EducationKannada NewsKarnataka NewsPolitics

*ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಈ ವರ್ಷದಿಂದಲೇ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಮತ್ತು ಖಾಸಗಿ ಶಾಲೆಗಳು ಈ ನಿರ್ಧಾರವನ್ನು ವಿರೋಧಿಸುತ್ತಿರುವ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿ, ಈ ವರ್ಷದಿಂದಲೇ ತೃತೀಯ ಭಾಷೆ ಹಿಂದಿಯನ್ನು ಅಂಕಗಳಿಗೆ ಪರಿಗಣಿಸದೇ, ಎಸ್ ಎಸ್ ಎಲ್ ಸಿ ಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ . ಸರ್ಕಾರದ ಯಾವುದೇ ತೀರ್ಮಾನಕ್ಕೆ ಬೆಂಬಲ ಇಲ್ಲವೇ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ , ಆದರೆ ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದರು.

Home add -Advt

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದ್ದು, ಸೋಮವಾರದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ, ನಂತರ ಏಪ್ರಿಲ್ 5 ರಂದು ಕೇರಳ ರಾಜ್ಯದ ಚುನಾವಣೆಯ ಪ್ರಚಾರಕ್ಕೂ ತೆರಳುವುದಾಗಿ ತಿಳಿಸಿದರು. ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. ಇದು ನಮ್ಮ ಮುಂದಿನ ಗೆಲುವಿನ ದಿಕ್ಸೂಚಿಯಾಗಿದೆ. ದಾವಣೆಗೆರೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಉಪಚುನಾವಣೆಗೂ, ಸಿಎಂ ಸ್ಥಾನ ವಿಚಾರಕ್ಕೂ ಸಂಬಂಧವಿಲ್ಲ

ಈ ಉಪಚುನಾವಣೆಗಳ ಗೆಲುವು, ಸಿಎಂ ಸ್ಥಾನದಲ್ಲಿ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲಿದೆಯೇ ಎಂಬುದಕ್ಕೆ ಪ್ರತಿಕ್ರಯಿಸಿ, ಸಿಎಂ ಸ್ಥಾನ ವಿಚಾರಕ್ಕೂ , ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಪಕ್ಷದ ಹೈಕಮಾಂಡ್ ಅನುಮತಿಸಿದರೆ, ಇನ್ನೆರೆಡು ವರ್ಷವೂ ನಾನೇ ಬಜೆಟ್ ಮಂಡಿಸುತ್ತೇನೆ. ಹೈಕಮಾಂಡ್ ಸೂಚನೆಯ ಮೇರೆಗೆ ನಾವು ನಡೆಯುತ್ತೇವೆ ಎಂದರು.

ಡ್ರಗ್ಸ್ ದಂಧೆ: ತಪ್ಪಿತಸ್ಥರ ವಿರುದ್ಧ ಕ್ರಮ

ಮೈಸೂರಿನಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿರುವ ಬಗ್ಗೆ ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರಿನಲ್ಲಿ ಟ್ರಾಫಿಕ್ ಸಿಗ್ನಲ್ ಗಳು ಹೆಚ್ಚಿ, ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಬಗ್ಗೆ ಉತ್ತರಿಸಿ, ಟ್ರಾಫಿಕ್ ಸಿಗ್ನಲ್ ಗಳನ್ನು ಸುಗಮ ವಾಹನ ಸಂಚಾರಕ್ಕಾಗಿ ಅಳವಡಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Related Articles

Back to top button