*2027ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶೇಷ ಒಲಂಪಿಕ್ಸ್ ಗೆ ಈಗಿನಿಂದಲೇ ತಯಾರಿ; ರಾಜ್ಯದಿಂದ ಅತಿ ಹೆಚ್ಚು ಮಕ್ಕಳು ಆಯ್ಕೆ ಸಾಧ್ಯತೆ*
31 ಜಿಲ್ಲೆಗಳಲ್ಲಿ ವಿಶೇಷ ಚೇತನ ಮಕ್ಕಳ ಶಿಕ್ಷಕರಿಗೆ ತರಬೇತಿ: ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ
ಪ್ರಗತಿವಾಹಿನಿ ಸುದ್ದಿ: 2027ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶೇಷ ಒಲಂಪಿಕ್ಸ್ ಗೆ ರಾಜ್ಯದಿಂದ ಹೆಚ್ಚಿನ ಮಕ್ಕಳು ಭಾಗವಹಿಸುವ ನಿಟ್ಟಿನಲ್ಲಿ ಭಾರತ ವಿಶೇಷ ಒಲಂಪಿಕ್ಸ್-ಕರ್ನಾಟಕ ಸಂಸ್ಥೆ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾರತ ವಿಶೇಷ ಒಲಂಪಿಕ್ಸ್-ಕರ್ನಾಟಕ ರಾಜ್ಯಾಧ್ಯಕ್ಷೆ, ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಯಕ್ಸಂಬಾ ಪಟ್ಟಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ 31 ಜಿಲ್ಲೆಗಳಲ್ಲಿ ವಿಶೇಷ ಚೇತನ (ಬುದ್ಧಿಮಾಂಧ್ಯ) ಮಕ್ಕಳ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಆಯಾ ವಸತಿ ಶಾಲೆಯಲ್ಲಿ ತರಬೇತಿ ಪಡೆದ ಶಿಕ್ಷಕರು ವಿಶೇಷ ಚೇತನ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ತಯಾರು ಮಾಡುತ್ತಾರೆ. ರಾಜ್ಯ ಮಟ್ಟದಲ್ಲಿ ಆಯ್ಕೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ 1ನೇ ಹಂತವಾಗಿ ಮಂಡ್ಯದಲ್ಲಿ ಜ. 31 ಹಾಗೂ ಫೆ. 1 ರಂದು ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಸ್ಮಿಮಿಂಗ್, ಟೆನ್ನಿಸ್ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. 30 ಶಾಲೆಗಳಿಂದ 300 ವಿಶೇಷ ಚೇತನ ಮಕ್ಕಳು ಭಾಗವಹಿಸಿದ್ದರು ಎಂದರು.
2ನೇ ಹಂತದಲ್ಲಿ ಸೈಕ್ಲಿಂಗ್, ವಾಲಿಬಾಲ್, ಫುಟ್‍ಬಾಲ್, ಸ್ಕೇಟಿಂಗ್, ಜೂಡೋ, ಗಾಲ್ಫ್ ಕ್ರೀಡೆಗಳನ್ನು ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿತ್ತು. 24 ಶಾಲೆಗಳ 182 ವಿಶೇಷ ಚೇತನ ಮಕ್ಕಳು ಭಾಗವಹಿಸಿದ್ದರು. ಇಲ್ಲಿ ಆಯ್ಕೆಯಾದ ಮಕ್ಕಳು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳು 2027ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶೇಷ ಒಲಂಪಿಕ್ಸ್ ನಲ್ಲಿ ಆಡಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ದೆಹಲಿಯಲ್ಲಿ ಜೂಡೋ, ಗುಜರಾತ್ ನಲ್ಲಿ ವಾಲಿಬಾಲ್, ಉತ್ತರ ಪ್ರದೇಶದಲ್ಲಿ ಪವರ್ ಲಿಫ್ಟಿಂಗ್, ಹರಿಯಾಣದಲ್ಲಿ ಗಾಲ್ಪ್, ಬಾಲಕರಿಗಾಗಿ ಟೇಬಲ್ ಟೆನ್ನಿಸ್ ಚಂದಿಗಡ ದಲ್ಲಿ, ಬಾಲಕಿಯರಿಗಾಗಿ ಟೇಬಲ್ ಟೆನ್ನಿಸ್ ಪಂಜಾಬ್ ನಲ್ಲಿ, ಆಸ್ಸಾಂನಲ್ಲಿ ಬ್ಯಾಡ್ಮಿಂಟನ್, ದೆಹಲಿಯಲ್ಲಿ ಟೆನ್ನಿಸ್, ಕರ್ನಾಟಕದಲ್ಲಿ ಸ್ವಿಮ್ಮಿಂಗ್, ದೆಹಲಿಯಲ್ಲಿ ಅಥ್ಲೆಟಿಕ್ ಗಳು ಫೆಬ್ರುವರಿ, ಮಾರ್ಚ್ ನಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾರತ ವಿಶೇಷ ಒಲಂಪಿಕ್ಸ್-ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಅಮರೇಂದರ್, ಖಜಾಂಚಿ ಡಿ ಸಿ ಆನಂದ್, ಬೌದ್ಧಿಕ ನ್ಯೂನ್ಯತೆಯ ತಜ್ಞೆ ಶಾಂತಲಾ ಎಸ್ ಭಟ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ