Kannada NewsKarnataka NewsLatest

*ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ರುಂಡ ಕತ್ತರಿಸಿ ಹತ್ಯೆ ಪ್ರಕರಣ; ಆರೋಪಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ಪಾಸ್ ಆಗಿದ್ದ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಹತ್ಯೆಗೈದಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

Related Articles

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಊರಿಗೆ ಖುಷಿತಂದಿದ್ದ ವಿದ್ಯಾರ್ಥಿನಿ ಮೀನಾಳನ್ನು ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೋರ್ಲಬ್ಬಿ ಗ್ರಾಮದಲ್ಲಿ ನಿನ್ನೆ ನಡೆದಿತ್ತು.

ಪ್ರಕರಣ ಸಂಬಂಧ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಸೂರ್ಲಬ್ಬಿ ಗ್ರಾಮದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯಾರ್ಥಿನಿ ಮೀನಾಳ ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಆರೋಪಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪೊಲೀಸರಿಗೆ ಪತ್ತೆಯಾಗಿದೆ.

ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿದ್ದ ಖುಷಿಯಲ್ಲಿದ್ದ ಮೀನಾಳಿಗೆ ನಿನ್ನೆ ಮೇ 9ರಂದು ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಜೊತೆ ನಿಶ್ಚಿತಾರ್ಥವಾಗಿತ್ತು. ಅಪ್ರಾಪ್ತ ಬಾಲಕಿಗೆ ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಳಿಕ ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ವಾಪಾಸ್ ಆಗಿದ್ದರು. ಆರೋಪಿ ಓಂಕಾರಪ್ಪ ಕೂಡ ಮನೆಗೆ ತೆರಳಿದ್ದ. ಆದರೆ ಆನಂತರದಲ್ಲಿ ವಿದ್ಯಾರ್ಥಿನಿ ಮೀನಾಳ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ಆಕೆಯ ರುಂಡ ಕತ್ತರಿಸಿ ಕೊಲೆಗೈದು ಪರಾರಿಯಾಗಿದ್ದ.

ಕೊಲೆ ನಡೆದ ಜಾಗದಲ್ಲಿಯೇ ಕೃತ್ಯಕ್ಕೆ ಬಳಸಿದ್ದ ಮಚ್ಚು ಪತ್ತೆಯಾಗಿತ್ತು. ಪೊಲೀಸರು ಆರೋಪಿ ಬಂಧನಕ್ಕಾಗಿ ಶೋಧ ನಡೆಸಿದ್ದರು. ಆದರೆ ಈಗ ಮೀನಾಳ ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button