ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಕಾರ್ಯಕರ್ತರಿಂದಲೇ ಕಟ್ಟಿರುವ ದೊಡ್ಡ ಪಕ್ಷ. ಕರ್ನಾಟಕ ರಾಜ್ಯದ 224 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ. ಏ.25 ಮತ್ತು 26 ರಂದು ವಿಶೇಷ ಮಹಾ ಅಭಿಯಾನವನ್ನು ಬಿಜೆಪಿ ಕೈಗೊಂಡಿದೆ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜೀರಲಿ ಹೇಳಿದರು.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ವಿಶೇಷ ಮಹಾ ಅಭಿಯಾನವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ ನೇತೃತ್ವದಲ್ಲಿ ನಡೆಯಲಿದೆ. ಎಲ್ಲ ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಪ್ರಚಾರ ಮಾಡುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ, ಸೃತಿ ಇರಾನಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ 98 ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಹಾರದ ಸಂಜೀವ ಚೌರೇಶಿಯಾ ಅವರು ಪ್ರಚಾರ ನಡೆಸಲಿದ್ದಾರೆ. ದಕ್ಷಿಣ ಮತಕ್ಷೇತ್ರದಲ್ಲಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ, ಅರಭಾವಿಗೆ ಮಹಾರಾಷ್ಟ್ರದ ಸಚಿವ ಗಿರೀಶ ಮಹಾಜನ್,ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಹಾರ ಸಂಸದ ಹರೀಶ್ ದ್ವಿವೇದಿ, ಕಿತ್ತೂರಿಗೆ ಸಿದ್ಧಾರ್ಥ ಶಿರೋಳ, ಸವದತ್ತಿಗೆ ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ, ನಿಪ್ಪಾಣಿಗೆ ಕೇಂದ್ರ ಸಚಿವೆ ಅನ್ನಪೂರ್ಣ, ಚಿಕ್ಕೋಡಿ- ಸದಲಗಾಗೆ ರಾಜಕುಮಾರ ಚೌಹ್ಹಾರ, ಅಥಣಿಗೆ ಸಂಗೀತ ಯಾದವ್, ಕಾಗವಾಡಕ್ಕೆ ಮನೋಜ ಮಂಗೊರಕರ, ಕುಡುಚಿಗೆ ಮಹಾರಾಷ್ಟ್ರದ ಸಚಿವ ವಿಜಯಕುಮಾರ ದೇಶಮುಖ, ರಾಯಬಾಗಕ್ಕೆ ಜೈಕುಮಾರ ರಾವಳ, ಹುಕ್ಕೇರಿಗೆ ಶಿವಾಜಿ ರಾವ್ ಬಾಳವ್, ಯಮಕನಮರಡಿಗೆ ನಯಾಬ್ ಸಿಂಗ್ ಖೈನಿ ನಾಯಕರು ಆಗಮಿಸಲಿದ್ದಾರೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದಲ್ಲಿ ಚಿತ್ರ ನಟ ಸುದೀಪ್ ಅವರನ್ನು ಆಹ್ವಾನಿಸಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ ಎಂದರು.
ಡಬಲ್ ಎಂಜಿನ್ ಸರಕಾರದ ಯೋಜನೆ, ರಾಜ್ಯ ಸರಕಾರದ ಸಾಧನೆಯ ಬಗ್ಗೆ ಬಹಿರಂಗ ಸಮಾವೇಶದಲ್ಲಿ ನಮ್ಮ ನಾಯಕರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ತಳಹದಿಯ ಮೇಲೆ, ಬಿಜೆಪಿ ಕಾರ್ಯಕರ್ತ ಅಭಿಪ್ರಾಯ ಪಡೆದುಕೊಂಡು 224 ಮತಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡ ಎಲ್ಲ ಸಮುದಾಯದವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ ಎಂದರು.
ಕರ್ನಾಟಕ ರಾಜ್ಯದ ರಾಜಕೀಯ ವ್ಯವಸ್ಥೆಯನ್ನು ಸಿದ್ದರಾಮಯ್ಯ ಹಾಗೂ ಅವರ ತಂಡ ನಿತ್ಯ ಒಂದು ಕೋಮಿನ ಮೇಲೆ ಅಸ್ತ್ರವನ್ನು ಪ್ರಯೋಗ ಮಾಡುವ ನಿಟ್ಟಿನಲ್ಲಿ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿಕೆ ನೀಡಿ ಇಡೀ ಲಿಂಗಾಯತ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವುದು ಖಚಿತವಾಗಿದೆ. ಬಹುತೇಕ ಏ.29 ರಂದು ಹಾರೋಗೆರಿಯಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೂ ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶರದ್ ಪಾಟೀಲ, ಎಫ್.ಎಸ್.ಸಿದ್ದಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ