Kannada NewsKarnataka News

ಬೆಳಗಾವಿಯಲ್ಲಿ ಸೆ. 24ರಂದು ರಾಜ್ಯ ಕಾಂಗ್ರೆಸ್ ಪ್ರತಿಭಟನೆ, ಯಾವ ಕಾರಣಕ್ಕೆ?

ಬೆಳಗಾವಿಯಲ್ಲಿ ಸೆ. 24ರಂದು ರಾಜ್ಯ ಕಾಂಗ್ರೆಸ್ ಪ್ರತಿಭಟನೆ, ಯಾವ ಕಾರಣಕ್ಕೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕಳೆದ ತಿಂಗಳು ಭಾರಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಒಂದೂವರೆ ತಿಂಗಳಾಗುತ್ತ ಬಂದರೂ ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ರಾಜ್ಯಸರಕಾರವೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಇನ್ನೂ ಪರಿಹಾರ ಸಿಗದೆ ಜನರು ಕಂಗಾಲಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬುಧವಾರ ಬೆಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಫಲವಾದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿದೆ. ಶಾಸಕಾಂಗ ಸಭೆಯ ನಂತರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಉಪಚುನಾವಣೆಗೆ ಅಸ್ತ್ರ

ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಪ್ರವಾಹ ಸಂತ್ರಸ್ತರಿಗೆ ಬಿಜೆಪಿ ಸರಕಾರ ಪರಿಹಾರ ನೀಡುವಲ್ಲಿ ಎಡವಿರುವ ವಿಷಯವನ್ನೇ ಕಾಂಗ್ರೆಸ್ ಉಪಚುನಾವಣೆಗೆ ಅಸ್ತ್ರವನ್ನಾಗಿಸಲು ನಿರ್ಧರಿಸಿದಂತಿದೆ.

ಈ ಹಿನ್ನೆಲೆಯಲ್ಲಿ ಇದೇ 24ರಂದು ಪ್ರವಾಹ ಪರಿಹಾರ ವಿಷಯವನ್ನೇ ಇಟ್ಟುಕೊಂಡು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. ರಾಜ್ಯ ಕಾಂಗ್ರೆಸ್ ವತಿಯಿಂದ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಧಿವೇಶನ ನಡೆಸಬೇಕಿತ್ತು

ಪ್ರತಿವರ್ಷ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ರೂಢಿ. ಆದರೆ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನವಿಲ್ಲ ಎಂದು ಸರಕಾರ ತಿಳಿಸಿದೆ. ಬೆಳಗಾವಿ ಜಿಲ್ಲಾಡಳಿತ ಪ್ರವಾಹ ಪರಿಹಾರ ಕಾರ್ಯದಲ್ಲಿ ನಿರತವಾಗಿರುವುದರಿಂದ ಅಧಿವೇಶನ ಸಿದ್ಧತೆ ಸಾಧ್ಯವಿಲ್ಲ ಎನ್ನುವ ನೆಪವನ್ನು ಮುಂದೆ ಮಾಡಿದೆ.

ಇದೇ ವಿಷಯವನ್ನು ಸಿದ್ದರಾಮಯ್ಯ ಎತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ. ಅಲ್ಲೇ ಅಧಿವೇಶನ ನಡೆಸಿ ಸಂತ್ರಸ್ತರ ಸಮಸ್ಯೆಗಳ ಕುರಿತು ಚರ್ಚಿಸಬೇಕಿತ್ತು. ಆದರೆ ಸರಕಾರಕ್ಕೆ ಭಯ ಉಂಟಾಗಿದೆ. ಹಾಗಾಗಿ ಬೆಳಗಾವಿ ಅಧಿವೇಶನ ರದ್ಧುಪಡಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪ್ರವಾಹ ಪರಿಹಾರ ಕಾಮಗಾರಿ ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದ ಸರಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ ಎನ್ನುವುದು ಸಿದ್ದರಾಮಯ್ಯ ಆರೋಪ. ಹಾಗಾಗಿ ಸೇ.24ರಂದು ಬೆಳಗಾವಿಯಲ್ಲಿ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button