು ಸಹಜ. ಗಡಿಭಾಗಗಳು ನಿರ್ಲಕ್ಷ್ಯತೆಗೆ ಒಳಗಾಗಿವೆ ಎಂಬ ಭಾವನೆ ಜನರಲ್ಲಿ ಬರದಂತೆ ನೋಡಿಕೊಳ್ಳಬೇಕಾಗಿದೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಸುಭದ್ರ ಮತ್ತು ಸಮರ್ಪಕವಾಗಿ ಆದ ಪಕ್ಷದಲ್ಲಿ ಭಾಷಾ ಸಮಸ್ಯೆಗಳಿಗೆ ಪರಿಹಾರ ಹೆಚ್ಚು ಕಡಿಮೆ ಕಂಡುಕೊಂಡಂತೆಯೆ, ಪರಿಹಾರಗಳನ್ನು ಹುಡುಕಿಕೊಂಡು ಹೋಗುವ ಸಮಸ್ಯೆ ಇಲ್ಲ, ಕೊರತೆ ಇರುವುದು ಇವುಗಳ ಅನುಷ್ಠಾನದ ಬಗ್ಗೆ ದೃಢಸಂಕಲ್ಪ ಇಲ್ಲದಿರುವುದು. ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಸಾಮಾನ್ಯ ಜನತೆಯ ಪಾತ್ರ ಪರಿಣಾಮಕಾರಕವಾಗಬೇಕಾಗಿದೆ. ಈ ಪಾತ್ರ ವಹಿಸಲು ಅವರಿಗೆ ಮಾತೃಭಾಷೆ ಒಂದು ಉಪಯುಕ್ತ ಸಾಧನ. ಈ ಸಾಧನ ಇನ್ನೂ ಹೆಚ್ಚಿನ ಶಕ್ತಿ ಪಡೆಯಬೇಕಾಗಿದೆ.

ಉಭಯ ರಾಜ್ಯಗಳ ಗಡಿಭಾಗಗಳಲ್ಲಿ ನೆಲೆಸಿರುವ ಜನರ ನಿತ್ಯದ ವ್ಯವಹಾರ, ಭಾಷೆಗಳ ಜಂಜಾಟದಲ್ಲಿ ಸಿಲುಕಿಕೊಂಡಿಲ್ಲ. ಮಹಾಜನರು ಹೇಳಿದಂತೆ ಸಾಮಾನ್ಯ ಮನುಷ್ಯ ಭಾಷಾ ವ್ಯಾಮೋಹದಿಂದ ದೂರ ಉಳಿದಿದ್ದಾನೆ. “ಜಬತಕ್ ಬೆಳಗಾವಿ ನಹೀ ಮಿಲೇಗಿ, ತಬತಕ್ ಮುಂಬಯಿ ಜಲೇಗಿ ಅನ್ನುವ ಶಿವಸೇನೆಯ ಅಬ್ಬರ ಈಗ ಅಡಗಿದೆ. ಇಂದಿನ ಜಾಗತೀಕರಣದ ದಿನಗಳಲ್ಲಿ ಮುಂಬರುವ ಪೀಳಿಗೆಗೆ ತ್ರಿಭಾಷಾ ಸೂತ್ರ ಸುಸೂತ್ರವಾಗಬೇಕಾಗಿದೆ. ೧೯೫೬ರ ನಂತರ ತ್ರಿಭಾಷಾ ಸೂತ್ರ ಹುಟ್ಟಿಕೊಂಡಂಥದು.

ರಾಷ್ಟ್ರೀಯ ಭಾವೈಕ್ಯತೆಯ ಕುರಿತಾದ ಡಾ: ಎಚ್.ನರಸಿಂಹಯ್ಯ ಇವರ ನುಡಿಗಳು ಮನನೀಯವಾಗಿವೆ. “ನಮ್ಮದು ಬಹು ಭಾಷೆಗಳ ದೇಶ, ಇಂತಹ ದೇಶಗಳು ಪ್ರಪಂಚದಲ್ಲಿ ಸಾಕಷ್ಟಿವೆ, ಭಾಷಾಭಿಮಾನ ತಪ್ಪಲ್ಲ. ಅಷ್ಟೇ ಅಲ್ಲ. ಭಾಷಾಭಿಮಾನವನ್ನು ಅಗತ್ಯವಾಗಿ ಬೆಳೆಸಬೇಕು. ಆದರೆ ಭಾಷಾ ದುರಭಿಮಾನದಿಂದ, ಭಾಷಾಂಧತೆಯಿಂದ ಸಮಸ್ಯೆಗಳು ಉದ್ಭವಿಸುತ್ತದೆ ಸಮಾಜದಲ್ಲಿ ಬಿರುಕು ಉಂಟಾಗುತ್ತದೆ.

ಗಡಿಭಾಗದಲ್ಲಿ ಕನ್ನಡ ಕ್ಷೀಣಿಸುತ್ತಿದೆ ಎಂಬ ಕೊರಗು ಎಲ್ಲ ಕಾಲಕ್ಕೂ ಇದ್ದದ್ದೇ. ಇಂಥ ಸಂದರ್ಭದಲ್ಲಿ ಡಾ.ಎಸ್.ಎಲ್.ಭೈರಪ್ಪನವರು ಹೇಳಿದ “ತಾನು ಕನ್ನಡಿಗ ಎಂಬ ಅರಿವು ಅವನ ಕ್ರಿಯಾಶೀಲಪ್ರಜ್ಞೆಯ ಕೇಂದ್ರದಲ್ಲಿರಬೇಕು. ಆಗ ಕನ್ನಡ ಬೆಳೆಯುತ್ತದೆ, ಕನ್ನಡಿಗನನ್ನು ಬೆಳೆಸುತ್ತದೆ ಈ ಮಾತುಗಳನ್ನು ನಾವು ಗಡಿನಾಡಿನಲ್ಲಿ ನಿಂತು ಆಲೋಚಿಸಬೇಕಾಗಿದೆ.

ಇನ್ನು ಮುಂದೆ ಗಡಿನಾಡಿನ ಜನರನ್ನು ನಮ್ಮ ಬಂಧುಗಳೆಂದು ಭಾವಿಸಬೇಕು. ಅಲ್ಲಿಯ ಮಕ್ಕಳಿಗಾಗಿ ಕನ್ನಡ ಮಾತೃಭಾಷೆಯ ಉತ್ತಮವಾದ ಶಾಲೆಗಳನ್ನು ಪ್ರಾರಂಭಿಸಬೇಕು. ಅಚ್ಚುಕಟ್ಟಾದ ಕಟ್ಟಡ ಅಂದ ಚೆಂದದ ವಾತಾವರಣ ನಿರ್ಮಾಣ ಮಾಡಬೇಕು. ಅಲ್ಲಿಯ ರೈತರಿಗೆ ಸಬ್ಸಿಡಿ ರೀತಿಯಲ್ಲಿ ಬೀಜ ಗೊಬ್ಬರಗಳನ್ನು ಕೊಡಬೇಕು. ಅವರಿಗೆ ಹಾನಿ ಸಂಭವಿಸಿದರೆ ತಕ್ಷಣ ಸ್ಪಂದಿಸಬೇಕು. ಕರ್ನಾಟಕವೇ ನಮ್ಮ ಉತ್ತಮ ರಾಜ್ಯ ಎಂಬ ಭಾವನೆ ಬಂದು, ಮಹಾರಾಷ್ಟ್ರದವರು ಬಂದರೆ ನಾವು ಆರಾಮವಾಗಿದ್ದೇವೆ, ನಿಮ್ಮಷ್ಟಕ್ಕೆ ನೀವು ಬದುಕಿರಿ ಎಂದು ಬುದ್ಧಿ ಹೇಳಬೇಕು. ಬೃಹತ್ ಕೈಕಾರಿಗಳನ್ನು ಸ್ಥಾಪಿಸಿ ಕನ್ನಡಿಗೆ ಮಾತ್ರ ಉದ್ಯೋಗ ಕೊಡಬೇಕು. ಕನ್ನಡಿಗರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಸರಕಾರ-ಸಹಕಾರ ಸಂಘ ಸಂಸ್ಥೆಗಳು, ಸಂಘಟನೆಗಳು ಒಳನಾಡ ಸರ್ವಕನ್ನಡಿಗರ ಜವಾಬ್ದಾರಿಯಾಗಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button