
ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ. 2027ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಬರೆಯಲು ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ಅವಧಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವಿಸ್ತರಿಸಿದೆ.
ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿರುವ ಮಂಡಳಿಯು, ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಹಾಗೂ ವಿವಿಧ ವರ್ಗದ ಪುನರಾವರ್ತಿತ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಹೆಚ್ಚುವರಿ ಕಾಲಾವಕಾಶ ನೀಡಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಅರ್ಹ ವಿದ್ಯಾರ್ಥಿಗಳು, ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಖಾಸಗಿ ಅಭ್ಯರ್ಥಿಗಳು ಮತ್ತು ಎಲ್ಲಾ ವಿಧದ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಗೆ ಈ ಹಿಂದೆ ನವೆಂಬರ್ 11ರವರೆಗೆ ಕಾಲಾವಕಾಶ ನೀಡಲಾಗಿತ್ತು.
ಆದರೆ, ಕೆಲವು ಶಾಲೆಗಳು ಹಾಗೂ ಪೋಷಕರು ನೋಂದಣಿ ದಿನಾಂಕವನ್ನು ವಿಸ್ತರಿಸುವಂತೆ ಮಂಡಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೋಂದಣಿ ಅವಧಿಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ನವೆಂಬರ್ 30ರವರೆಗೆ ಪರೀಕ್ಷಾ ನೋಂದಣಿಗೆ ಅವಕಾಶ ನೀಡಲಾಗಿದೆ. ಶಾಲಾ ಲಾಗಿನ್ ಮೂಲಕ CCERF ವಿದ್ಯಾರ್ಥಿಗಳ ಮಾಹಿತಿಯನ್ನು ಮಂಡಳಿಯ ಜಾಲತಾಣಕ್ಕೆ ಅಪ್ಲೋಡ್ ಮಾಡಲು ನವೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಈ ಹಿಂದೆ ನವೆಂಬರ್ 11 ಕೊನೆಯ ದಿನವಾಗಿತ್ತು.
ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಗಾಗಿ ಚಲನ್ ಮುದ್ರಿಸಿಕೊಳ್ಳುವ ಅವಧಿಯನ್ನು ಡಿಸೆಂಬರ್ 1ರಿಂದ 5ರವರೆಗೆ ವಿಸ್ತರಿಸಲಾಗಿದೆ. ಮುದ್ರಿತ ಚಲನ್ ಮೂಲಕ ಬ್ಯಾಂಕ್ನಲ್ಲಿ ಪರೀಕ್ಷಾ ಶುಲ್ಕ ಜಮೆ ಮಾಡಲು ಡಿಸೆಂಬರ್ 1ರಿಂದ 7ರವರೆಗೆ ಕಾಲಾವಕಾಶ ನೀಡಲಾಗಿದೆ.
ಖಾಸಗಿ ಅಭ್ಯರ್ಥಿಗಳು (PF), ಶಾಲಾ ಪುನರಾವರ್ತಿತ ಅಭ್ಯರ್ಥಿಗಳು (CCERR) ಹಾಗೂ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು (PR) ಮಂಡಳಿಯ ಜಾಲತಾಣದ ಮೂಲಕ ನೋಂದಣಿ ಮಾಡಿಕೊಂಡು ಪರೀಕ್ಷಾ ಶುಲ್ಕ ಪಾವತಿಸಲು ನವೆಂಬರ್ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಖಾಸಗಿ ಅಭ್ಯರ್ಥಿಗಳ (PF) ಮಾಹಿತಿಯನ್ನು ಶಾಲಾ ಲಾಗಿನ್ ಮೂಲಕ ಪರಿಶೀಲಿಸಿ, ಶಾಲಾ ಮುಖ್ಯೋಪಾಧ್ಯಾಯರು ಅನುಮೋದನೆ ನೀಡಲು ಡಿಸೆಂಬರ್ 2ರವರೆಗೆ ಸಮಯಾವಕಾಶ ವಿಸ್ತರಿಸಲಾಗಿದೆ. ಈ ಹಿಂದೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ನವೆಂಬರ್ 13 ಕೊನೆಯ ದಿನವಾಗಿತ್ತು.
ವಿಸ್ತರಿಸಿರುವ ಅವಧಿಯೊಳಗೆ ಎಲ್ಲಾ ಅರ್ಹ ವಿದ್ಯಾರ್ಥಿಗಳ ನೋಂದಣಿ ಪೂರ್ಣಗೊಳಿಸುವಂತೆ ಮಂಡಳಿ ಸೂಚಿಸಿದೆ. ಈ ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯರ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತಂದು, ವಿಸ್ತರಿಸಿರುವ ಕಾಲಾವಕಾಶದ ಸದುಪಯೋಗ ಪಡೆಯುವಂತೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.



