Belagavi NewsBelgaum NewsKannada NewsKarnataka NewsNationalPolitics

ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡು ಎಸ್ಸಿ ಎಸ್ಟಿಯವರಿಗೆ ಮೋಸ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. 

ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿ ಆಗಿರೋದು ಪ್ರತಿ ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು  ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ

ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. ಎಸ್ ಸಿ ಎಸ್ ಟಿ ಸಮುದಾಯಗಳಿಗೆ 14000 ಕೋಟಿ ರೂಪಾಯಿ ಅನುದಾನ ಬಳಕೆ ಆಗಬೇಕಿತ್ತು. ಎಲ್ಲಾ ಹಣ ಗ್ಯಾರಂಟಿಗಳಿಗೆ ಹೋಗುತ್ತಿದೆ. ಎಸ್ ಸಿ ಎಸ್ ಟಿ ಜನಕ್ಕೂ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ‌ನವರು ಹೇಳುತ್ತಾರೆ. ಆದರೆ, ಕಾನೂನಿನಲ್ಲಿ ಅನುದಾನ ಎಸ್ ಸಿ ಎಸ್ ಟಿ ಗಳಿಗೆ ಹೋಗಬೇಕು ಅಂತ ಇದೆ. ಆ ಕಾನೂನು ಉಲ್ಲಂಘನೆ ಆಗಿದೆ ಎಸ್ ಸಿ ಎಸ್ ಟಿ ಗಳಿಗೆ ಮೀಸಲಿಟ್ಟ ಹಣ ಎಸ್ ಸಿ ಎಸ್ ಟಿ ಗಳಿಗೇ ಬಳಸುತ್ತೇವೆ ಅಂತ ಚುನಾವಣೆ ಮೊದಲು ಹೇಳಿದ್ದರು. 

ಕಾಂಗ್ರೆಸ್ ನವರು ಓಟಿಗಾಗಿ ಮಾಡಿದ ಯೋಜನೆಗಳಿಗೆ ಎಸ್ ಸಿ ಎಸ್ ಟಿ ಹಣ ಬಳಸುತ್ರಿದ್ದಾರೆ. ಎಸ್ ಸಿ ಎಸ್ ಟಿ ಗಳಿಗೆ ಸರ್ಕಾರ ಮೋಸ ಮಾಡುತ್ತಿದೆ. ಸರ್ಕಾರ ಸುಭದ್ರವಾಗಿದ್ದರೆ ಅವರ ಹಣಕ್ಕೆ ಯಾಕೆ ಕೈ ಹಾಕಿದ್ದಾರೆ. ವಾಲ್ಮೀಕಿ ನಿಗಮದ ಹಣ ಕೂಡಾ ಲೂಟಿ ಮಾಡಿದ್ದಾರೆ. ಎಸ್ ಸಿ ಎಸ್ ಟಿ , ಒಬಿಸಿ ಜನರಿಗೆ ರಾಜ್ಯ ಸರ್ಕಾರ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಮುಚ್ಚಿಡುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ ಹುಬ್ಬಳ್ಳಿಗೆ ಹೋಗಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪಿದರೂ ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.

ಡೆಂಗ್ಯೂ ಹೆಚ್ಚಾಗುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ ಆದರೆ, ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೋಗಿಗಳು ಪರದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿವೆ. ಈಗಾಗಲೇ ಹಲವಾರು ಸಾವು ಆಗಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಡೆಂಗ್ಯೂ ಸಾವು ಹಾವೇರಿಯಲ್ಲಿ ಆಗಿದೆ. ಕೂಡಲೇ ಡಿ.ಹೆಚ್ ಒ ವರ್ಗಾವಣೆ ಮಾಡಬೇಕು. ಸಮರ್ಥ ಡಿ.ಹೆಚ್ ಒ ಹಾಕಬೇಕು ಯಾರನ್ನೂ ವಾಪಾಸ್ ಕಳಿಸದೇ ಚಿಕಿತ್ಸೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಚರ್ಚೆ

ನಾನು ಸಂಸತ್ ಅಧಿವೇಶನಕ್ಕೆ ತೆರಳಿದ್ದಾಗ ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಚರ್ಚಿಸಲು ಅವರು ಮುಂದಿನ ವಾರ ವಿಶೇಷವಾದ ಸಮಯ ನೀಡಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿರುವ ಎನ್ ಎಚ್ 4 ಕಾಮಗಾರಿ ಹಾಗೂ ಹಾನಗಲ್, ಶಿಗ್ಗಾವಿ, ಸವಣೂರು, ಲಕ್ಷ್ಮೇಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ಮಾಣ, ಆರ್ ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ಹೇಳಿದರು.

ಇನ್ನು ಕೇಂದ್ರ ರೈಲ್ವೆ ಸಚಿವ  ಅಶ್ವಿನಿ ವೈಷ್ಣವ್ ಅವರ ಜೊತೆಗೆ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಿದ್ದು, ಇದಕ್ಕೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದ್ದು, ಈ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಯೋಜನೆ ಹಾಗೂ ಯಲವಿಗಿ ಗದಗ ರೈಲು ಯೋಜನೆಯನ್ನು ಪ್ರಾರಂಭ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. 

ಶಿಗ್ಗಾವಿಯಲ್ಲಿ ಜುಲೈ 12 ರಿಂದ ಧನ್ಯವಾದ ಯಾತ್ರೆ

ಶಿಗ್ಗಾವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ‌ಸಮಿತಿ ಮಾಡಿದ್ದೇವೆ. ಪಕ್ಷ ಸಮೀಕ್ಷೆ ಮಾಡಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ನನ್ನ ಮೇಲೆ  ಶಿಗ್ಗಾವಿ ಜನರ ಋಣ ಇದೆ. ರಾಜಕೀಯವಾಗಿ ಬೆಳೆಯಲು ಮಹಾ ಜನತೆ ಆಶೀರ್ವಾದ ಇದೆ. ಇದಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಜನತೆಗೆ ಕೃತಜ್ಞತೆ ಹೇಳಬೇಕು ಅಂತ ಇದೆ. ರಾಜಕೀಯ ಮೀರಿ ಈ ಕ್ಷೇತ್ರದ ಜನರ ಜೊತೆಗೆ ಅನೋನ್ಯತೆ ಇದೆ. ಬರುವ ಜುಲೈ 12 ನೇ ತಾರೀಖಿನಿಂದ ಹಂತ ಹಂತವಾಗಿ ಧನ್ಯವಾದ ಯಾತ್ರೆ ಮಾಡುತ್ತೇನೆ.  ಪ್ರತಿ‌ ಗ್ರಾಮದ ಜನರನ್ನು ಭೇಟಿಯಾಗಿ‌ ಧನ್ಯವಾದ ಹೇಳುತ್ತೇನೆ. ಈ‌ ಮೂಲಕ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದರು. 

ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮುನ್ನಡೆಯಾಗಿರುವ ಕುರಿತು ಮಾತನಾಡಿದ ಅವರು,  ಲೋಕಸಭೆ ಚುನಾವಣೆಯಲ್ಲಿ ನಮಗೆ 9000 ಮತಗಳ ಹಿನ್ನಡೆ ಆಗಿರುವುದು  ತಾತ್ಕಾಲಿಕ ಅದನ್ನು  ಸರಿದುಗಿಸುತ್ತೇನೆ. ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 36000 ಮತಗಳು ಲೀಡ್ ಬಂದಿದೆ ಹಾಗೆ ಮತ್ತೆ ಉಪ ಚುನಾವಣೆಯಲ್ಲಿ ಲೀಡ್ ತೆಗೆದುಕೊಳ್ಳುತ್ತೇವೆ ಎಂದರು.

ಇಡೀ ಸರ್ಕಾರವೇ ಬಂದು ಶಿಗ್ಗಾವಿ ಉಪಚುನಾವಣೆ ಮಾಡುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅದನ್ನು ಸ್ವಾಗತ ಮಾಡುತ್ತೇನೆ. ಶಿಗ್ಗಾವಿ ತಾಲೂಕಿನ ಮತದಾರರು ಪ್ರಭುದ್ದರಾಗಿದ್ದಾರೆ. ಕಾಂಗ್ರೆಸ್ ರಾಜಕಾರಣ ನೋಡಿ ನನಗೆ ಮನೋರಂಜನೆ ಆಗುತ್ತಿದೆ. ಇಲ್ಲಿ ಕಾಂಗ್ರೆಸ್ ನಿಂದ ಪೋಸ್ಟರ್ ಭರಾಟೆ ನಡೆದಿದೆ. ಇಲ್ಲಿ ಪೋಸ್ಟರ್ ಹಾಕಿದವರು ಹಂಗೆ ಮನೆಗೆ ಹೋಗಿದ್ದಾರೆ. ಇಲ್ಲಿ ನಾನು ಪೋಸ್ಟರ್ ರಾಜಕೀಯ ಮಾಡಿಲ್ಲ. ಘೋಡಾ ಹೈ ಮೈದಾನ್ ಹೈ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಭರತ್ ಬೊಮ್ಮಾಯಿ ಸ್ಪರ್ಧೆ ಬಗ್ಗೆ ಅಧೀಕೃತ ಚರ್ಚೆ ಆಗಿಲ್ಲ ಹೀಗಾಗಿ ಮಹತ್ವ ಕೊಡುವ ಅಗತ್ಯ ಇಲ್ಲ. ವೀಕ್ಷಕರು ಬಂದಾಗ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಆದರೆ, ನಾನೇ ಇಲ್ಲಿ ಎಲೆಕ್ಷನ್ ಗೆ ನಿಂತ ಹಾಗೆ, ಯಾರೇ ಅಭ್ಯರ್ಥಿ ಆದರೂ ನಾನು  ಸ್ಪರ್ದೆ ಮಾಡಿದಾಗಿನಿಗಿಂತ ಹೆಚ್ಚಾಗಿ ಶ್ರಮ ಹಾಕಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button