EducationKarnataka NewsLatest

*BREAKING: ಎಸ್.ಎಸ್.ಎಲ್.ಸಿ ಅಂಕದಲ್ಲಿ ಮಹತ್ವದ ಬದಲಾವಣೆ: 625ರ ಬದಲು 525 ಮಾರ್ಕ್ಸ್ ಮಾತ್ರ ನಿಗದಿ*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂಕದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಮಹಯ್ವದ ಬದಲಾವಣೆ ಜಾರಿಗೆ ತಂದಿದೆ. ಇನ್ಮುಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 625 ಅಂಕದ ಬದಲು 525 ಅಂಕಗಳನ್ನು ಮಾತ್ರ ನಿಗದಿ ಪಡಿಸಲಾಗಿದೆ.

ಆ ಮೂಲಕ ತೃತೀಯ ಭಾಷೆ ಪರೀಕ್ಷೆಯ ಅಂಕಗಳನ್ನು ಅಂಕ ಪಟ್ಟಿಯಿಂದ ಹೊರಗಿಡಲಾಗಿದೆ. ಗ್ರೇಡ್ ಮೂಲಕ ಅಂಕ ನೀಡಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಈ ಬಾರಿಯ ಪರೀಕ್ಷೆಯಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ.

ಎಸ್.​​ಎಸ್.​ಎಲ್.​​ಸಿ ಪರೀಕ್ಷೆಯಲ್ಲಿಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ಇತ್ತೀಚೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಎಸ್​​.ಎಸ್.​​ಎಲ್.​ಸಿ ಪರೀಕ್ಷೆಗೆ 525 ಅಂಕಗಳನ್ನು ನಿಗದಿ ಮಾಡಲಾಗಿದೆ. ತೃತೀಯ ಭಾಷೆಯ ಅಂಕಕ್ಕೆ ಕೊಕ್​ ನೀಡಲಾಗಿದೆ.

Home add -Advt

ರಾಜ್ಯದಲ್ಲಿ ಎಸ್​​.ಎಸ್​.ಎಲ್​.​ಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳನ್ನು 625ರಿಂದ 525 ಇಳಿಕೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ನಿಯಮವು ಹೊಸ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಉಳಿದ ತರಗತಿಗಳ ಕುರಿತು ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.

ಇನ್ನು 2025-26ನೇ ಸಾಲಿನ ಎಸ್​.​ಎಸ್.​​ಎಲ್.​ಸಿ ಪರೀಕ್ಷೆ ಮಾರ್ಚ್​​ 18ರಿಂದ ಆರಂಭವಾಗಿದ್ದು, ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಮಹಾವೀರ ಜಯಂತಿ ಹಿನ್ನೆಲೆ ಮಾ. 31ಕ್ಕೆ ಪರೀಕ್ಷೆ ಮುಂದೂಡಲಾಗಿದೆ.


Related Articles

Back to top button