ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಕರ್ನಾಟಕ ರಾಜ್ಯ ಜೈನ್ ನೌಕರರ ಒಕ್ಕೂಟದ ಪ್ರಥಮ ರಾಜ್ಯ ಮಟ್ಟದ ಸಮಾವೇಶ ಇದೇ ನವ್ಹೆಂಬರ ೩ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಬೆಳಗಾವಿ ನಗರದ ಧರ್ಮನಾಥ ಭವನದಲ್ಲಿ ನಡೆಯಲಿದೆ.
ದಕ್ಷಿಣ ಭಾರತ ಜೈನ್ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ , ಆರ್ಥಿಕ ಮತ್ತು ಸಾಖ್ಯಿಕ ಇಲಾಖೆಯ ನಿವೃತ್ತ ನಿರ್ದೇಶಕರಾದ ಬಿ. ಪ್ರಸನ್ನಯ್ಯ ,ಭರತೇಶ ಶಿಕ್ಷಣ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಮತ್ತು ಸದಸ್ಯರಾದ ವಿನೋದ ದೊಡ್ಡಣ್ಣವರ ಇವರು ಪ್ರಥಮ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಸುರೇಂದ್ರಕುಮಾರ ಹೆಗ್ಗಡೆ ಅವರು ಸಮಾವೇಶದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಜೈನ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕರಾದ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ಕಲ್ಲಪ್ಪಣ್ಣಾ ಮಗೆನ್ನವರ, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ಅಧಿಕಾರಿ ಮನೋಜ ಜೈನ, ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಫ್‌ಎಸ್ ಅಧಿಕಾರಿ ವಿಜಯಕುಮಾರ ಗೋಗಿ, ಮೈಸೂರು ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಐಎಫ್‌ಎಸ್ ಅಧಿಕಾರಿ ಅಜೀತ ಕುಲಕರ್ಣಿ, ಬೆಂಗಳೂರು ಎಸಿಬಿ ಎಸ್‌ಪಿ ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾಂವಿ , ಬಳ್ಳಾರಿಯ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಸಿದ್ದು ಅಲಗೂರ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರಾದ ವಿಜಯಕುಮಾರ ಕುಚನೂರೆ ಇವರು ಆಗಮಿಸಲಿದ್ದಾರೆ.
ಈ ಸಮಾರಂಭದಲ್ಲಿ ಕೆಎಎಸ್ ಅಧಿಕಾರಿಗಳಾದ ಪ್ರೀತಂ ನಸಲಾಪೂರೆ, ಪ್ರವೀಣ ಜೈನ, ಸಿದ್ದು ಹುಲ್ಲೋಳ್ಳಿ, ಪ್ರವಿತ್ರಾ ಪಾಟೀಲ, ಯಶೋಧಾ ಹೊಸುರ ,ಚಿಕ್ಕೊಡಿ ಕ್ಷೇತ್ರ ಶೀಕ್ಷಣಾಧಿಕಾರಿ ಬಿ.ಎ.ಮೆಲಕಮರಡಿ, ವಿಜಯಪೂರದ ಶಿಶು ಅಭಿವೃದ್ದಿ ಯೋಜನಾಧಿಕಾರಿ ನಿರ್ಮಲಾ ಸುರಪೂರ , ಮೂಡಬಿದರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ ಇವರನ್ನು ಸನ್ಮಾನಿಸಲಾಗುವುದು.
ಜೈನ ಸಮಾಜದ ಜೈನ ಡೈರೆಕ್ಟರಿ ಹೊರತರುವುದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೈನ ಸಂಘಟನೆಗಳನ್ನು ಬಲಪಡಿಸುವುದು, ಜೈನ ಅಭಿವೃದ್ದಿ ಮಂಡಳಿ ರಚನೆಗಾಗಿ ಒತ್ತಾಯ, ಜೈನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಲು ಒತ್ತಾಯಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು,ಜೈನರ ಪುಣ್ಯ ಕ್ಷೇತ್ರವಾದ ಸಮ್ಮೇದ ಶಿಖರಜಿ ಯಾತ್ರೆ ಕೈಗೊಳ್ಳಲು ಅನುದಾನ ನೀಡುವುದು, ಉನ್ನತ ಶಿಕ್ಷಣದ ಮಾಹಿತಿ, ಶಿಷ್ಯವೇತನ, ಸಾಲದ ಬಗ್ಗೆ ಅರಿವು ಮೂಡಿಸುವುದು. ಧಾರ್ಮಿಕ ಶಿಬಿರಗಳ ಮೂಲಕ ಧಾರ್ಮಿಕ ಸಂಸ್ಕಾರ ನೀಡುವುದು, ಜೈನ ಬಾಲ ಬೋಧೆಗಳನ್ನು ಇಂಗ್ಲೀಷಕ್ಕೆ ಭಾಷಾಂತರಿಸಿ ಅನ್ಯ ಭಾಷಿಕರಿಗೆ ಜೈನ ಧರ್ಮದ ತತ್ವಗಳನ್ನು ಪರಿಚಯಿಸುವುದು, ನೌಕರರ ಕಾನೂನು ತೊಡಕುಗಳಿಗೆ ನೆರವು.
ಸಮಾಜವನ್ನು ಪ್ರವರ್ಗ-೨ಎ ಗೆ ಸೇರಿಸುವುದು, ಮಹಾಮಸ್ತಾಭಿಷೇಕದಲ್ಲಿ ಭಾಗವಹಿಸಲು ಜೈನ ಸರ್ಕಾರಿ ನೌಕರರಿಗೆ ಓ.ಓ.ಡಿ. ಸೌಲಭ್ಯ ನೀಡಲು ಒತ್ತಾಯಿಸುವುದು ಇವುಗಳು ಒಕ್ಕೂಟದ ಮುಖ್ಯ ಉದ್ದೇಶಗಳಾಗಿವೆ ಎಂದು ಕರ್ನಾಟಕ ರಾಜ್ಯ ಜೈನ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಅರುಣ ಎಸ್.ಯಲಗುದ್ರಿ ಮತ್ತು ಕಾರ್ಯಾಧ್ಯಕ್ಷರಾದ ಡಾ. ಅಜೀತ ಮುರುಗುಂಡೆ ಅವರು ಪ್ರತಿಕಾ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಸ್ವಸ್ತಿ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ
ಜೈನ ಧರ್ಮದ ಪ್ರಥಮಾಚಾರ್ಯ ಎಂಬ ಖ್ಯಾತಿಗೆ ಪಾತ್ರರಾದ ಆಚಾರ್ಯ ಶ್ರೀ. ಶಾಂತಿಸಾಗರ ಮುನಿಗಳ ಜೀವನಾಧಾರಿತ ಸ್ವಸ್ತಿ ಚಲನಚಿತ್ರವನ್ನು ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಾಗಿದೆ ಎಂದು ಮಾಜಿ ಶಾಸಕರಾದ ಸಂಜಯ ಪಾಟೀಲ ಹೇಳಿದರು.
ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಸ್ವಸ್ತಿ ಚಲನಚಿತ್ರದ ಪ್ರಾಯೋಗಿಕ ಪ್ರದರ್ಶನವನ್ನು ವೀಕ್ಷಿಸಿ ಬಳಿಕ ಚಿತ್ರ ರಸಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳ ಬಗ್ಗೆ ಗ್ರಂಥಗಳಲ್ಲಿ ಕೇಳಿ ತಿಳಿದುಕೊಂಡಿದ್ಧೇವು. ಆದರೆ ಇದೀಗ ಅವರ ಜೀವನಾಧಾರಿತ ಚಲನಚಿತ್ರ ಮೂಡಿ ಬರುತ್ತಿರುವದು ಸಂತಸದ ಸಂಗತಿಯಾಗಿದೆ. ಸಂಪೂರ್ಣ ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ ಮತ್ತು ಅಹಿಂಸೆಯನ್ನು ಪ್ರತಿಪಾದಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಖ್ಯಾತಿ ಆಚಾರ್ಯ ಶಾಂತಿಸಾಗರ ಅವರಿಗೆ ಸಲ್ಲುತ್ತದೆ. ಹಾಗಾಗಿ ಜೈನರು ಸೇರಿದಂತೆ ಎಲ್ಲ ಜಾತಿ ಜನಾಂಗದವರು ನೋಡಲೇಬೇಕಾದ ಚಿತ್ರ ಇದಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಚಲನ ಚಿತ್ರದ ಕಥೆ-ಚತ್ರಕಥೆ ಸಂಭಾಷಣೆ ನಿರ್ಮಾಪಕ ಹಾಗೂ ನಿರ್ದೇಶಕದ ಹೊಣೆಯನ್ನು ಹೊತ್ತಿರುವ ರಾಜು ಪಾಟೀಲ ಅವರು ಮಾತನಾಡಿ, ಜೈನ ಪರಂಪರೆಯು ಮುರಿದು ಬೀಳುತ್ತಿದ್ದ ಸಮಯದಲ್ಲಿ ದಿಗಂಬರ ದೀಕ್ಷೆಯನ್ನು ಸ್ವೀಕರಿಸಿ, ಮುನಿಚರ್ಯ, ಮುನಿಗಳ ಆಚಾರ-ವಿಚಾರ ಹಾಗೂ ದಿಗಂಬರತ್ವದ ಮಹತ್ವವನ್ನು ಸಾರು ಹೇಳಿದ ೨೦ನೇಯ ಶತಮಾನದ ಪ್ರಥಮಾಚಾರ್ಯ ಆಚಾರ್ಯ ಶ್ರೀ ೧೦೮ ಶಾಂತಿ ಸಾಗರ ಮುನಿಮಹಾರಾಜರ ಜೀವನಾಧಾರಿತವು ಈ ಚಿತ್ರದ ಕಥೆಯ ಹಂದರವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೋಜ ಗ್ರಾಮದವರಾಗಿದ್ದ ಆಚಾರ್ಯ ಶಾಂತಿಸಾಗರ ಮಹಾರಾಜರ ಹೆಸರು ಸಾತಗೌಡ. ತಂದೆ ಭೀಮಗೌಡ, ತಾಯಿ ಸತ್ಯವತಿ, ೧೮೭೨ ರಿಂದ ೧೯೫೫ ರ ವರೆಗೆ ನಡೆಯುವ ಈ ಚಿತ್ರದಲ್ಲಿ ಶಾಂತಿಸಾಗರ ಮಹಾರಾಜರ ಪಾತ್ರದಲ್ಲಿ ರಾಜು ಪಾಟೀಲ್, ಜಯಕುಮಾರ್ (ಜೂ ರಾಜಕುಮಾರ, ರಾಜ್ಯ ಪ್ರಶಸ್ತಿ ವಿಜೇತ) ಹಾಸ್ಯನಟ ಬಿರಾದಾರ, ಡಿಂಗ್ರಿ ನಾಗರಾಜ್, ಪೋಷಕ ನಟ ದತ್ತಣ್ಣ, ಶಂಕರ ಪಾಟೀಲ್, ಶೃಂಗೇರಿ ರಾಮಣ್ಣ ಹಾಗೂ ಕೆ.ಎಲ್ ಕುಂದರಗಿ ಕಲಾವಿದರು ನಟಿಸಿರುತ್ತಾರೆ. ಅದರಂತೆ ಪ್ರಾತ್ರಗಳಲ್ಲಿ ವಿದ್ಯಾ, ಮಾಧುರಿ, ಶೃತಿ ಮತ್ತಿತರರು ನಟಿಸಿರುತ್ತಾರೆ ಎಂದು ಅವರು ತಿಳಿಸಿದರು.
ಈ ಚಿತ್ರದ ಚಿತ್ರೀಕರಣವು ಶ್ರವಣಬೆಳಗೊಳ, ತುಮಕೂರು, ಶಿವಮೊಗ್ಗ, ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಕುಡಚಿ ನಂದಗಾಂವ ಭದ್ರಗಿರಿ (ಹಳಿಂಗಳ) ಹಾಗೂ ಮಹಾರಾಷ್ಟ್ರದ ಸಾತಾರದಲ್ಲಿ ನಡೆದಿರುತ್ತದೆ ಎಂದು ಹೇಳಿದ ಅವರು ’ಸ್ವಸ್ತಿ’ ಚಲನಚಿತ್ರವು ಡಿಸೆಂಬರ ೬ರಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮಾಜಿ ಶಾಸಕ ವೀರಕುಮಾರ ಪಾಟೀಲ, ಸಾಂಗಿಲಿ ಮಾಜಿ ಮಹಾಪೌರ ಸುರೇಶ ಪಾಟೀಲ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಬಾಳಾಸಾಹೇಬ ಲೋಕಾಪೂರ, ಅಮರ ದುರ್ಗನ್ನವರ, ಡಿ.ಸಿ.ಸದಲಗೆ, ಕಿರಣ ಪಾಟೀಲ, ರಾಜೀವ ದೊಡ್ಡಣ್ಣವರ, ವಿನೋದ ದೊಡ್ಡಣ್ಣವರ, ಎಂ.ಎ.ಗಣೆ, ಅರುಣ ಎಸ್.ಯಲಗುದ್ರಿ, ಚಂದ್ರಕಾಂತ ಭೋಜೆ ಪಾಟೀಲ, ಸುನಿಲ ಹನಮಣ್ಣವರ ಸುಕುಮಾರ ಬನ್ನೂರೆ, ಕುಂತಿನಾಥ ಕಲಮನಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ