*ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ವಿಶೇಷ ಜನಾಂದೋಲನ : ಜಿಪಂ ಸಿಇಒ ರಾಹುಲ್ ಶಿಂಧೆ*
ಪ್ರಗತಿವಾಹಿನಿ ಸುದ್ದಿ: ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ “ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ” ಎಂಬ ವಿಶೇಷ ಜನಾಂದೋಲನವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.
ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥವಾಗಿ “ಸ್ವಚ್ಛ ಭಾರತ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಗಾಂಧೀಜಿ ಅವರ ಧ್ಯೇಯವಾಕ್ಯ “ಸ್ವಚ್ಛತೆಯೇ ದೈವತ್ವ” ಎಂಬ ಕನಸನ್ನು ನನಸಾಗಿಸಲು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ’ ಎಂಬ ವಿಶೇಷ ಆಂದೋಲನ ಹಮ್ಮಿಕೊಳ್ಳಲು ಕೇಂದ್ರ ಜಲ ಶಕ್ತಿ ಮಂತ್ರಾಲಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತೀರ್ಮಾನಿಸಲಾಗಿದೆ.
ಈ ವರ್ಷ “ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ” ಎಂಬ ವಿಶೇಷ ಆಂದೋಲನದ ಘೋಷವಾಕ್ಯವಾಗಿ *ಸ್ವಭಾವ ಸ್ವಚ್ಛತಾ ; ಸಂಸ್ಕಾರ ಸ್ವಚ್ಛತಾ* ಎಂದು ಘೋಷಿಸಲಾಗಿದೆ.ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸಧೃಢ ಗ್ರಾಮಗಳನ್ನು ರೂಪಿಸುವ ಮಹತ್ವಾಕಾಂಕ್ಷಿಯನ್ನು ಹೊಂದಲಾಗಿದೆ.
ಗ್ರಾಮಗಳ ಸ್ವಚ್ಛತೆಗೆ ಸ್ವಯಂ ಪ್ರೇರಿತವಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುವುದು ಜಿಲ್ಲೆಯ ತಾಲೂಕು/ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ಹೆಚ್ಚು ಜನ ಜಂಗುಳಿ ಇರುವ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಕೆರೆ,ಹಳ್ಳ,ನದಿ ತೀರ, ಸಾಂಸ್ಥಿಕ/ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು ಮತ್ತು ನಾಲಾಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ ಹಾಗೂ ಇತರ ವಿಷಯಗಳ ಕುರಿತು ಜಾಗೃತಿ, ದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಮತ್ತು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳು ಎನ್.ಜಿ.ಒ,ಸ್ವ- ಸಹಾಯ ಸಂಘಗಳು, ನೆಹರು ಯುವ ಕೇಂದ್ರ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ತಮ್ಮ ಹಂತದಲ್ಲಿ “ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯ ಸೇವೆ” ಜನಾಂದೋಲನ ಹಮ್ಮಿಕೊಳ್ಳಬೇಕು.
ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಈ ವಿಶೇಷ ಜನಾಂದೋಲನದಲ್ಲಿ ಪಾಲ್ಗೊಂಡು ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ರವರು ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ