CrimeKannada NewsKarnataka NewsLatest

*4 ಕೋಟಿ ಆಸ್ತಿಯ ಆಸೆ ತೋರಿಸಿ ಮಗಳ ಬ್ರೈನ್‌ವಾಷ್*: *ಏಳು ಕೊಲೆ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಯಲು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ನಡೆದಿದ್ದು ಏಳು ಮಂದಿ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿಗಳು ಬಯಲಾಗ್ತಿದ್ದು ಇದೀಗ ಮತ್ತೊಂದು ವಿಚಾರ ವಿಚಾರಣೆ ವೇಳೆ ಹೊರ  ಬಿದ್ದಿದೆ. ಕೋಟ್ಯಂತರ ರೂಪಾಯಿ ಆಸ್ತಿಯ ಆಸೆ ತೋರಿಸಿ ಸ್ವಂತ ಮಗಳನ್ನೇ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಭಾಗಿಯಾಗುವಂತೆ ತಂದೆ ಬ್ರೈನ್‌ವಾಷ್‌ ಮಾಡಿದ್ದಾನೆ ಎಂಬ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪತ್ನಿಯ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆಯನ್ನು ರಾಜಾಜಿನಗರ ಪೊಲೀಸರು ಚುರುಕುಗೊಳಿಸಿದ್ದಾರೆ. ಆರೋಪಿ ಇಂದುಶೇಖರ್‌ನ ವಿಚಾರಣೆ ವೇಳೆ ಕೊಲೆ ಹಿಂದಿನ ಹಲವು ವಿಚಾರಗಳು ಬಯಲಾಗುತ್ತಿವೆ.

ಶ್ರೀರಾಂಪುರದಲ್ಲಿರುವ ಅಜ್ಜಿಯ 3ರಿಂದ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮೇಲೆ ಇಂದುಶೇಖರ್ ಕಣ್ಣಿಟ್ಟಿದ್ದ ಎನ್ನಲಾಗಿದೆ. ಅತ್ತೆ-ಮಾವ ಹಾಗೂ ಕುಟುಂಬದ ಇತರರು ಬದುಕಿದ್ದರೆ ಆಸ್ತಿಯಲ್ಲಿ ಅವರಿಗೆ ಪಾಲು ನೀಡಬೇಕಾಗುತ್ತದೆ. ಎಲ್ಲರನ್ನೂ ಮುಗಿಸಿದರೆ ಯಾರಿಗೂ ಪಾಲು ಕೊಡಬೇಕಾಗಿಲ್ಲ ಎಂದು ಮಗಳಿಗೆ ಹೇಳಿ ಆಕೆಯ ಮನಸ್ಸಿನಲ್ಲಿ ಆಸ್ತಿ ಆಸೆ ಹುಟ್ಟಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ತಂದೆಯ ಮಾತನ್ನೇ ನಂಬಿದ್ದ ಮಗಳು, ಆತ ನಡೆಸಿದ ಕೃತ್ಯಗಳಿಗೆ ಸಹಕರಿಸಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಏಳು ಮಂದಿಯ ಹತ್ಯೆಯಲ್ಲಿ ಮಾತ್ರವಲ್ಲದೆ, ಕೊಲೆಯ ಬಳಿಕ ಮೃತದೇಹಗಳನ್ನು ಸಾಗಿಸುವ ಕೆಲಸದಲ್ಲಿಯೂ ಆಕೆ ನೆರವಾಗಿದ್ದಾಳೆ ಎಂಬ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಇಂದುಶೇಖರ್ ಮತ್ತು ಆತನ ಮಗಳು ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹತ್ಯೆಗೆ ರೂಪಿಸಿದ ಸಂಚು, ಮಗಳ ಪಾತ್ರ ಹಾಗೂ ಕೊಲೆಯ ಹಿಂದಿನ ಇತರ ಕಾರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related Articles

Back to top button