*ಖಾಸಗಿ ಫೋಟೋ ವೈರಲ್ ಮಾಡೋದಾಗಿ ಬೆದರಿಕೆ*: *ಜೂನಿಯರ್ ಆರ್ಟಿಸ್ಟ್ ಮೇಲೆ ಮಾಜಿ ಪ್ರೇಮಿಯಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ದೂರವಾದ ಬಳಿಕ ಹಣದ ವಿಚಾರವಾಗಿ ಮತ್ತೆ ವಿವಾದ ಶುರುವಾಗಿದೆ. ಹಣ ವಾಪಸ್ ಕೇಳಿದ ಯುವತಿಗೆ ಮಾಜಿ ಪ್ರಿಯಕರನೇ ಬೆದರಿಕೆ ಹಾಕಿದ್ದಾನೆ. ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೆ, ಕಾರಿನ ಗಾಜು ಒಡೆದು ಹಲ್ಲೆ ನಡೆಸಿದ್ದಾನೆ ಎಂದು ಜೂನಿಯರ್ ಆರ್ಟಿಸ್ಟ್ ಆರೋಪ ಮಾಡಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂತ್ರಸ್ತೆ ಶರತ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಈ ವೇಳೆ ಆತನಿಗೆ ₹2 ಲಕ್ಷ ಹಣವನ್ನೂ ನೀಡಿದ್ದರು.
ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದರು. ಬಳಿಕ ಶರತ್ ಯುವತಿಯ ಸಂಪರ್ಕ ಕಡಿದುಕೊಂಡಿದ್ದ ಎನ್ನಲಾಗಿದೆ. ನವೆಂಬರ್ 4ರಂದು ಮತ್ತೆ ಶರತ್ ಸಿಕ್ಕಾಗ, ತಾನು ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಯುವತಿ ಕೇಳಿದ್ದಾರೆ. ಈ ವೇಳೆ ಶರತ್ ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಯುವತಿಯ ಕಾರಿನ ಗಾಜು ಒಡೆದು ಹಲ್ಲೆ ನಡೆಸಿದ್ದಾನೆ. ಜೊತೆಗೆ ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಸಂತ್ರಸ್ತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ.



