Karnataka News

ಡಾ.ಪ್ರಭಾಕರ ಕೋರೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಲೂ ಯೋಗ್ಯರಾಗಿದ್ದಾರೆ

ಪ್ರಾ.ಬಿ.ಎಸ್.ಗವಿಮಠ
ಕಾಗವಾಡದಲ್ಲಿ ಜರುಗಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಪ್ರಭಾಕರ ಕೋರೆ ನಮ್ಮ ಅಭಿನಂದನೆಗಳಿಗೆ ಪಾತ್ರರಾಗಿದ್ದಾರೆ.
ಆದರೆ ಕೆಲವರು ಈ ಸುದ್ದಿ ಓದಿ ಹುಬ್ಬೇರಿಸಿದ್ದಾರೆ. ಡಾ.ಪ್ರಭಾಕರ ಕೋರೆಯವರಿಗೂ ಸಾಹಿತ್ಯಕ್ಕೂ ಏನು ಸಂಬಂಧ ಎಂದು ಕೊಂಡವರಿದ್ದಾರೆ, ಅದು ತಪ್ಪಲ್ಲ, ಸಹಜವೇ ಆಗಿದೆ. ಕರ್ನಾಟಕದಲ್ಲಿರುವ ಯಾವುದೇ ಕನ್ನಡಿಗ ಸಾಹಿತ್ಯ ಪರಿಷತ್ತಿನ ಸದಸ್ಯನಾಗಬಹುದು. ಪದಾಧಿಕಾರಿಯಾಗಬಹುದು, ಅಧ್ಯಕ್ಷರಾಗಬಹುದು, ಸರ್ವಾಧ್ಯಕ್ಷರೂ ಆಗಬಹುದು.
ಡಾ.ಮನು ಬಳಿಗಾರ ಅವರು ರಾಜ್ಯಾಧ್ಯಕ್ಷರಾದಾಗಲೂ ಅಪಸ್ವರ ತೆಗೆದವರಿದ್ದಾರೆ.  ಮಂಗಲಾ ಮೆಟಗುಡ್ ಅವರು ಜಿಲ್ಲಾಧ್ಯಕ್ಷರಾದಾಗಲೂ ಟೀಕಿಸಿದವರಿಲ್ಲವೇ? ಇರಲಿ ಬಿಡಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ.
ಪ್ರಸ್ತುತ ಡಾ.ಪ್ರಭಾಕರ ಕೋರೆಯವರು ಕಾಗವಾಡದಲ್ಲಿ ಜರುಗಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿರುವದು ಸಮರ್ಥನೀಯವಾಗಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಕ್ಕೆ ಡಾ.ಪ್ರಭಾಕರ ಕೋರೆ ನೀಡಿದಷ್ಟು ಸೇವೆಯನ್ನು ಮತ್ತು ಸಮಯವನ್ನು ಬೇರೆ ಯಾವ ಶಾಸಕರು/ಸಂಸದರು ನೀಡಿಲ್ಲ. ೨೦೦೩ರಲ್ಲಿ ಜರುಗಿದ ಅಖಿಲ ಭಾರತ ೭೦ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತಿ ಯಶಸ್ವಿಯಾಗಿ ನಡೆಸುವಲ್ಲಿ ಡಾ.ಕೋರೆಯವರ ಪಾಲು ಸಿಂಹಪಾಲು. ಡಾ.ಪಾಟೀಲ ಪುಟ್ಟಪ್ಪನವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಡಾ.ಕೋರೆ ರಾಜಾಧ್ಯಕ್ಷರ ಮೇಲೆ ಒತ್ತಡ ಹೇರಿದ್ದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ನೆಹರುನಗರದಲ್ಲಿ ಕನ್ನಡ ಸಾಂಸ್ಕೃತಿಕ ಭವನದ ಸಂಕಲ್ಪ ಮಾಡಿ, ಸರಕಾರದಿಂದ ಮೊದಲ ಹಂತದಲ್ಲಿ ೩ ಕೋಟಿ ಹಾಗೂ ೨ನೇ ಹಂತದಲ್ಲಿ ೩ ಕೋಟಿಗಳ ಅನುದಾನ ತಂದು ಭವನದ ನಿರ‍್ಮಾಣಕ್ಕೆ ಕಾರಣಪುರುಷರಾಗಿದ್ದಾರೆ.
೨೦೧೧ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನವು ಡಾ.ಕೋರೆಯವರ ಇಚ್ಛಾಶಕ್ತಿ ಹಾಗೂ ಸಂಘಟನೆಯ ಫಲವಾಗಿ ಯಶಸ್ವಿಯಾಗಿ ನೆರವೇರಿದ್ದನ್ನು ಮರೆಯುವಂತಿಲ್ಲ. ಮಾತ್ರವಲ್ಲದೆ ಗಡಿನಾಡು ಬೆಳಗಾವಿಯಲ್ಲಿ ೨೦೦೬ರಲ್ಲಿ ಸತತವಾಗಿ ಎರಡು ಸಲ ವಿಧಾನ ಮಂಡಲದ ಅಧಿವೇಶನಗಳನ್ನು ಯಶಸ್ಸುಗೊಳಿಸಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಬೆಳಗಾವಿಯಲ್ಲಿ ಒಂದಲ್ಲ, ಎರಡಲ್ಲ, ಮೂರು ವಿಶ್ವವಿದ್ಯಾಲಯಗಳಾದ (ರಾಣಿ ಚನ್ನಮ್ಮ ವಿವಿ, ವಿಶ್ವೇಶ್ವರಯ್ಯಾ ತಾಂತ್ರಿಕ ವಿವಿ, ಕೆಎಲ್‌ಇ ವೈದ್ಯಕೀಯ ವಿವಿ) ಸ್ಥಾಪನೆಗೊಳ್ಳುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಈ ಐತಿಹಾಸಿಕ ಕಾರ್ಯಗಳಿಗೆ ಗಡಿನಾಡು ಬೆಳಗಾವಿಯ ಮೇಲೆ ಅವರಿಗಿದ್ದ ಪ್ರೀತಿ ಕಾಳಜಿಗಳೇ ಜ್ವಲಂತ ನಿದರ್ಶನವಲ್ಲವೇ.
ಕೋರೆಯವರು ನಿಪ್ಪಾಣಿಯಲ್ಲಿ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮೊದಲ ಬಾರಿಗೆ ಏರ್ಪಡಿಸಲು ಮರಾಠಿ ಭಾಷಿಕರ ನೆರವನ್ನೂ ಪಡೆದು ಯಶಸ್ವಿಗೊಳಿಸಿದ್ದು ಈಗ ಇತಿಹಾಸ. ಅದೇ ರೀತಿ ಖಾನಾಪುರದಲ್ಲಿ ಹಾಗೂ ಬಾಳೇಕುಂದ್ರಿಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಲು ಸರ್ವರೀತಿಯ ನೆರವನ್ನು ಒದಗಿಸಿ ಸಂಘಟಕರಿಗೆ ಆನೆ ಬಲ ತಂದುಕೊಟ್ಟರು.
ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗಡಿಭಾಗದಲ್ಲಿ ಸಾಹಿತ್ಯ ರಥಯಾತ್ರೆ ಆಯೋಜಿಸಿದಾಗ ಅದನ್ನು ಯಶಸ್ಸುಗೊಳಿಸಲು ಡಾ.ಕೋರೆ ಟೊಂಕಕಟ್ಟಿ ನಿಂತರು. ಚಿಕ್ಕೋಡಿಯಿಂದ ಅಂಕಲಿಯವರೆಗಿನ ಆ ಸಾಹಿತ್ಯ ರಥಯಾತ್ರೆ ಸಭೆ ಸಮಾವೇಶಗಳು ಗಡಿಭಾಗದಲ್ಲಿ ಜಾಗೃತಿ ನಿರ‍್ಮಾಣವಾಗಲು ಕಾರಣವಾದವು. ಅಂಕಲಿಯಲ್ಲಿ ಮಯೂರ ಚಿತ್ರಮಂದಿರದ ಒಡೆಯರಾಗಿರುವ ಹಾಗೂ ಪ್ರದರ್ಶಕರಾಗಿರುವ ಡಾ.ಕೋರೆ ಕನ್ನಡ ಚಿತ್ರಗಳನ್ನು ವಿಶೇಷವಾಗಿ ಡಾ.ರಾಜಕುಮಾರ ಅಭಿನಯಿಸಿದ ಚಿತ್ರಗಳನ್ನು ಪ್ರದರ್ಶಿಸುತ್ತ ಗಡಿಭಾಗದ ಜನತೆಯಲ್ಲಿ ಕನ್ನಡ ಕಂಪು ಹರಡಿದ್ದಾರೆ.
೫೦ ವರ್ಷಗಳ ಹಿಂದೆ ಮರಾಠಿಮಯವಾಗಿದ್ದ ಅಂಕಲಿ ಪರಿಸರ ಇಂದು ಸಂಪೂರ್ಣ ಕನ್ನಡಮಯವಾಗಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ರಕ್ಷಣೆಗಾಗಿ ಸದಾಕಾಲ ಬೆಂಗಾವಲಾಗಿರುವ ಡಾ.ಕೋರೆ ಕೆಎಲ್‌ಇ ಸಂಸ್ಥೆಯ ಚೇರಮನ್‌ರಾಗಿ ಕೆಎಲ್‌ಇ ಪ್ರಸಾರಾಂಗದ ಮೂಲಕ ನೂರಕ್ಕೂ ಅಧಿಕ ಮೌಲಿಕ ಗ್ರಂಥಗಳ ಪ್ರಕಟಣೆಗೆ ಕಾರಣರೆನಿಸಿದ್ದಾರೆ. ಕೆಎಲ್‌ಇ ವಿಶ್ವವಿದ್ಯಾಲಯದ ಸಲುವಾಗಿ ಕೆಎಲ್‌ಇ ಗೀತೆಯನ್ನು ಖ್ಯಾತ ಕವಿ ಡಾ.ಚೆನ್ನವೀರ ಕಣವಿಯವರಿಂದ ಬರೆಸಿದ್ದಾರೆ. ಕೆಎಲ್‌ಇ ಸಂಸ್ಥೆಯು ಆಯೋಜಿಸುವ ಪ್ರತಿಯೊಂದು ಮಹಾಸಮಾರಂಭದ ಸಮಾವೇಶಗಳಲ್ಲಿ ಕೆಎಲ್‌ಇ ಪ್ರಕಟಿಸುವ ಗ್ರಂಥಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಾರೆ. ಕನ್ನಡದಲ್ಲಿ ಕೆಎಲ್‌ಇ ವಾರ್ತಾಪತ್ರಿಕೆ ಕಳೆದ ೨೦ ವರ್ಷಗಳಿಂದ ಪ್ರಕಟವಾಗುತ್ತಿದೆ. ಇವೆಲ್ಲ ಕನ್ನಡದ ಸೇವೆಯಲ್ಲವೇನು? ಕನ್ನಡದ ಬೆಳವಣಿಗೆಗಾಗಿ ಹೀಗೂ ಸೇವೆ ಮಾಡಿ ಅಭಿಮಾನ ತೋರ್ಪಡಿಸಬಹುದಲ್ಲವೇ?
ಕೇವಲ ಟಿ.ಎ.,ಡಿ.ಎ. ಸಾಹಿತಿಯೆನಿಸಿಕೊಳ್ಳುವುದಕ್ಕಿಂತ ಏನನ್ನೂ ಆಶಿಸದೆ ಕನ್ನಡಕ್ಕಾಗಿ ಸೇವೆ ಹಾಗೂ ಇತರ ನೆರವು ನೀಡುವುದಿದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲಾದ ಸೇವೆ. ಡಾ.ಪ್ರಭಾಕರ ಕೋರೆಯವರು ಒಳ್ಳೆಯ ವಾಗ್ಮಿ ಅಥವಾ ಲೇಖಕರಾಗಿರದೆ ಹೋಗಿರಬಹುದು. ಆದರೆ ಅವರು ಸಾರಸ್ವತ ಲೋಕಕ್ಕೆ ಅನೇಕ ಬರಹಗಾರರನ್ನು ರೂಪಿಸಿಕೊಟ್ಟಿದ್ದಾರೆ. ಅನೇಕ ಕನ್ನಡ ಪ್ರಾಧ್ಯಾಪಕರ ಪಿಎಚ್.ಡಿ. ಕೃತಿಗಳ ಪ್ರಕಟಣೆಗೆ ಕಾರಣರಾಗಿದ್ದಾರೆ.
ಬೆಳಗಾವಿಯಲ್ಲಿ ಗಲಾಟೆ ಆಗಿ ಕರ್ಫ್ಯು ಆಗಿದ್ದ ಸಂದರ್ಭದಲ್ಲಿಯೂ (೨೦೦೩) ಕೇವಲ ೮ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ತೋರಿಸಿದ್ದಾರೆ. ಬೆಳಗಾವಿಯಲ್ಲಿ ೨೧ನೇ ಅಖಿಲ ಭಾರತ ವೀರಶೈವ ಮಹಾಸಭೆಯನ್ನು, ಯುವಜನೋತ್ಸವವನ್ನು, ವಿಶ್ವಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಜರುಗಿಸಿ ಕೊಟ್ಟಿದ್ದಾರೆ. ಹಾಗಾಗೀ ಡಾ.ಪ್ರಭಾಕರ ಕೋರೆ ಕರ್ನಾಟಕದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಲೂ ಯೋಗ್ಯರಾಗಿದ್ದಾರೆ.
೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣರಾದ ಸರ್.ಎಂ.ವಿಶ್ವೇಶ್ವರಯ್ಯ ಕೂಡ ಖ್ಯಾತ ಸಾಹಿತಿಗಳಾಗಿರಲಿಲ್ಲ. ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿದ್ದ ದಿವಂಗತ ರಾಜಾ ಲಖಮನಗೌಡರು(೧೯೨೮-೪೩) ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಸಾಹಿತಿಗಳಲ್ಲದೇ ಉತ್ಕೃಷ್ಟ ಕನ್ನಡ ಸಂಘಟಕರಾಗಿದ್ದ ಶ್ರೀ ಹರಿಕೃಷ್ಣ ಪುನರೂರು, ದಿ.ಪುಂಡಲೀಕ ಹಾಲಂಬಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯದ ಸೇವೆಯನ್ನು ಮಾಡಿದ್ದಾರೆ. ಹಾಗೆ ಡಾ.ಪ್ರಭಾಕರ ಕೋರೆಯವರೂ ರಾಜಾಧ್ಯಕ್ಷರಾಗಲು ಅರ್ಹರು ಎಂಬುದೇ ನನ್ನ ಭಾವನೆ.
ಏನೇ ಇರಲಿ ಕಾಗವಾಡದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ.ಪ್ರಭಾಕರ ಕೋರೆಯವರನ್ನು ಆಯ್ಕೆ ಮಾಡುವ ಮೂಲಕ ಜಿಲ್ಲಾಧ್ಯಕ್ಷರಾದ  ಮಂಗಲಾ ಮೆಟಗುಡ್ ಹಾಗೂ ಅವರ ಬಳಗ ಅಭಿನಂದನೀಯ ಕಾರ‍್ಯಮಾಡಿದೆ. ಡಾ.ಕೋರೆ ಗಡಿಜಿಲ್ಲೆಯೆನಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಕೈಎತ್ತಿದ್ದಾರೆ. ಅಂತೆಯೇ ಅವರ ಕೈ ಕಲ್ಪವೃಕ್ಷವಾಗಿದೆ. ಅವರು ಎಲ್ಲ ಶಾಸಕರಿಗೂ-ಸಂಸದರಿಗೂ ಆದರ್ಶಪ್ರಾಯರಾಗಿದ್ದಾರೆ. ಡಾ.ಕೋರೆಯವರಂಥ ಕನ್ನಡ ಅಭಿಮಾನಿ ಬಳಗ ಹೆಚ್ಚುತ್ತ ಹೋಗಲಿ ಎಂದು ಆಶಿಸುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button