ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ – ಸರಕಾರಿ ನೌಕರರಿಗೆ ಉತ್ತಮ ಕೆಲಸ ನಿರ್ವಹಣೆಗಾಗಿ ಕೊಡಮಾಡುವ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬೆಳಗಾವಿಯ ಕೃಷಿ ಇಲಾಖೆ ಉಪ ನಿರ್ದೇಶಕ ಎಸ್. ಬಿ. ಕೊಂಗವಾಡ ಅವರು ಪಾತ್ರರಾಗಿದ್ದಾರೆ.
ಸೆ. 6 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಗದಗ ಜಿಲ್ಲೆಯ ಗಾವರವಾಡ ಮೂಲದವರಾದ ಎಸ್. ಬಿ. ಕೊಂಗವಾಡ ಅವರು ಧಾರವಾಡದ ಕೃಷಿ ವಿವಿಯಲ್ಲಿ ಎಂಎಸ್ಸಿ ಓದಿದ್ದಾರೆ. 2003ರಲ್ಲಿ ಹುಕ್ಕೇರಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದರು.
2009 ರಿಂದ 2011ರವರೆಗೆ ಅರಬಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅವರು 2014 ರಲ್ಲಿ ಕೃಷಿ ಉಪ ನಿರ್ದೇಶಕರಾಗಿ ಪದೋನ್ನತಿ ಹೊಂದಿದರು. ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಅವರು ಕಳೆದ ಜುಲೈ ತಿಂಗಳಲ್ಲಿ ಬೆಳಗಾವಿಗೆ ವರ್ಗಾವಣೆಗೊಂಡಿದ್ದಾರೆ.
ಬಾಗಲಕೋಟೆಯಲ್ಲಿ ನರೇಗಾ ಯೋಜನೆಯ ಯಶಸ್ವಿ ಅನುಷ್ಟಾನ, 2020-21ರಲ್ಲಿ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ 2021, ರಾಜ್ಯ ಕೃಷಿ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆ ಭಾಜನವಾಗುವಲ್ಲಿ ಎಸ್. ಬಿ. ಕೊಂಗವಾಡ ಅವರ ಕೊಡುಗೆ ಮಹತ್ವದ್ದಾಗಿದೆ.
ಅಲ್ಲದೇ ಫ್ರುಟ್ಸ್ ಪೋರ್ಟಲ್ ನಲ್ಲಿ ಹೆಚ್ಚು ರೈತರ ನೋಂದಣಿ ಮಾಡಿಸುವಲ್ಲಿ ಅವರು ಅಪಾರ ಶ್ರಮ ವಹಿಸಿದ್ದಾರೆ. ಎಸ್. ಬಿ. ಕೊಂಗವಾಡ ಅವರ ಕ್ರಿಯಾಶೀಲತೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ