ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಮಾ. 7ರಂದು ಹುಕ್ಕೇರಿ ನಗರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಗುವುದು.
ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದಿನಿಂದ ಏಳು ದಿನಗಳವರೆಗೆ ಸಿದ್ಧಾಂತ ಶಿಖಾಮಣಿ ಸಪ್ತಾಹ ಕಾರ್ಯಕ್ರಮ ಸ್ಥಳೀಯ ಶ್ರೀ ಗುರುಶಾಂತೇಶ್ವರ ಸಂಸ್ಥಾನಹಿರೇಮಠ ದಲ್ಲಿ ಆರಂಭಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಡಿ ಡಿ ಮಾಳಗಿ ಅವರು ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 19 ಭಾಷೆಗಳಲ್ಲಿ ಅನುವಾದವಾದ ಸಿದ್ಧಾಂತಶಿಖಾಮಣಿ ಗ್ರಂಥವನ್ನು ಖಾಸಿ ಜಂಗಮವಾಡಿ ಮಠದಲ್ಲಿ ಬಿಡುಗಡೆಗೊಳಿಸಿ ಅದ್ಬುತವಾದ ವಿಚಾರವನ್ನು ಹೇಳಿದ್ದಾರೆ. ಸಿದ್ಧಾಂತ ಶಿಖಾಮಣಿ ಕೇವಲ ವೀರಶೈವ ಧರ್ಮಗ್ರಂಥವಲ್ಲ, ಅದು ಮಾನವ ಧರ್ಮಗ್ರಂಥ. ಎಲ್ಲರಿಗೂ ಅನ್ವಯವಾಗುವ ಸಿದ್ಧಾಂತಶಿಖಾಮಣಿಯನ್ನು ಇಡೀ ವಿಶ್ವದಲ್ಲಿ ಪ್ರಚಾರಮಾಡಬೇಕು.
ಈ ಗ್ರಂಥದ ಕುರಿತಾಗಿ ಕಂಠಪಾಠ ಸ್ಪರ್ಧೆಯನ್ನು ಮತ್ತು ಪರಿಕ್ಷೆ ನಡೆಸಬೇಕು ಎಂದು ಮೊದಿಯವರು ಹೇಳಿದ ವಿಚಾರವನ್ನು ಮನದಲ್ಲಿಟ್ಟುಕೊಂಡು ಮೊದಲನೆಯ ಪ್ರಯೋಗ ಹುಕ್ಕೇರಿ ಹಿರೇಮಠದಲ್ಲಿ ಜರುಗುತ್ತಿರುವುದು ಅಭಿಮಾನದ ಸಂಗತಿ. ಸಿದ್ಧಾಂತಶಿಖಾಮಣಿಯನ್ನು ಎಲ್ಲರೂ ಅಧ್ಯಯನ ಮಾಡಬೇಕು ಎಂದರು.
ಸಾನಿದ್ಯವನ್ನು ವಹಿಸಿಕೊಂಡು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡುತ್ತಾ ಸಿದ್ಧಾಂತಶಿಖಾಮಣಿ ಏಳು ದಿನಗಳವರೆಗೆ ಪಾರಾಯಣ ನಡೆಯುವುದು. ಸುಮಾರು ಇನ್ನೂರಕ್ಕೂ ಹೆಚ್ಚು ಜನ ಮಕ್ಕಳು ಇದರಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಪ್ರಥಮ ಬಂದವರಿಗೆ ಹತ್ತು ಸಾವಿರ ರೂಗಳನ್ನು, ದ್ವಿತೀಯ ಬಂದವರಿಗೆ ಐದು ಸಾವಿರ ರೂಗಳನ್ನು, ತೃತೀಯ ಬಂದವರಿಗೆ 2500ರೂ ಗಳನ್ನು ನೀಡಲಾಗುವುದು. ಒಟ್ಟಾರೆ ಸಿದ್ಧಾಂತ ಶಿಖಾಮಣಿ ಪ್ರಚಾರವಾಗಬೇಕಾಗಿರುವುದು ಅವಶ್ಯ ಎಂದರು.
ಗುರುಕುಲದ ಮುಖ್ಯಸ್ಥರಾದ ಸಂಪತ್ ಕುಮಾರ ಶಾಸ್ತ್ರಿಗಳು ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು. ತತ್ವಾಮೃತ ಸಂಚಿಕೆಯ ಸದಸ್ಯರಾದ ಶಂಕರಗೌಡ ಸಂಗೋದಿ, ಈರಣ್ಣ ಪಾಳೆದ, ಟ್ರಸ್ಟ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಎಸ್ ಐ ಪೋಳ ಗುರುಗಳು ಉಪಸ್ಥಿತರಿದ್ದರು. ಇದೇ 7ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ನಿಮಿತ್ತ ಮೂರ್ತಿ ಪಲ್ಲಕ್ಕಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಜಗದ್ಗುರುಗಳು ನಿಡಸೋಸಿ ಜಗದ್ಗುರುಗಳು, ಕಟಕೋಳ ಎಂ ಚಂದರಗಿ ಶ್ರೀಗಳು, ಸ್ಥಳೀಯ ವಿರಕ್ತ ಮಠದ ಶ್ರೀಗಳು, ಉಳ್ಳಾಗಡ್ಡಿ ಖಾನಾಪುರ, ಕಬ್ಬೂರು, ಪಾಶ್ಚಾಪೂರು, ಕ್ಯಾರಗುಡ್ಡ, ಯಸಳೂರು ಶ್ರೀಗಳು ಸೇರಿದಂತೆ, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ